ಬಂಟ್ವಾಳ : ಇಲ್ಲಿನ ತಾಲೂಕು ಪಂಚಾಯತ್ ಮೂರನೇ ಹಾಗೂ ಕೊನೆಯ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಟ್ಟು ಸರಕಾರ ಆದೇಶ ಹೊರಡಿಸಿದೆ.
33 ಸದಸ್ಯಬಲ ಹೊಂದಿರುವ ಬಂಟ್ವಾಳ ತಾ.ಪಂ.ನಲ್ಲಿ ಬಿಜೆಪಿ 17, ಕಾಂಗ್ರೆಸ್ 16 ಸ್ಥಾನಗಳನ್ನು ಹೊಂದಿದೆ. ಹಾಲಿ ಅಧ್ಯಕ್ಷೆ ಲಲಿತಾ ನಾಯ್ಕ್, ಉಪಾಧ್ಯಕ್ಷ ಆನಂದ ಶಂಭೂರು ರವರ ಅಧಿಕಾರದ ಅವಧಿ ಜೂ.9ಕ್ಕೆ ಸಮಾಪನಗೊಳ್ಳಲಿದ್ದು, 3ನೇ ಅವಧಿಗೆ ಪ್ರಕಟಗೊಂಡ ಅಧ್ಯಕ್ಷ ಹುದ್ದೆಯ ಮೀಸಲಾತಿಗೆ ಬಿಜೆಪಿಯಿಂದ ತಾ.ಪಂನ ಹಾಲಿ ಉಪಾಧ್ಯಕ್ಷ ಆನಂದ ಶಂಭೂರು, ಸದಸ್ಯರಾದ ವಸಂತ ಅಣ್ಣಳಿಕೆ, ಯಶವಂತ, ರಮೇಶ್ ಕುಡುಮೇರು, ಹರೀಶ್ ದೇವಸ್ಯ ರವರು ಅರ್ಹರಾಗಿದ್ದಾರೆ. ಅಂತೆಯೇ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿರುವುದರಿಂದ ಎಲ್ಲಾ ಮಹಿಳಾ ಸದಸ್ಯರು ಇದಕ್ಕೆ ಅರ್ಹತೆ ಹೊಂದಿದ್ದಾರೆ.
ಕಳೆದ ಬಾರಿ ಕಸರತ್ತು ನಡೆದಿತ್ತು..
2ನೇ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಂಗಡಕ್ಕೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಲಲಿತಾ ಶಿವಪ್ಪ ನಾಯ್ಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಇದ್ದು,ಅಧಿಕಾರದ ಗದ್ದುಗೆ ಏರಲು ಕಾಂಗ್ರೇಸ್ ಹಾಗೂ ಬಿಜೆಪಿ ನಾನಾ ಕಸರತ್ತು ನಡೆಸಿತ್ತು. ಕೊನೇ ಕ್ಷಣದಲ್ಲಿ ಕಡೇಶ್ವಾಲ್ಯ ಕ್ಷೇತ್ರದ ಸದಸ್ಯೆಯೊಬ್ಬರು ಗೈರುಹಾಜರಾದ ಹಿನ್ನೆಲೆಯಲ್ಲಿ, ಆಯ್ಕೆ ಪ್ರಕ್ರಿಯೆಯಲ್ಲೂ ಸಮಾನ ಮತಗಳಿಕೆ ಇದ್ದ ಕಾರಣದಿಂದ ನಡೆದ ಅದೃಷ್ಟ ಚೀಟಿಯ ಆಟದಲ್ಲಿ ಉಪಾಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತ ಸದಸ್ಯ ಆನಂದ ಶಂಭೂರು ರವರಿಗೆ ಒಲಿದಿತ್ತು.
ಹೀಗೆ ಗೈರುಹಾಜರಾಗಿದ್ದ ಸದಸ್ಯೆ ಬಳಿಕ ತಾ.ಪಂ ಸಭೆಗೆ ಸತತ ಗೈರು ಹಾಜರಾದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದುಗೊಂಡು ಉಪ ಚುನಾವಣೆ ನಡೆದು ಇಲ್ಲಿ ಬಿ.ಜೆ.ಪಿ ಗೆಲುವು ಸಾದಿಸಿ ತನ್ನ ಅಧಿಕಾರವನ್ನು ಭದ್ರ ಪಡಿಸಿಕೊಂಡಿದೆ.
ಈ ಬಾರಿಯೂ ಪೈಪೋಟಿ ನಿರೀಕ್ಷೆ..
