ಮೂಡುಬಿದರೆ:ನನ್ನ ಮಗ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪರೋಕ್ಷ ಬೆಂಬಲ ನೀಡಿದ ಅನೇಕ ಪ್ರಭಾವಿಗಳನ್ನು ಆರೋಪಿಗಳನ್ನಾಗಿಸಿ ಅವರ ಬಂಧನ ಆಗಬೇಕಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಕೊಡಬೇಕು ಎಂದು ಮೃತರ ತಾಯಿ ಯಶೋಧಾ ಪೂಜಾರಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಗನ ಕೊಲೆಯಲ್ಲಿ ನೇರವಾಗಿ ಭಾಗಿಯಾದ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ಕಾರ್ಯವನ್ನು ಅಭಿನಂದಿಸುತ್ತೇವೆ. ಆದರೆ ಕೊಲೆ ಪ್ರಕರಣದಲ್ಲಿ ಓರ್ವ ಜನಪ್ರತಿನಿಧಿ ಹಾಗೂ ಕೆಲ ಉದ್ಯಮಿಗಳು ಆರೋಪಿಗಳಿಗೆ ಪರೋಕ್ಷ ಬೆಂಬಲ ನೀಡಿದ್ದು ಅವರನ್ನು ಬಂಧಿಸದಂತೆ ಸ್ಥಳೀಯ ಪೊಲೀಸರಿಗೆ ಒತ್ತಡವಿದೆ. ಆದ್ದರಿಂದ ಪ್ರಭಾವಿಗಳು ಕೂಡ ಬಂಧನವಾಗಬೇಕಾಗಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಈ ಪ್ರಭಾವಿಗಳು ಬಂಧನವಾದರೆ ಮಾತ್ರ ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.
ಮಗನನ್ನು ಕಳಕೊಂಡು ನಾವು ದುಖದಲ್ಲಿದ್ದರು ಶಾಸಕ ಅಭಯಚಂದ್ರ ಸೌಜನ್ಯಕ್ಕಾದರು ಮನೆಗೆ ಬಂದು ಸಾಂತ್ವನ ಹೇಳಲಿಲ್ಲ. ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನನ್ನ ಮಗನನ್ನು ಕಿಡಿಗೇಡಿಯೆಂದು ಹೇಳಿ ಅಮಾನವೀಯವಾಗಿ ವರ್ತಿಸಿದ್ದಾರೆ, ಇದು ಖಂಡನೀಯ ಎಂದರು.
ನನ್ನ ಮನೆಗೆ ಸುಮಾರು 8.50 ಲಕ್ಷ ಬ್ಯಾಂಕ್ ಸಾಲವಿತ್ತು. ಅದಲ್ಲದೆ ಮನೆ ನಿರ್ಮಾಣ ಸಂದರ್ಭ ಚಿನ್ನಾಭರಣ ಅಡವಿಟ್ಟ ಸಾಲ, ಮಗ ಪ್ರಶಾಂತ್ ಮಾಡಿದ ಕೈಸಾಲವಿತ್ತು. ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ಹಿಂದೂ ಸಂಘಟನೆ ಕಾರ್ಯಕರ್ತರು, ವಿವಿಧ ಸ್ವಾಮೀಜಿಗಳು, ಉದ್ಯಮಿಗಳು ಸೇರಿ ಸುಮಾರು 20 ಲಕ್ಷ ಆರ್ಥಿಕ ನೆರವು ನೀಡಿ ನಮ್ಮ ಸಾಲದ ಹೊರೆಯನ್ನು ನಿವಾರಿಸಿದ್ದಾರೆ. ಅವರಿಗೆಲ್ಲಾ ನನ್ನ ಕುಟುಂಬ ಚಿರಋಣಿಯಾಗಿದೆ ಎಂದರು. ಪ್ರಶಾಂತ್ನ ತಂದೆ ಆನಂದ ಪೂಜಾರಿ, ತಂಗಿ ಪ್ರಮೀತಾ ಉಪಸ್ಥಿತರಿದ್ದರು.
