ಮೂಡುಬಿದಿರೆ: ಕರಾವಳಿ ಜಿಲ್ಲೆಗಳ ಸಾಂಸ್ಕೃತಿಕ ಶ್ರೀಮಂತಿಕೆ ರಾಜ್ಯದ ಉಳಿದೆಲ್ಲಜಿಲ್ಲೆಗಳ ಸಾಂಸ್ಕೃತಿಕ ಕೊಡುಗೆಗಳಿಗಿಂತಲೂ ಹಿರಿದಾದದ್ದು . ಸಾಧಕರು ಮತ್ತು ಸಾಧನೆಯ ಪರಂಪರೆ ಕರಾವಳಿಗೆ ಗೌರವ ತಂದಿರುವುದು ಮಾತ್ರವಲ್ಲ ಯೋಗ್ಯತೆ, ಅರ್ಹತೆ ಮತ್ತು ಗುಣಮಟ್ಟದಲ್ಲಿಯೂ ಇಲ್ಲಿನ ಸಾಹಿತ್ಯದ ಕೊಡುಗೆ ಶ್ರೇಷ್ಠವಾದದ್ದು. ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಮೂಲಕ ಕನ್ನಡ ಸಂಘವು ನೀಡುತ್ತಿರುವ ಕೊಡುಗೆ ಸಾಂಸ್ಕೃತಿಕ ಶ್ರೀಮಂತಿಕೆಯ ದಾಖಲೀಕರಣ ಹಾಗೂ ಯಾವುದೇ ಅಕಾಡೆಮಿಗಳೂ ಮಾಡಿರದ ಸಾಧನೆಯಾಗಿದೆ. ಹಾಗಾಗಿ ಇಲ್ಲಿ ನಾಡಿಗೆ ನಮಸ್ಕಾರ ಎಂದು ಸಾಧಕರ ಕೃತಿಗಳನ್ನು ಹೆಸರಿಸುವ ಬದಲಾಗಿ ನಾಡೋಜರಿಗೆ ನಮಸ್ಕಾರ ಎನ್ನಬೇಕು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾವಿಜ್ಞಾನಿ ಡಾ.ಯು.ಪಿ. ಉಪಾಧ್ಯಾಯ ಹೇಳಿದರು. ಅವರು ಕಾಂತಾವರ ಕನ್ನಡ ಸಂಘದ ವತಿಯಿಂದ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದಲ್ಲಿ ರವಿವಾರ ಆರಂಭಗೊಂಡ ಎರಡು ದಿನಗಳ ಕಾಂತಾವರ ಉತ್ಸವ 2015 ಉದ್ಘಾಟನಾ ಸಮಾರಂಭದಲ್ಲಿ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ 123 – 136 ಹೊಸ ಹೊತ್ತಗೆಗಳು, ‘ನುಡಿನಮನ’ ಉಪನ್ಯಾಸಗಳ ವಾಷರ್ಿಕ ಗ್ರಂಥಸರಣಿ ‘ನುಡಿಹಾರ 7’ಪುಸ್ತಕಗಳ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
‘ನಾಡಿಗೆ ನಮಸ್ಕಾರ’ ಗ್ರಂಥಮಾಲೆ ಕರಾವಳಿ ಜಿಲ್ಲೆಯ ಸಾಮಾಜಿಕ ಸಾಂಸ್ಕೃತಿಕ ಅಧ್ಯಯನಕಾರರಿಗೆ ಉಪಯುಕ್ತ ಆಕರ, ಅಧ್ಯಯನವಸ್ತುವಾಗಿದೆ ಎಂದವರು ಅಭಿಪ್ರಾಯಪಟ್ಟರು.

