ಬಂಟ್ವಾಳ :ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿ ಅರಿತುಕೊಂಡ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಅವರು ಮತದಾರರಿಗೆ ತಲಾ ರೂ 10ಸಾವಿರದಂತೆ ಹಣ ಹಂಚಿಕೆ ಆರಂಭಿಸಿ ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಕೆ.ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದುಡ್ಡಿಗಾಗಿ ಓಟು ಕೊಟ್ಟು ತಮ್ಮ ಸ್ವಾಭಿಮಾನ ಮಾರುವ ಪ್ರಯತ್ನವನ್ನು ದಯವಿಟ್ಟು ಯಾರೂ ಮಾಡಬಾರದು ಎಂದು ವಿನಂತಿಸಿದ ಅವರು ಗ್ರಾಮದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುವ ಮತ್ತು ಕೆಲಸ ಮಾಡುವ ವ್ಯಕ್ತಿಯನ್ನು ಆಯ್ಕೆಗೊಳಿಸಬೇಕು ಎಂದರು.

ಶಾಸಕರಿಗೆ ಮತ್ತು ಸಂಸದರಿಗೆ ವೇತನ ಹೆಚ್ಚಿಸುವಲ್ಲಿ ವಿಏಷ ಮುತುವರ್ಜಿ ವಹಿಸುವ ಸರ್ಕಾರವು ಜನರ ಹತ್ತಿರದ ಸರ್ಕಾರದಂತಿರುವ ಗ್ರಾಮ ಪಂಚಾಯಿತಿ ಸದಸ್ಯರಿಗೂ ವೇತನ ನಿಗದಿಗೊಳಿಸಬೇಕು. ಇದಕ್ಕಾಗಿ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾದಲ್ಲಿ ನಾನು ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಅವರು ಇಲ್ಲಿನ ಯಾವುದೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರೆ ಅವರಿಗೆ ರೂ 1ಲಕ್ಷ ಮೊತ್ತದ ಬಹುಮಾನ ನೀಡುವುದಾಗಿ ತಾನು ಹಾಕಿದ್ದ ಸವಾಲಿಗೆ ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ. ದೇಶದಲ್ಲಿ ಭೃಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಯನ್ನು ಯುವಜನತೆ ಬಯಸುತ್ತಿದ್ದು, ಯಾವುದೇ ಅಮಿಷಕ್ಕೆ ಒಳಗಾಗದೇ ಮತದಾರರು ತನಗೆ ಮತ ನೀಡಬೇಕು. ಸದಸ್ಯರು ನಿರ್ಭೀತಿಯಿಂದ ತಮ್ಮ ಒಂದು ಮತ್ತು ಎರಡೂ ಪ್ರಾಶಸ್ತ್ಯದ ಮತ ಚಲಾಯಿಸುವಂತೆ ಅವರು ಮನವಿ ಮಾಡಿದರು.
ಬಿ.ಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಓರ್ವ ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ನಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಚೆನ್ನಾಗಿ ದುಡಿಸಿ ಈಗ ಬದಿಗೆ ಸರಿಸಲಾಗಿದ್ದು, ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತದಾರರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
