ಸ್ಮಾರಕ ಕಟ್ಟಡ, ವಿವಿಧ ಯೋಜನೆಗಳ ಉದ್ಘಾಟನೆ
ಮೂಡುಬಿದರೆ : ಶಿಕ್ಷಣವು ಪ್ರತಿಯೊಬ್ಬನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕ್ರಿಶ್ಚನ್ ಮಿಷನರಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರಿಂದಲೇ ಭಾರತದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದು ಕಥೊಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷ, ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜ ಹೇಳಿದರು.
ಮೂಡುಬಿದರೆ ಸಮೀಪದ ಪಾಲಡ್ಕ ಸಂತ ಇಗ್ನೇಶಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದಂಗವಾಗಿ ಬುಧವಾರ ಸಂಜೆ ಶತಮಾನೋತ್ಸವ ಸ್ಮಾರಕ ಕಟ್ಟಡ ಮತ್ತು ಇತರ ಯೋಜನೆಗಳನ್ನು ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದಾನಿಗಳಿಗೆ ಸನ್ಮಾನಿಸಿ ಮಾತನಾಡಿದರು.
ಹಿಂದೆ ಶಾಲೆಗಳನ್ನು ನಿರ್ಮಿಸಲು ಸರಿಯಾದ ಸ್ಥಳಾವಕಾಶದ ಮತ್ತು ಹಣದ ಕೊರತೆ ಇತ್ತು. ಆದರೆ ಇಂದು ಸಮಾಜದ ಎಲ್ಲಾ ಜನರು ಸೇರಿ ಜಾತಿ, ಧರ್ಮವನ್ನು ಮರೆತು ಒಟ್ಟಾಗಿ ಶಾಲೆಗಳ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿದ್ದಾರೆ. ಊರು ಅಭಿವೃದ್ಧಿಯಾಗಬೇಕಾದರೆ ಊರಿನ ಮುಖ್ಯಸ್ಥರು ಅಕ್ಷರಸ್ಥನಾಗಬೇಕು, ಅಕ್ಷರಸ್ಥ ಸಮಾಜದ ಆಧಾರ ಸ್ಥಂಭವಾಗಿ ಕೆಲಸ ಮಾಡಬೇಕು ಎಂದು ಹೇಳಿದ ಅವರು ಶಿಕ್ಷಣ ನೀಡುವಲ್ಲಿ ಮುಂದಾಗಿರುವ ಸಂತ ಇಗ್ನೇಶಿಯಸ್ ಶಾಲೆ ನಿರ್ಮಾಣಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಶಂಸಿಸಿದರು.
ಯುವಸಬಲೀಕರಣ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಶಾಲಾ, ಕಾಲೇಜ್‍ಗಳು ಅತ್ಯವಶ್ಯಕವಾಗಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಸಹಕಾರ ನೀಡುತ್ತಿದೆ. ಕರ್ನಾಟಕ ಸರ್ಕಾರವು ಬಡವರ ಕಲ್ಯಾಣಕ್ಕಾಗಿರುವಂತ ಸರ್ಕಾರ. ಅನ್ನಭಾಗ್ಯ, ಕ್ಷಿರಭಾಗ್ಯ ಈಗ ಶೂಭಾಗ್ಯ ನೀಡುವಲ್ಲಿ ಮುಂದಾಗಿದೆ. ಭಾರತೀಯರು ಸ್ವಾಭಿಮಾನದಿಂದ ಬೆಳದರೆ, ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಶತಮಾನೋತ್ಸವ ಮಹಾ ಸಂಭ್ರಮದ ಸಕಲ ಯೋಜನೆಗಳ ಸಾಕ್ಷಾತ್ಕಾರಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ, ಹಳೆ ವಿದ್ಯಾರ್ಥಿ, ಶಾಲಾ ಅಭಿಮಾನಿಗಳಿಗೆ ಹಾಗೂ ವಿವಿಧ ಸಮಿತಿಗಳ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಪಾಲಡ್ಕ ಗ್ರಾ.ಪಂ ಅಧ್ಯಕ್ಷೆ ಸವಿತಾ, ಮೂಡುಬಿದರೆ ವಲಯದ ಮುಖ್ಯಗುರುಗಳಾದ ಅಸ್ಟಿನ್ ಪೀಟರ್ ಪೇರಿಸ್, ಯು.ಎಮ್.ಐ ಮುಖ್ಯಸ್ಥರಾದ ಧರ್ಮಭವನಿ ಕುಸುಮ್, ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ.ಜೆರಾಲ್ಡ್ ಡಿ’ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಉಪಾಧ್ಯಕ್ಷ ಡೆನಿಸ್ ಡಿ’ಮೆಲ್ಲೊ, ಕಾರ್ಯದರ್ಶಿ ವಿನ್ಸೆಂಟ್ ಪಿಂಟೋ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ರೆ.ಫಾ.ಐವನ್ ಎಮ್. ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಜೊಸಿನಾ ವರದಿ ವಾಚಿಸಿದರು. ನಿವೃತ್ತ ಶಿಕ್ಷಕ ಆ್ಯಂಡ್ರೂ ಡಿ’ಸೋಜ ಮತ್ತು ಮೆಟಿಲ್ಡಾ ಖರ್ಡೋಜಾ ಕಾರ್ಯಕ್ರಮ ನಿರೂಪಿಸಿದರು.
