ಬಂಟ್ವಾಳ:ಜಿಲ್ಲೆಯ ಜೀವ ನದಿ ನೇತ್ರಾವತಿ ಬರಿದುಗೊಳಿಸಲು ‘ಎತ್ತಿನ ಹೊಳೆ’ ಹೆಸರಿನಲ್ಲಿ ಸರ್ಕಾರವು ಕೈಗೊಂಡಿರುವ ನೇತ್ರಾವತಿ ನದಿ ತಿರುವು ಯೋಜನೆ ಕೈಬಿಡದಿದ್ದರೆ ಪ್ರತೀ ತಾಲ್ಲೂಕಿನಲ್ಲಿ ಒಂದು ದಿನ ಆಡಳಿತ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಇದೇ 15ರಂದು ಬಂಟ್ವಾಳ ತಾಲ್ಲೂಕು ಆಡಳಿತ ಬಂದ್ಗೊಳಿಸಲು ಇಲ್ಲಿನ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಮತ್ತು ಜಿಲ್ಲಾ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ತೀರ್ಮಾನಿಸಿದೆ.
ಬಿ.ಸಿ.ರೋಡ್ ನಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಜಿಲ್ಲೆಯ ಪ್ರತೀ ತಾಲ್ಲೂಕು ಸಮಿತಿ ಮೂಲಕ ಪ್ರತ್ಯೇಕ ಸಮಾಲೋಚನೆ ನಡೆಸಲಾಗುವುದು ಎಂದು ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಮತ್ತು ಸಂಚಾಲಕ ಪ್ರಭಾಕರ ದೈವಗುಡ್ಡೆ ಪ್ರಕಟಿಸಿದರು.
ಜಿಲ್ಲಾ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ಮುಖಂಡ ಡಾ.ನಿರಂಜನ ರೈ ಮಾತನಾಡಿ, ಈ ಯೋಜನೆ ಜಿಲ್ಲೆಗೆ ಮಾರಕವಾಗಲಿರುವ ಬಗ್ಗೆ ಜನಜಾಗೃತಿ ಮೂಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ಇದೀಗ ಹಸಿರು ಪೀಠದ ಆದೇಶವನ್ನೂ ಉಲ್ಲಂಘಿಸಿ ಸರ್ಕಾರವು ಕಾಮಗಾರಿ ನಡೆಸುವ ಮೂಲಕ ಜಿಲ್ಲೆಯ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಅಂಕಣಗಾರ ಕಾಸರಗೋಡು ಅಶೋಕ ಕುಮಾರ್ ಮಾತನಾಡಿ, ಜಿಲ್ಲೆಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸಬೇಕು ಎಂದರು.
