ಬಂಟ್ವಾಳ: ಇಲ್ಲೊಬ್ಬರು ಅಪರೂಪದ ವ್ಯಕ್ತಿಯಿದ್ದಾರೆ. ಅವರ ಹೆಸರು ಡಿ.ಎ.ರಹ್ಮಾನ್ ಪಟೇಲ್. ಬಿಸಿ.ರೋಡಿನ ಖಾಸಗಿ ಡ್ರೈಇಂಗ್ ಸ್ಕೂಲ್ ನಲ್ಲಿ ಚಾಲಕನ ಕೆಲಸ. ಆದರೆ ಸಂಜೆಯಾಗುತ್ತಲೇ ಇವರು ಇಲ್ಲಿನ ಕೈಕಂಬದಲ್ಲಿ ಟ್ರಾಫೀಕ್ ನಿರ್ವಾಹಕ..
ಕಳೆದ ಮೂರು ತಿಂಗಳುಗಳಿಂದ ಬಿ.ಸಿ.ರೋಡಿನ ಕೈಕಂಬದಲ್ಲಿ ಸಂಜೆಯ ಹೊತ್ತಿನ ಟ್ರಾಫಿಕ್ ವ್ಯವಸ್ಥೆಯನ್ನು ಸುಧಾರಿಸುವಮೂಲಕ ಸಮಾಝ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಕಾಯಕಕ್ಕೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿದೆ.
ಹೇಳಿ-ಕೇಳಿ ಬಿ.ಸಿ.ರೋಡು ವಾಹನದಟ್ಟಣೆಯ ನಗರ. ಪೊಳಲಿ, ಮಂಗಳೂರು, ಬಿ.ಸಿ.ರೋಡು ಮೂರು ರಸ್ತೆಗಳು ಸೇರುವ ಈ ಸ್ಥಳದಲ್ಲಿ ಸಂಜೆಯಂತೂ ವಾಹನಗಳ ಭರಾಟೆ, ರಸ್ತೆ ದಾಟುವ ವಾದಚಾರಿಗಳ ಸಂಖ್ಯೆಯೂ ಅಧಿಕ. ಸಂಚಾರಿ ಪೊಲೀಸ್ ಠಾಣೆ ಇದ್ದರೂ ಅಲ್ಲಿನ ಸಿಬ್ಬಂದಿಗಳ ಕೊರತೆ ಇದೆ. ಹಾಗಾಗಿ ಕೈಕಂಬದಲ್ಲಿ ಸಂಜೆಯ ಹೊತ್ತಿಗೆ ಟ್ರಾಫಿಕ್ ಕಿರಿಕಿರಿ.. ವಾಹನಗಳದ್ದೇ ಸದ್ದು.
ಈ ಸಮಸ್ಯೆಯನ್ನು ಮನಗಂಡ ರಹ್ಮಾನ್ ಅವರು, ತಾನೇ ಸ್ವತಃ ವಾಹನ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಹನಗಳ ಸುಗಮಸಂಚಾರಕ್ಕೆ ಅನುವು ಮಾಡಿಕೊಡುವ ಇವರ ಸಾಮಾಜಿಕ ಕಳಕಳೀಯ ಬಗ್ಗೆ ಸ್ಥಳೀಯರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಂಜೆ 5 ರಿಂದ 6.30 ರ ವರೆಗೆ ಕೆಲಸ ನಿರ್ವಹಿಸುವ ಇವರು ಅನುಮತಿಗಾಗಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದು, ಸಾಮಾಜಿಕ ಕಾರ್ಯವನ್ನು ಪೊಲೀಸ್ ಇಲಾಖೆಯೂ ಬೆಂಬಲಿಸಿದೆ. ಕೆಲಸ ಸುಸೂತ್ರವಾಗಿ ನಡೆಸಲು ಟ್ರಾಫಿಕ್ ಜಾಕೆಟ್ ಅನ್ನೂ ನೀಡುವುದಾಗಿ ಭರವಸೆ ನೀಡಿರುವುದು ಇವರಿಗೆ ಮತ್ತಷ್ಟು ಖುಸಿ ತಂದಿದೆ.
ಸಂಜೆ ಕೆಲಸ ಮುಗಿಯಿತೆಂದು ಮನೆಯೊಳಗೆ ಸೇರಿ ವಿಶ್ರಾಂತಿ ಪಡೆಯುವ ಹೊತ್ತಿನಲ್ಲಿ, ಸಾಮಾಜಿಕ ಕಾರ್ಯದಲಿ ಮನಶಾಂತಿ ಕಾಣಲು ಹೊರಟ ಈ ರಹ್ಮಾನ್ ಅವರ ಸಾಮಾಜಿಕ ಕಳಕಳಿಗೆ ಭೇಷ್ ಅನ್ನಲೇ ಬೇಕು