ಆಡಳಿತ ಪಕ್ಷ ವಾಗಿರುವ ಬಿಜೆಪಿಯಲ್ಲಿ ಎರಡನೇ ಅವಧಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಹಾಲಿ ಉಪಾಧ್ಯಕ್ಷ ಆನಂದ ಶಂಭೂರು ಸಹಿತ ವಸಂತ ಅಣ್ಣಳಿಕೆ, ರಮೇಶ್ ಕುಡುಮೇರು,ಯಶವಂತ, ಹರೀಶ್ ದೇವಸ್ಯ ರವರು ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಯನ್ವಯ ಅರ್ಹರವಾಗಿರುವುದರಿಂದ ಈ ಬಾರಿ ಪೈಪೋಟಿ ನಿರೀಕ್ಷಿಸಲಾಗಿದೆ.
ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯ ಎಲ್ಲಾ ಮಹಿಳಾ ಸದಸ್ಯೆಯರು ಅರ್ಹರಾಗಿರುವುದರಿಂದ ಪೈಪೋಟಿ ನಡೆಯಲೂ ಬಹುದು. ಈ ಮಧ್ಯೆ ಒಂದು ಸ್ಥಾನದ ಕೊರತೆಯಿಂದಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಂಡಿರುವ ಕಾಂಗ್ರೇಸ್ ಕೂಡ ಅಧಿಕಾರದ ಚಿಕ್ಕಾಣಿ ಹಿಡಿಯಲು ತಂತ್ರ ಹೆಣೆಯುವ ಸಾಧ್ಯತೆ ಇದೆ. ಪಕ್ಷಗಳೊಳಗಿನ ಪೈಪೋಟಿಯೂ ಇಲ್ಲಿ ಎಲ್ಲರ ನಿರೀಕ್ಷೆಗಳನ್ನೂ ಸುಳ್ಳಾಗಿಸಬಹುದು. ಒಟ್ಟಿನಲ್ಲಿ ತಾಲೂಕು ಪಂಚಾಯತ್ನ ಕೊನೆಯ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಯಾರೆಂಬ ಕುತೂಹಲ ಸಾರ್ವಜನಿಕ ರಲ್ಲಿ ಗರಿಗೆದರಿದೆ.
ರಮೇಶ್ ಕುದ್ಮೇರು, ಆನಂದ ಶಂಭೂರು ರೇಸ್ ನಲ್ಲಿ..!
ಮೂಲಗಳ ಪ್ರಕಾರ ಚೆನ್ನೈತ್ತೋಡಿ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯ ರಮೇಶ್ ಪೂಜಾರಿ ಹಾಗೂ ನರಿಕೊಂಬು ಕ್ಷೇತ್ರದ ತಾ.ಪಂ.ಸದಸ್ಯ, ಹಾಲಿ ಉಪಾಧ್ಯಕ್ಷ ಆನಂದ ಶಂಭೂರು ನೂತನ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇವರೀರ್ವರೂ ಕೂಡ ಈ ಸುದ್ದಿಯನ್ನು ಅಲ್ಲಗೆಳೆದಿದ್ದು, ಪಕ್ಷದ ಸೂಚನೆಯಂತೆ ಮುಂದುವರಿಯುವುದಾಗಿ ಪ್ರತಿಕ್ರಿಯಿಸಿದ್ದಾರೆ.
ರಮೇಶ್ ಕುದ್ಮೇರು ರವರು, ಈ ಹಿಂದೆ ಚೆನ್ನೈತ್ತೋಡಿ ಗ್ರಾಮಪಂಚಾಯತ್ ನಲ್ಲಿ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ಹಿಂದೆ ಕಾಂಗ್ರೇಸ್ ವಶದಲ್ಲಿದ್ದ ಚೆನ್ನೈತ್ತೋಡಿ ತಾ.ಪಂ. ಕ್ಷೇತ್ರ ಇವರ ಸ್ಪರ್ಧೆಯ ಬಳಿಕ ಬಿಜೆಪಿ ವಶವಾಗಿತ್ತು. ಆನಂದ ಶಂಭೂರು ರವರು ನರಿಕೊಂಬು ಗ್ರಾಮಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಅನುಭವ ಹೊಂದಿದ್ದಾರಲ್ಲದೆ, ನರಿಕೊಂಬು ತಾ.ಪಂ.ಕ್ಷೇತ್ರದ ಲ್ಲಿ ಸದಸ್ಯರಾಗಿ ಆಯ್ಕೆಯಾದ ಬಳಿಕ ಎರಡನೇ ಅವಧಿಯಲ್ಲಿ ತಾ,ಪಂ. ಉಪಾಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಹಿರಿಮೆ ಉಳ್ಳವರು.
ಈ ಎಲ್ಲಾ ಅರ್ಹತೆಗಳೂ ಅಧ್ಯಕ್ಷ ಅಭ್ಯರ್ಥಿಯ ಆಯ್ಕೆಯ ಮಾನದಂಡಗಳೇ ಅಥವಾ ಪಕ್ಷದ ಒಲವು ಇನ್ನಾರ ಕಡೆ ಇದೆ ಎನ್ನುವುದನ್ನು ಕಾದುನೋಡಬೇಕಿದೆ..
