ಬಂಟ್ವಾಳ:ಈ ಬಾರಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಗೊಂದಲ ಮತ್ತು ಬಿಜೆಪಿ ಅಸಮಾಧಾನವು ಜೆಡಿಎಸ್‍ಗೆ ವರದಾನವಾಗಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಪ್ರವೀಣಚಂದ್ರ ಜೈನ್ ಹೇಳಿದ್ದಾರೆ.
ಬಿ.ಸಿ.ರೋಡ್‍ನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 30 ವರ್ಷಗಳಿಂದ ಜಾತ್ಯಾತೀತ ಜನತಾದಳ ಪಕ್ಷದಲ್ಲಿ ಸಕ್ರಿಯವಾಗಿ ದುಡಿದಿರುವ ನನಗೆ ಗ್ರಾಮ ಪಂಚಾಯಿತಿನಂತಹ ಸ್ಥಳೀಯಾಡಳಿತ ಸದಸ್ಯರ ಕಷ್ಟ ನಷ್ಟಗಳ ಬಗ್ಗೆ ಅರಿವಿದೆ ಎಂದರು. ಕೃಷಿ, ಸಹಕಾರಿ, ಜೆಸಿಐ ಮತ್ತಿತರ ಕ್ಷೇತ್ರದಲ್ಲಿ ಸಮಾಜಮುಖಿ ಚಿಂತನೆಯಿಂದ ದುಡಿದು ಈಗಾಗಲೇ ಬಹುತೇಕ ಎಲ್ಲಾ ಪಂಚಾಯಿತಿಗಳಿಗೆ ಬೇಟಿ ನೀಡಿ ಅಲ್ಲಿನ ಸಂಕಷ್ಟಗಳನ್ನು ತಿಳಿಯುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಈ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಿ ನನ್ನನ್ನು ಗೆಲ್ಲಿಸಿದರೆ ಪಂಚಾಯಿತಿ ಸದಸ್ಯರ ಗೌರವಧನ ಏರಿಕೆ ಸೇರಿದಂತೆ ವಿವಿಧ ಸೌಲಭ್ಯ ದೊರಕಿಸಿ ಕೊಡುವಲ್ಲಿ ಶ್ರಮಿಸುತ್ತೇನೆ. ಆ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ರಾಜ್ಯಕ್ಕೆ ತೋರಿಸುವ ಅನಿವಾರ್ಯತೆ ಎದುರಾಗಿದೆ ಎಂದರು.
ಜೆಡಿಎಸ್ ಕ್ಷೇತ್ರಾಧ್ಯಕ್ಷ ಹಾರೂನ್ ರಶೀದ್, ಮುಖಂಡರಾದ ಅಬೂಬಕ್ಕರ್ ಅಮ್ಮುಂಜೆ, ಪ್ರಕಾಶ ಹೆಬ್ಬಾರ್ ಬೆಳ್ತಂಗಡಿ, ಅಬ್ದುಲ್ ರಹಿಮಾನ್ ಹೊಸಂಗಡಿ ಮತ್ತಿತರರು ಇದ್ದರು.
—

By Suddi9

Leave a Reply

Your email address will not be published. Required fields are marked *