ಕಾಂತಾವರ ಉತ್ಸವದಲ್ಲಿ ನಾಡಿಗೆ ನಮಸ್ಕಾರ: ಪುನರೂರು ಅವರಿಗೆ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ ಪ್ರದಾನ
ಸಂಘವು 40ಕ್ಕೆ ಕಾಲಿರಿಸುವ ಸಂದರ್ಭದಲ್ಲಿ ಸ್ಥಾಪಿಸಲಾಗಿರುವ ವಿಶಿಷ್ಟ ಮತ್ತು ವಿಶೇಷವಾದ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಪ್ರಥಮ ಕರ್ನಾ ಟಕ ರಾಜ್ಯ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪುನರೂರು ಅವರು ಕನ್ನಡ ಭಾಷೆಯು ಅತ್ಯಧಿಕ ಜ್ಞಾನಪೀಠಗಳನ್ನು ಪಡೆದು ಇತರ ಭಾಷೆಗಳಿಗಿಂತ ಮೇರು ಸಾಧನೆ ದಾಖಲಿಸಿರಬಹದು. ಆದರೆ ಕನ್ನಡ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಓರ್ವ ಶಿಕ್ಷಕ ಹಲವು ತರಗತಿಗಳಿಗೆ ಕಲಿಸಬೇಕು, ಬಡಿಸಬೇಕು ಎನ್ನುವ ದುಸ್ಥಿತಿ ಇದೆ. ಹೀಗಾಗಿ ಮುಂದಿನ ಐದು ವರ್ಷಗಳಲ್ಲಿ ಕನ್ನಡ ಶಾಲೆಗಳೇ ಇಲ್ಲವಾಗುವ ಪರಿಸ್ಥಿತಿ ಇದೆ ಎಂದು ವಿಷಾಧಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಅಧ್ಯಕ್ಷತೆವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಭೈರಪ್ಪ ಗ್ರಾಮೀಣ ಪರಿಸರದ ಅಧ್ಯಯನದ ಮೂಲ ಕ ವಿಶ್ವವಿದ್ಯಾನಿಲಯಗಳು ಜನರನ್ನು ತಲುಪಲು ಸಾಧ್ಯ ಎನ್ನುವುದು ಸ್ಪಷ್ಟವಾಗಿದೆ. ವಿವಿಗಳು ಸಮಾಜದ ಜನತೆಗಾಗಿ ಸೇವೆ ಸಲ್ಲಿಸುವ ಸಂಸ್ಥೆಗಳಾಗಬೇಕು. ಈ ನಿಟ್ಟಿನಲ್ಲಿ ವಿವಿಯ ಸ್ನಾತಕೋತ್ತರ ಪದವಿಯ ನಾಲ್ಕನೇ ಸೆಮಿಸ್ಟರ್ನಲ್ಲಿ ಗ್ರಾಮೀಣ ಅಧ್ಯಯನ, ಪ್ರಬಂಧ ಮಂಡನೆಗೆ ಅವಕಾಶ ಕಲ್ಪಿಸುವ ಪಠ್ಯನೀತಿ ರೂಪಿಸಲಾಗುತ್ತಿದೆ ಎಂದವರು ಹೇಳಿದರು.
ವರಕವಿ ಮುದ್ದಣದ ಹುಟ್ಟೂರಾದ ಕಾಂತಾವರದ ಪಕ್ಕದ ನಂದಳಿಕೆಯಲ್ಲಿ ಮುದ್ದಣ ಅಧ್ಯಯನ ಪೀಠ ಸ್ಥಾಪಿಸಬೇಕು ಎನ್ನುವ ಬೇಡಿಕೆ ಇದೆ. ಇದಕ್ಕೆ ಶೇ 50ರ ಕೊಡುಗೆ ಸಾರ್ವಜನಿಕ ವಲಯದಿಂದ ಬಂದಾಗ ವಿವಿಯು ಈ ಪೀಠ ಸ್ಥಾಪನೆಗೆ ಮುಂದಾಗಲು ಸಾಧ್ಯವಾಗುತ್ತದೆ ಎಂದ ಅವರು ಯಕ್ಷಗಾನ ಕಲೆಯ ಜತೆಗೆ ಕನ್ನಡ ಭಾಷೆಯನ್ನು ಬೆಳೆಸುತ್ತಿರುವ ಕರಾವಳಿಯ ಜನತೆ ಸಾಂಸ್ಕೃತಿಕವಾಗಿಯೂ ಮುಂದುವರೆದಿರುವುದು, ಕಾಂತಾವರ ಕನ್ನಡ ಸಂಘದಂತಹ ನಾಡು ನುಡಿ ಸೇವೆಯ ಸಂಸ್ಥೆಗಳು ರಾಜ್ಯಕ್ಕೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ ಮತ್ತು ಅನುಕರಣೀಯ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆಯವರು ಕರ್ನಾಟಕ ಭೌಗೋಳಿಕವಾಗಿ ಏಕೀಕರಣಗೊಂಡಿದ್ದರೂ ಕನ್ನಡದ ಮನಸ್ಸುಗಳು ಇಂದೂ ಒಂದಾಗಿಲ್ಲ. ಸಾಂಸ್ಕೃತಿಕವಾಗಿ ನಾವು ಏಕೀಕರಣವಾಗಬೇಕು ಎನ್ನುವ ಧ್ವನಿಯ ಮೂರ್ತ ರೂಪವಾಗಿ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ ಸ್ಥಾಪಿಸಲಾಗುತ್ತಿದೆ ಎಂದರು.
