ಮೂಡುಬಿದಿರೆ : ಮನೆಯವರು ಹೊರಗಡೆ ಬಾರದಂತೆ ಎದುರಿನ ಬಾಗಿಲಿಗೆ ಬೀಗ ಹಾಕಿ ಹಟ್ಟಿಯಿಂದ ಅಕ್ರಮವಾಗಿ ದನವನ್ನು ಕದ್ದುಕೊಂಡು ಹೋದ ಘಟನೆ ಮಂಗಳವಾರ ರಾತ್ರಿ ಕಲ್ಲಮುಂಡ್ಕೂರಿನಲ್ಲಿ ನಡೆದಿದೆ. ತೊಡಂಕಿಲದ ಹರೀಶ್ ಪೂಜಾರಿ ಎಂಬವರ ಮನೆಯ ದನವನ್ನು ಗೋಕಳ್ಳರು ಮನೆಯವರನ್ನೇ ಬೆದರಿಸಿ ಹೊತ್ತೊಯ್ದಿದ್ದಾರೆ.

ಮಂಗಳವಾರ ರಾತ್ರಿ 11 ಗಂಟೆ ವೇಳೆ ನಾಯಿ ಬೊಗಳಿದ ಶಬ್ದ ಕೇಳಿ ಹರೀಶ್ ಪೂಜಾರಿ ಹೊರಗೆ ಬಂದಾಗ ದೂರದಲ್ಲಿ ವಾಹನವೊಂದು ನಿಂತಿತ್ತು. ಅದರ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ನೇರ ಮುಖಕ್ಕೆ ಟಾರ್ಚ್ ಲೈಟ್ ಹಾಕಿ ‘ಇಲ್ಲಿ ಶೇಖರ್‍ನ ಇಲ್ಲ್ ಒಲ್ಪ’ ಎಂದು ಪ್ರಶ್ನಿಸಿದ್ದಾರೆ. ಅವರ ವರ್ತನೆಯಿಂದ ಅನುಮಾನಗೊಂಡ ಹರೀಶ್ ಅವರು ನೀವ್ಯಾರು ಎಂದು ಪ್ರಶ್ನಿಸಿದ್ದಾರೆ. ಅದಾಗಲೇ ಅಲ್ಲಿದ್ದವರು ಗಾಡಿಯನ್ನು ಸ್ಟಾರ್ಟ್ ಮಾಡಿ ಹಿಂತಿರುಗಿ ಹೋದರೆನ್ನಲಾಗಿದೆ.

ನಂತರ ಹರೀಶ್ ಪೂಜಾರಿ ಅವರು ತಮ್ಮ ಹಟ್ಟಿಯಲ್ಲಿದ್ದ ನಾಲ್ಕು ದನಗಳಲ್ಲಿ ಮೂರು ದನವನ್ನು ಒಳಗಡೆ ತಂದು ಕಟ್ಟಿದ್ದಾರೆ. ಒಳಗೆ ಸ್ಥಳದ ಕೊರತೆ ಇದ್ದದರಿಂದ ಒಂದು ದನವನ್ನು ಹಟ್ಟಿಯಲ್ಲೇ ಬಿಟ್ಟಿದ್ದರು. ಪಕ್ಕದ ಮೂರು ಮನೆಯವರೂ ಕೂಡಾ ತಮ್ಮ ದನಗಳನ್ನು ಕೂಡಾ ಮನೆಯ ಒಳಗಡೆ ತಂದು ಕಟ್ಟಿ ಹಾಕಿದ್ದಾರೆರನ್ನಲಾಗಿದೆ. ನಂತರ ಎರಡು ಗಂಟೆಯ ವೇಳೆಗೆ ಮತ್ತೆ ನಾಯಿ ಬೊಗಳಿದ ಶಬ್ದ ಕೇಳಿ ಹರೀಶ್ ಪೂಜಾರಿ ಮತ್ತು ಪಕ್ಕದ ಮನೆಯ ಸತೀಶ್ ಕಲ್ಲಮುಂಡ್ಕೂರು ಅವರು ಹೊರಗಡೆ ಬರಲು ಯತ್ನಿಸಿದಾಗ ಮನೆಯ ಎದುರುಗಡೆಯ ಬಾಗಿಲಿಗೆ ಚಿಲಕ ಹಾಕಲಾಗಿತ್ತು. ಹಿಂಬಾಗಿಲು ತೆರೆದು ಹೊರ ಬಂದ ಸಂದರ್ಭದಲ್ಲಿ ಹಟ್ಟಿಯಿಂದ ಅಕ್ರಮವಾಗಿ ದನವನ್ನು ಕರೆದುಕೊಂಡು ಹೋಗಿ ಪಿಕಪ್ ಶೈಲಿಯ ಟಾಟಾ ಮೊಬೈಲ್ ಗಾಡಿಗೆ ತುಂಬಿಸುತ್ತಿದ್ದದ್ದು ಕಂಡಿದೆ. ಈ ಸಂದರ್ಭದಲ್ಲಿ ಹರೀಶ್ ಪೂಜಾರಿ ಅವರು ಎದುರುಗಡೆ ಹೋಗಲು ಯತ್ನಿಸಿದಾಗ ತಲವಾರು ತೋರಿಸಿ ಎಚ್ಚರಿಕೆ ನೀಡಿ ದನವನ್ನು ಸಾಗಿಸಿದರೆನ್ನಲಾಗಿದೆ.

ಬುಧವಾರ ಮಧ್ಯಾಹ್ನದ ವೇಳೆಗೆ ತೊಡಂಕಿಲ ಪರಿಸರದಲ್ಲಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಬಿದ್ದು ಹೋಗಿದೆ ಎಂದು ಹುಡುಕಾಟ ನಡೆಸುತ್ತಿದ್ದು ಈ ಸಮಯದಲ್ಲಿ ಪರಿಸರದ ಜನರು ನೀನು ಯಾರು ಎಂದು ಪ್ರಶ್ನಿಸಿದಾಗ ಅಲ್ಲಿ ಪಲ್ಸರ್ ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬ ಅಲ್ಲಿಗೆ ಧಾವಿಸಿ ತಕ್ಷಣ ಕರೆದುಕೊಂಡು ಪರಾರಿಯಾದರೆನ್ನಲಾಗಿದೆ.
ಈ ಬಗ್ಗೆ ಹರೀಶ್ ಪೂಜಾರಿ ಅವರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

By suddi9

Leave a Reply

Your email address will not be published. Required fields are marked *