ಬಂಟ್ವಾಳ: ತಾಲೂಕು ನಾವೂರು ಗ್ರಾಮದ ಮೈಂದಾಳ ಎಂಬಲ್ಲಿ ಎಸ್ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗುಂಪುಗಳೆರಡು ಪರಸ್ಪರ ಹೊಡೆದಾಡಿದ ಪ್ರಕರಣ ನಡೆದಿದೆ. ಘಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಹಂಝ, ಅಕ್ಬರ್, ಬದ್ರುದ್ಧೀನ್, ತಮೀಂ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಗಳಲ್ಲಿ ಇಬ್ಬರು ಎಸ್ಡಿಪಿಐ ಮತ್ತು ಮತ್ತಿಬ್ಬರು ಕಾಂಗ್ರೆಸ್ ಕಾರ್ಯಕರ್ತರೆಂದು ಗುರುತಿಸಲಾಗಿದೆ. ಭಾನುವಾರ ನಾವೂರು, ಮೈಂದಾಳ ಬಳಿ ಮೈದಾನವೊಂದರಲ್ಲಿ ಯುವಕರು ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಆಟದ ವಿಚಾರದಲ್ಲಿ ಮನಸ್ತಾಪ ಉಂಟಾಗಿತ್ತು. ಎರಡು ತಂಡದ ಸದಸ್ಯರ ನಡುವೆ ವಾಗ್ವಾದವೂ ನಡೆದಿದ್ದು, ಈ ಸಂದರ್ಭ ಹೊರಗಡೆಯಿಂದ ಬಂದ ಯುವಕನೋರ್ವ ಬಂದು ಎಸ್ಡಿಪಿಐ ಕಾರ್ಯಕರ್ತರೆಂದು ಆರೋಪಿಸಿ ಸದಸ್ಯರ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಸೇರಿದ ಗುಂಪು ಆತನಿಗೆ ಚೆನ್ನಾಗಿ ಥಳಿಸಿದ್ದು, ಈ ವೇಳೆ ಗಲಾಟೆಯನ್ನು ಬಿಡಿಸಲು ಬಂದ ಯುವಕನಿಗೂ ಹಲ್ಲೆಯಾಯಿತು. ಗಾಯಗೊಂಡ ಹಂಝ ಮತ್ತು ಅಕ್ಬರ್ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಸೇರಿದರೆ, ಬದ್ರುದ್ದೀನ್ ಮತ್ತು ತಮೀಂ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.  ಘಟನೆಗೆ ಕಾಂಗ್ರೆಸ್ ಮತ್ತು ಎಸ್ಡಿಪಿಐ ಕಾರ್ಯಕರ್ತರ ರಾಜಕೀಯ ದ್ವೇಷವೇ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಅಗ್ರಹಾರ ಊರೂಸ್ ಸಂದರ್ಭ ನಡೆದ ಸಣ್ಣಪುಟ್ಟ ಘಟನೆಗೆ ಸಂಬಂಧಿಸಿ ಸ್ಥಳೀಯ ಸಂಘಟನೆಯ ಕಾರ್ಯಕರ್ತರ ಮೇಲೆ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡ ಯುವಕನೋರ್ವ ದೂರು ನೀಡಿದ್ದು, ಅವರನ್ನು ಬಂಧಿಸುವಂತೆ ಸಚಿವರ ಮೂಲಕ ಒತ್ತಡ ಹಾಕಿದ್ದ ಎನ್ನಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಹೇಳಿಕೆಗಳನ್ನು ಮುದ್ರಿಸಿ ವಾಟ್ಸ್ಅಪ್ನಲ್ಲಿ ರವಾನಿಸುತ್ತಿದ್ದ ಸ್ಥಳೀಯ ನಿವಾಸಿಯೋರ್ವ ವಿವಾದವೊಂದನ್ನು ಉಂಟು ಮಾಡಿದ್ದೆನ್ನಲಾಗುತ್ತಿದೆ. ಈ ಎಲ್ಲಾ ಹಿನ್ನೆಲೆಯನ್ನು ಗಮನಿಸಿದ ಗ್ರಾಮಾಂತರ ಪೊಲೀಸರು ಇತ್ತಂಡಗಳ ಮೇಲೂ ಪ್ರಕರಣ ದಾಖಲಿಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ದೂರು: ರಾಜಕೀಯ ಹಿನ್ನೆಲೆಯ ದ್ವೇಷವನ್ನು ಬಳಸಿಕೊಂಡು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾದ ವಿದ್ಯಾಮಾನವೊಂದು ನಡೆದಿದೆ. ಥಳಿತಕ್ಕೊಳಗಾದ ಗುಂಪೊಂದು ಕಾಂಗ್ರೆಸ್ ಮುಖಂಡರ ಮೂಲಕ ಅಮಾಯಕ ಯುವಕರ ಮೇಲೆ ದೂರು ನೀಡಿದೆನ್ನಲಾಗಿದೆ. ಆರೋಪಿಗಳೆಂದು ದೂರಲಾದ ಹೇಳಿಕೆಯಲ್ಲಿ ವಿದ್ಯಾರ್ಥಿಗಳ ಹೆಸರನ್ನೂ ಸೇರಿದ್ದಾರೆನ್ನಲಾಗಿದ್ದು, ಪೊಲೀಸ್ ಠಾಣಾಧಿಕಾರಿ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಗಳಿಗೆ ಹನೀಫ್ ಎಂಬಾತ ಬೆದರಿಕೆ ಹಾಕಿರುವುದಾಗಿ ಎಸ್ಡಿಪಿಐ ಕಾರ್ಯಕರ್ತರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

 

By suddi9

Leave a Reply

Your email address will not be published. Required fields are marked *