ಗ್ರಂಥ ಮಾಲೆಯಲ್ಲಿ ಅನಾವರಣಗೊಂಡ ಸಾಧಕರನ್ನು, ಕೃತಿಕಾರರನ್ನು, ಪ್ರಾಯೋಜಕರನ್ನು ಗೌರವಿಸಲಾಯಿತು.
ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಸಂಪಾದಕ ಡಾ.ಬಿ.ಜನಾರ್ಧನ ಭಟ್, ನುಡಿಹಾರ ಮಾಲಿಕೆಯ ಸಂಪಾದಕ ಡಾ.ಎಸ್. ಆರ್. ಅರುಣ ಕುಮಾರ್ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಸರೋಜಿನಿ ನಾಗಪ್ಪಯ್ಯ ಮೇನಾಲ ವಂದಿಸಿ ವಿಠಲ ಬೇಲಾಡಿ ಕಾರ್ಯಕ್ರಮ ನಿರ್ವಹಿಸಿದರು.
ಅಪರಾಹ್ನ ಕು. ಆತ್ರೇಯಿ ಕೃಷ್ಣಾ ಕೆ. ಕಾರ್ಕಳ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಗಮಕಿ ಚಂದ್ರಶೇಖರ ಕೆದ್ಲಾಯ ಅವರಿಂದ ಭರತೇಶ ವೈಭವ ವಾಚನ ಮುನಿರಾಜ ರೆಂಜಾಳರಿಂದ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.
ನಾಡಿಗೆ 136ನೇ ನಮಸ್ಕಾರ……….!
ನಾಡಿಗೆ ನಮಸ್ಕಾರ’ ಗ್ರಂಥಮಾಲೆಯಲ್ಲಿ 123) ದ.ಕನ್ನಡದ ನವೋದಯದ ಕಣ್ವ : ಬೆನಗಲ್ ರಾಮರಾವ್ (ಲೇ: ನಂದಳಿಕೆ ಬಾಲಚಂದ್ರ ರಾವ್) 124)ದಲಿತೋದ್ಧಾರದ ಗುರು: ಕುದ್ಮಲ್ ರಂಗರಾವ್ (ಲೇ: ಲಕ್ಷ್ಮಣ ಕೊಡಸೆ) 125) ಶಿಕ್ಷಣತಜ್ಞ ಮತ್ತು ಅರ್ಥವಂತ: ಅಮ್ಮೆಂಬಳ ಸುಬ್ಬರಾಯ ಪೈ (ಲೇ: ಗಣೇಶ ಕಾಮತ್ ಮೂಡುಬಿದಿರೆ) 126) ಹಾಡು ಹೊಸೆಯುವ ಕತೆಕಟ್ಟುವ ಮೂಕಜ್ಜಿ (ಲೇ: ಡಾ.