ಮೂಡುಬಿದರೆ: ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆಯಲ್ಲಿ ಹಿಂದುಳಿದಿದೆ. ಆದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿ ಬೆಳವಣಿಗೆಯಲ್ಲಿ ಮುಂದುವರೆದಿದೆ. ಇದಕ್ಕೆ ಇಲ್ಲಿನ ವೈದ್ಯಕೀಯ ವರ್ಗದ ಗುಣಮಟ್ಟದ ಸೇವೆಯೇ ಕಾರಣ. ಎಂದು ನಿಟ್ಟೆ ವಿವಿಯ ಪ್ರೊಚಾನ್ಸಲರ್ ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದರು.
ಅವರು ಮೂಡುಬಿದರೆಯ ಎಂ.ಸಿ.ಎಸ್. ಬ್ಯಾಂಕಿನ ವತಿಯಿಂದ ಇಲ್ಲಿನ ಆಳ್ವಾಸ್ ಹೆಲ್ತ್ ಸೆಂಟರ್ಗೆ ಸುಮಾರು 22 ಲಕ್ಷ ರೂ ವೆಚ್ಚದಲ್ಲಿ ಎರಡು ಡಯಾಲಿಸೀಸ್ ಯಂತ್ರ ಹಾಗೂ ಒಂದು ವೆಂಟಿಲೇಟರ್ ಯಂತ್ರವನ್ನು ಭಾನುವಾರ ಸಂಜೆ ಆಳ್ವಾಸ್ ಹೆಲ್ತ್ ಸೆಂಟರ್ಗೆ ಹಸ್ತಾಂತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಯಾಲಿಸೀಸ್ನಂತ ದುಬಾರಿ ಚಿಕಿತ್ಸಾ ಸೌಲಭ್ಯವನ್ನು ಮಧ್ಯಮ ಮತ್ತು ಬಡವರ್ಗದವರಿಗೂ ಎಲ್ಲೆಡೆ ಸಿಗುವಂತಾಗಬೇಕು ಎಂದರು.
ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಿ ಮೂಡುಬಿದರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಹಿಂದುಳಿದವರ ಚಿಕಿತ್ಸೆಗಾಗಿ ಆರೋಗ್ಯ ನಿಧಿ ಸ್ಥಾಪನೆ, ಮೂಡುಬಿದರೆಯಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ ಆಗಬೇಕಿದೆ ಎಂದರು.

ಯುವ ಜನ ಸೇವೆ ಕ್ರೀಡಾ ಸಚಿವ ಸಚಿವ ಕೆ. ಅಭಯಚಂದ್ರ ಜೈನ್ ವೆಂಟಿಲೇಟರ್ ಸೌಲಭ್ಯವನ್ನು ಉದ್ಘಾಟಿಸಿದರು.
ಡಾ.ಎಂ. ಮೋಹನ ಆಳ್ವ ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಭವಿಷ್ಯ ನಿರಾಶಾದಾಯಕವೆಂಬಂತಿದೆ. ಇಲ್ಲಿ ವ್ಯಾವಹಾರಿಕ ದೃಷ್ಟಿ ಕೋನ ಇರಬಾರದು. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿ ಜವಾಬ್ದಾರಿಯನ್ನು ಸ್ವೀಕರಿಸುವುದು ಸುಲಭ ಸಾಧ್ಯವಲ್ಲ ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಮಾತನಾಡಿ ಶತಮಾನೋತ್ಸವ ಸಂಭ್ರಮದಲ್ಲಿರುವ ಎಂ.ಸಿ.ಎಸ್. ಬ್ಯಾಂಕ್ ವತಿಯಿಂದ ಸಾರ್ವಜನಿಕ ಕಾಳಜಿಯ ಹಿನ್ನೆಲೆಯಲ್ಲಿ ಡಯಾಲಿಸೀಸ್ ಮತ್ತು ವೆಂಟಿಲೇಟರ್ ಯಂತ್ರವನ್ನು ಕೊಡುಗೆಯಾಗಿ ಆಳ್ವಾಸ್ಗೆ ನೀಡಿದೆ. ಶತಮಾನೋತ್ಸವದ ಅಂಗವಾಗಿ ವಿದ್ಯಾಗಿರಿ ಜಂಕ್ಷನ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ
ವೃತ್ತ ನಿರ್ಮಾಣ, ರುದ್ರಭೂಮಿಯ ಅಭಿವೃದ್ಧಿಗೆ ಕೊಡುಗೆ, ರೈತರಿಗೆ ಕಿಟ್ ಮೊದಲಾದ ಕೊಡುಗೆಗಳನ್ನು ನೀಡುವ ಚಿಂತನೆ ನಡೆಸಿದೆ ಎಂದರು.
ಅತಿಥಿಗಳಾಗಿ ಮಂಗಳೂರು ತಾರಾ ಕ್ಲೀನಿಕ್ನ ಆಡಳಿತ ನಿರ್ದೇಶಕ ಡಾ. ಜನಾರ್ದನ ಕಾಮತ್ ಮೂಡುಬಿದಿರೆ ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಎಂ.ಸಿ.ಎಸ್. ಬ್ಯಾಂಕ್ ಉಪಾಧ್ಯಕ್ಷ ಜಾರ್ಜ್ ಮೋನಿಸ್ ಸಹಿತ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಸೊಸೈಟಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು. ಆಳ್ವಾಸ್ ಹೆಲ್ತ್ ಸೆಂಟರ್ನ ಡಾ. ಹರೀಶ ನಾಯಕ್ ವಂದಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
