ಮೂಲ್ಕಿ, ಮೇ 4-ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಕೊಕ್ಕರಕಲ್ ಕ್ಷೀರಸಾಗರ ಹಾಲಿನ ಸೊಸೈಟಿ ಬಳಿ ಬೈಕ್ ಮತ್ತು ರಿಕ್ಷಾ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟರೆ ಸಹಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಸುರತ್ಕಲ್ ಕಾಟಿಪಳ್ಳ ಎರಡನೇ ಬ್ಲಾಕಿನ ನಿವಾಸಿ ಕರೀಂ(50), ಅಪಘಾತದಲ್ಲಿ ಮೃತಪಟ್ಟಿದ್ದು, ಸಹ ಸವಾರನಾಗಿದ್ದ ಆತನ ಮಗ ಹಫೀಸ್(19) ತೀವ್ರ ಗಾಯಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರತ್ಕಲ್ಲಿನ ಕಾಟಿಪಳ್ಳದಿಂದ ಹೆಜಮಾಡಿಯ ಕನ್ನಂಗಾರು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಕೊಕ್ಕರ್ಕಲ್ ಕ್ಷೀರಸಾಗರದ ಬಳಿಯ ಹೆದ್ದಾರಿಯಲ್ಲಿ ನಾಯಿಯೊಂದು ಅಡ್ಡ ಬಂದ ಕಾರಣ ತಪ್ಪಿಸಲು ಯತ್ನಿಸಿದ ಸಂದರ್ಭದಲ್ಲಿ ಎದುರು ಬದಿಯಿಂದ ಹೆಜಮಾಡಿಯಿಂದ ಹಳೆಯಂಗಡಿಯತ್ತ ಮಂಜುಗಡ್ಡೆಯನ್ನು ತುಂಬಿಕೊಂಡು ತೆರಳುತ್ತಿದ್ದ ರಿಕ್ಷಾ ಬೈಕ್ಗೆ ಡಿಕ್ಕಿಹೊಡೆಯಿತು. ಡಿಕ್ಕಿಯ ಹೊಡೆತಕ್ಕೆ ಬೈಕ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ರಸ್ತೆಯಲ್ಲಿದ್ದ ಡಿವೈಡರ್ ಮೇಲೆ ಬಿದ್ದ ಕಾರಣ ಕರೀಂ ರಸ್ತೆಗೆ ಅಪ್ಪಳಿಸಲ್ಪಟ್ಟು ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟರು ಎಂದು ಹಫೀಸ್ ಮೂಲ್ಕಿ ಠಾಣೆಯಲ್ಲಿ ಘಟನೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
ಅಫಘಾತ ನಡೆದ ಸಂದರ್ಭ ಹೆದ್ದಾರಿಯಲ್ಲಿ ಸುಮಾರು ಇಂದು ತಾಸು ರಸ್ತೆ ಸಂಚಾರಕ್ಕೆ ತಡೆ ಉಂಟಾಯಿತು. ಗಾಯಾಳುಗಳನ್ನು ಸಾಗಿಸಲು ವಿಳಂಬವಾದುದರಿಂದ ಕರೀಂ ಮೃತ ಪಡಲು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಅಪಘಾತದಲ್ಲಿ ರಿಕ್ಷಾ ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಳೆದ ಹಲವಾರು ತಿಂಗಳಿಂದ ಇಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದ್ದು ಇತ್ತೀಚೆಗೆ ಅಫಘಾತಗಳ ಸರಣಿಯೇ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

