ಕೈಕಂಬ: ಗುರುಪುರ ಕೈಕಂಬ ಸಮೀಪದ ಮಳಲಿ ಎಂಬಲ್ಲಿ ಜೋಡಿಹುಲಿಗಳ ಕಾಟ ಇದೆ ಎಂದು ಆ ಭಾಗದ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅದು ಹುಲಿಯೋ ಚಿರತೆಯೋ ಎಂಬ ಜಿಜ್ಞಾಸೆ ಹುಟ್ಟಿಕೊಂಡಿದ್ದು, ಸ್ಥಳೀಯರ ಪ್ರಕಾರ ಅದು ಹುಲಿ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ಎರಡುವಾರಗಳಿಂದ ಮಳಲಿಯ ಕೋರ್ದೊಟ್ಟು ಎಂಬ ಪ್ರದೇಶದಲ್ಲಿ ಹಲವರು ನಾಯಿಗಳು ಕಾಣೆಯಾಗುತ್ತಿದ್ದು, ಅವುಗಳ ಕಳೇಬರ ಪಕ್ಕದ ಕಾನನದಲ್ಲಿ ಎಲ್ಲೆಂದರಲ್ಲಿ ಪತ್ತೆಯಾಗುತ್ತಲೇ ಇದೆ. ಕಳೆದ 15 ದಿನಗಳ ಅಂತರದಲ್ಲಿ ಸರಿಸುಮಾರು ಆರಕ್ಕೂ ಹೆಚ್ಚು ನಾಯಿಗಳು ಈ ಕ್ರೂರಪ್ರಾಣಿಗಳಿಗೆ ಆಹುತಿಯಾಗಿದೆ. ರಾತ್ರಿ ವೇಳೆ ಹುಲಿಯಷ್ಟೇ ದೊಡ್ಡಗಾತ್ರದ ಪ್ರಾಣಿಗಳು ಲಗ್ಗೆಇಟ್ಟು ನಾಯಿ, ಕೋಳಿ ಮುಂತಾದ ಪ್ರಾಣಿಗಳನ್ನು ಅಪಹರಿಸಿಕೊಂಡು ಹೋಗುತ್ತಿದೆ. ಸ್ಥಳೀಯರ ಪ್ರಕಾರ ಅವುಗಳು ಅವರಿಗೆ ಹುಲಿಯಂತೆ ಕಂಡಿದೆ. ಇದರ ಸಮೀಪ ದಟ್ಟ ಕಾಡು ಇರುವುದರಿಂದ ಎಲ್ಲಿಂದಲೂ ದಿಕ್ಕುತಪ್ಪಿಕೊಂಡು ಬಂದ ಹುಲಿಗಳು ಈ ಭಾಗದಲ್ಲಿ ಆಶ್ರಯ ಪಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಅವುಗಳು ನರಭಕ್ಷಕವಾದರೆ ಎಂಬ ಆತಂಕವೂ ಸೃಷ್ಟಿಯಾಗಿದೆ.
ಸುಮಾರು ವರ್ಷಗಳ ಹಿಂದೆ ಈ ಭಾಗದಲ್ಲಿ ಹುಲಿಗಳು ವಾಸವಾಗಿದ್ದು, ಕಾಲಕ್ರಮೇಣ ನಶಿಶಿ ಹೋಗಿದೆ. ಆದರೆ ಅದರ ಮುಂದುವರಿದ ಭಾಗವಾಗಿ ಹುಲಿಗಳು ಇಲ್ಲಿಗೆ ಬಂದು ಸೇರಿರಬಹುದು ಎಂಬ ಅಭಿಪ್ರಾಯ ಸ್ಥಳೀಯರದ್ದಾಗಿದೆ.
ಇವುಗಳ ಕಾಟದಿಂದ ರಾತ್ರಿಹೊತ್ತು ಜನರು ಹೊರಗೆ ಬರಲು ಹೆದರುತ್ತಾರಲ್ಲದೆ, ಕಣ್ಣಮುಂದೆಯೇ ತಮ್ಮ ಮನೆಯ ಪ್ರಾಣಿಗಳನ್ನು ಅಪಹರಿಸಿ ಕೊಲ್ಲುತ್ತಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಇಲಾಖೆ ಯಾವುದೇ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ಕೆಲವು ದಿನಗಳ ಮುಂಚೆ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿ ಹೋಗಿದ್ದು, ಆಮೇಲೆ ಭೇಟಿ ನೀಡಿಲ್ಲ. ಹುಲಿಬೋನು ತಂದಿಡಿ ಎಂದರೆ ಅದು ಸಾಧ್ಯವಿಲ್ಲ, ಈ ಭಾಗದಲ್ಲಿ ರಸ್ತೆ ಇಲ್ಲ ಎಂದು ಸಬೂಬು ಹೇಳುವ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಸ್ಥಳೀಯರು ಗರಂ ಆಗಿದ್ದಾರೆ. ಹೇಗಾದರೂ ಮಾಡಿ ಹುಲಿಗಳಿಂದ ರಕ್ಷಿಸುವಂತೆ ಸ್ಥಳೀಯರು ಪತ್ರಿಕೆಯ ಮುಖಾಂತರ ಮನವಿ ಮಾಡಿದ್ದಾರೆ.
