ಮೂಡುಬಿದಿರೆ: ಪ್ರಶಾಂತ್ ಪೂಜಾರಿಯವರ ಹತ್ಯೆಯ ಘಟನೆ ದುರದೃಷ್ಟಕರ. ಹಾಗಾಗಬಾರದಿತ್ತು ಹೆತ್ತ ಕರುಳಿನ ನೋವು ನಮಗೆ ಅರ್ಥವಾಗುತ್ತದೆ. ಆ ಸಂದರ್ಭದಲ್ಲಿ ಬರಲಾಗಲಿಲ್ಲ. ತಡವಾಗಿಯಾದರೂ ಬಂದು ನೋವಿನಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ. ಆಶ್ರಮ ಪ್ರಶಾಂತ್ ಕುಟುಂಬದ ನೋವಿಗೆ ಸ್ಪಂದಿಸುತ್ತದೆ. ಸರ್ಕಾರದಿಂದ ಘಟನೆಯ ಬಗ್ಗೆ ಅಗತ್ಯ ಕ್ರಮ ಜರಗಿಸಬೇಕಾಗಿದೆ ಎಂದು ಆಧ್ಯಾತ್ಮಿಕ ಗುರು ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಸಂಜೆ ಕಳೆದ ಅ9ರಂದು ಬರ್ಬರವಾಗಿ ಹತ್ಯೆಗೀಡಾದ ಪ್ರಶಾಂತ ಪೂಜಾರಿಯವರ ನಿವಾಸಕ್ಕೆ ತೆರಳಿ ಹೆತ್ತವರಿಗೆ ಸಾಂತ್ವನ ಹೇಳಿ ಆಶ್ರಮದ ವತಿಯಿಂದ 1 ಲಕ್ಷ ರೂ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಕಾರ್ಯಾಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಯುವಕರನ್ನು ಮುಂದಿಟ್ಟುಕೊಂಡು ರಾಜಕಾರಣ ಸರಿಯಲ್ಲ. ಯುವಕರನ್ನು ಸಂಘರ್ಷದ ಹಾದಿಯಲ್ಲಿ ಮುನ್ನಡೆಸದೇ ಸಾಮರಸ್ಯದಿಂದ ಬೆಳೆಸಬೇಕು. ನಡೆದಿರುವ ಪ್ರಕರಣದ ಬಗ್ಗೆ ಸರಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದರು. ಸ್ವಾಮೀಜಿಯವರ ಜತೆ ತಾಯಿ ಶಾರದಮ್ಮ, ಪತ್ನಿ ರಜನೀ ಚಂದ್ರಶೇಖರ್, ಸಂಚಾಲಕ ಮಧು ಆಚಾರ್ಯ, ಗಿರೀಶ್ ಕಾಮತ್ , ರಾಜೇಶ್ ಭಟ್, ಬಿಜೆಪಿ ಮುಖಂಡರಾದ ಜಗದೀಶ ಅಧಿಕಾರಿ ಉಪಸ್ಥಿತರಿದ್ದರು.