ಗಾಯತ್ರಿ ವಿ. ನಾವಡ) 127) ಭಾಗವತರ ಭಾಗವತ: ಹಿರಿಯ ಬಲಿಪ ನಾರಾಯಣ ಭಾಗವತ (ಲೇ: ಡಾ. ರಾಧಾಕೃಷ್ಣ ಬೆಳ್ಳೂರು) 128) ಕನ್ನಡದ ಕಲ್ಹಣ: ನೀರ್ಪಾಜೆ ಭೀಮಭಟ್ಟ (ಲೇ: ಹಿರಣ್ಯ ವೆಂಕಟೇಶ್ವರ ಭಟ್) 129) ಪ್ರಗತಿಪಥ ತೋರಿದ ಸೃಜನಶೀಲ ಚಿಂತಕ: ನಿರಂಜನ (ಲೇ: ಡಾ.ಧನಂಜಯ ಕುಂಬ್ಳೆ) 130) ಅನನ್ಯರಂಗಕರ್ಮಿ , ಅಪೂರ್ವ ಪುಸ್ತಕಪ್ರೇಮಿ: ಶ್ರೀಪತಿ ಮಂಜನಬೈಲು (ಲೇ: ಗೋಪಾಲ ವಾಜಪೇಯಿ) 131) ಬಹುಮುಖೀ ಸಂಶೋಧಕ: ಪ್ರೊ. ಎ.ವಿ.ನಾವಡ (ಲೇ: ಡಾ.ಕಬ್ಬಿನಾಲೆ ವಸಂತ ಭಾರದ್ವಾಜ) 132) ಪ್ರಗಲ್ಬ ಚಿಂತಕ, ಅರ್ಥವಿಹಾರಿ: ಪ್ರೊ.ಎಂ.ಪ್ರಭಾಕರ ಜೋಶಿ (ಲೇ: ಚಂದ್ರಶೇಖರ ಮಂಡೆಕೋಲು) 133) ಗಾನಕೋಗಿಲೆ: ಪಿ.ಕಾಳಿಂಗರಾವ್ (ಲೇ: ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ) 134) ಗಾನಯೋಗಿ ಅಜ್ಜನಗದ್ದೆ ಗಣಪಯ್ಯ ಭಾಗವತ (ಲೇ: ಜಿ.ಎಸ್. ಉಬರಡ್ಕ) 135) ಕೆ. ಶಿವಸುಬ್ರಹ್ಮಣ್ಯ ಅವರ ‘ಮೂರನೇ ಕಣ್ಣು’ (ಲೇ: ಡಾ. ಪ್ರದೀಪ್ಕುಮಾರ್ ಹೆಬ್ರಿ) 136) ಕಲಾವಸಂತದ ಮಾಮರ: ದೇವ್ದಾಸ್ ಶೆಟ್ಟಿ (ಲೇ: ಡಾ. ವಿಶ್ವನಾಥ ಕಾರ್ನಾ ಡು) ಕೃತಿಗಳನ್ನು ಲೊಕಾರ್ಪಣೆಗೊಳಿಸಲಾಯಿತು.
ಇದರೊಂದಿಗೆ ಈ ಗ್ರಂಥ ಮಾಲೆ ಒಟ್ಟು 13 ಕಂತುಗಳಲ್ಲಿ 136 ಸಾಧಕರನ್ನು ಕೃತಿರೂಪದಲ್ಲಿ ಪರಿಚಯಿಸಿ ಲೋಕಾರ್ಪಣೆಗೊಳಿಸಿದಂತಾಗಿದೆ. ಕರಾವಳಿ ಜಿಲ್ಲೆಗಳ ಈ ನಾಡು ನುಡಿಯ ಸಾಧಕರ ಬಗ್ಗೆ ನಾಡಿಗೆ ನಮಸ್ಕಾರ ಎನ್ನುವುದಕ್ಕಿಂತ ನಾಡೋಜರಿಗೆ ನಮಸ್ಕಾರ ಎನ್ನುವುದೇ ಸಾಧಕರಿಗೆ ಸಲ್ಲುವ ಶ್ರೇಷ್ಠ ಗೌರವ ಎಂದು ಡಾ. ಉಪಾಧ್ಯಾಯರು ಸಭೆಯಲ್ಲಿ ಅಭಿಪ್ರಾಯಪಟ್ಟರು.

