ಮೂಡುಬಿದರೆ: ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದ ಸ್ಪರ್ಧೆಯ ಮೊದಲ ದಿನವಾದ ಸೋಮವಾರ ದs.ಕ ಜಿಲ್ಲೆ ಮುನ್ನಡೆ ಸಾಧಿಸಿದ್ದು, ರಾಜ್ಯದ ವಿವಿಧ ತಂಡಗಳ ಕ್ರೀಡಾಪಟುಗಳು 3 ಹೊಸ ಕೂಟ ದಾಖಲೆ ಹಾಗೂ ಒಂದು ದಾಖಲೆಯನ್ನು ಸರಿಗಟ್ಟಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 40 ಅಂಕ ಹಾಗೂ ಬಾಲಕರ 16 ಅಂಕಗಳನ್ನು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ತಂಡ ಸ್ಪರ್ಧೆಯ ಮೊದಲ ದಿನ ಮುನ್ನಡೆ ಸಾಧಿಸಿದೆ. ಬಾಲಕರ ವಿಭಾಗದಲ್ಲಿ ಉಡುಪಿ ಹಾಗೂ ಬಾಲಕಿರ ವಿಭಾಗದಲ್ಲಿ ವಿದ್ಯಾನಗರ ಕ್ರೀಡಾ ಹಾಸ್ಟೆಲ್ ಮತ್ತು ಚಿಕ್ಕಮಗಳೂರು ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ.
3 ಹೊಸ ಕೂಟದಾಖಲೆ:
ಶಾಟ್ಪುಟ್ ಅನ್ನು 14.72 ಮೀ. ಎಸೆದ ಮೈಸೂರು ಜಿಲ್ಲೆಯ ಮಹಮ್ಮದ್ ಶಕ್ಲೇನ್ ಅಹಮ್ಮದ್ ಕೂಟ ದಾಖಲೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಮತ್ತೋರ್ವ ಶಾಟ್ಪುಟ್ ಎಸೆತಗಾರ ಮನುಶ್ 14.20 ಮೀ. ಎಸೆದು ದ್ವೀತಿಯ ಸ್ಥಾನಿಯಾಗಿ ದಾಖಲೆಯನ್ನು ಉತ್ತಮಪಡಿಸಿದ್ದಾನೆ. 2013-14ರಲ್ಲಿ ಮಸೂದ್ ಅಹಮ್ಮದ್ ಹಾಸನ ಮಾಡಿರುವ 13.63 ದಾಖಲೆಯಾಗಿತ್ತು. ಬಾಲಕರ ವಿಭಾಗದಲ್ಲಿ 400ಮೀ. ಓಟವನ್ನು ದಕ್ಷಿಣ ಕನ್ನಡ ಜಿಲ್ಲೆಯ ರೋಹನ್ ಡಿ 50.5 ಸೆಕಂಡ್ಸ್ನಲ್ಲಿ ಕ್ರಮಿಸಿ ಹೊಸ ಕೂಟ ದಾಖಲೆ ಮಾಡಿದ್ದಾರೆ. ವಿದ್ಯಾನಗರ ಕ್ರೀಡಾ ಹಾಸ್ಟೆಲ್ನ ಕುಮಾರ್ ವೈ.ಐ ದ್ವಿತೀಯ ಸ್ಥಾನಿಯಾಗಿದ್ದು, 50.7 ಸೆಕೆಂಡ್ಸ್ ಕ್ರಮಿಸಿ ಹಿಂದಿನ ದಾಖಲೆಯನ್ನು ಉತ್ತಮ ಪಡಿಸಿದ್ದಾರೆ. ಅದೇ ಕ್ರೀಡಾ ಹಾಸ್ಟೆಲ್ನ ಓಟಗಾರ ರಾಜು ವೈ.ಯು 2014-15ರಲ್ಲಿ ಮಾಡಿದ್ದ 51.6 ಸೆಕೆಂಡ್ಸ್ ದಾಖಲೆ ಹಳೆಯ ದಾಖಲೆಯಾಗಿದೆ.
ಬಾಲಕಿಯರ ಎತ್ತರಜಿಗಿತದಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಆಳ್ವಾಸ್ನ ಎಸ್.ಬಿ ಸುಪ್ರಿಯಾ 1.56 ಮೀ ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 2011-12ರಲ್ಲಿ ಬೆಂಗಳೂರು ಉತ್ತರದ ಜೀನ್ ಲವಸ್ತ್ಯಾ ಒಲಿವೆರಿಯಾ 1.55 ಎತ್ತರ ಜಿಗಿದಿದ್ದರು.
ವಿದ್ಯಾನಗರ ಕ್ರೀಡಾ ಹಾಸ್ಟೆಲ್ನ ಧನೇಶ್ವರಿ ಎ.ಟಿ 100ಮೀ ಅನ್ನು 12.5 ಸೆಕೆಂಡ್ಸ್ನಲ್ಲಿ ಕ್ರಮಿಸಿ, 2007-08ರಲ್ಲಿ ಕೂಡಗಿಯ ರೆಬೆಕಾ ಜೋಸ್, 2010-11ರಲ್ಲಿ ದ.ಕ ಜಿಲ್ಲೆಯ ವರ್ಷಾ ಹಾಗೂ 2014-15ರಲ್ಲಿ ವಿದ್ಯಾನಗರ ಕ್ರೀಡಾ ಹಾಸ್ಟೆಲ್ನ ಕಾವೇರಿ.ಎಲ್ ಪಾಟೇಲ್ ಮಾಡಿದ್ದ 12.5 ಸೆಕೆಂಡ್ಸ್ನ ದಾಖಲೆಯನ್ನು ಸರಿಗಟ್ಟಿದ್ದಾರೆ.
