ಬಂಟ್ವಾಳ; ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ನಿವಾಸಿ ನಾಸಿರ್ ಎಂಬವರ್ನು ಕಳೆದ ಆಗಸ್ಟ್ ನಲ್ಲಿ ಹತ್ಯೆಗೈದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಅವರ ತಂದೆ ಮತ್ತು ಸಹೋದರರು ಆಗ್ರಹಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಾಸಿರ್ ತಂದೆ ಇಬ್ರಾಹಿಂ ಹಾಗೂ ಸಹೋದರರಾದ ಜಬ್ಬಾರ್ ಮತ್ತು ಮಹಮ್ಮದ್ ಅತಾವುಲ್ಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಈವರೆಗೂ ಬಂಧಿಸಿರುವುದಿಲ್ಲ. ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಿರುವುದಿಲ್ಲ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ, ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕು, ಕೊಲೆಗೀಡಾದ ನಾಸಿರ್ ಪತ್ನಿ ಹಾಗೂ ಮಕ್ಕಳಿಗೆ ಪರಿಹಾರವನ್ನು ಒದಗಿಸಬೇಕು, ಮುಂದಿನ 15 ದಿನದ ಒಳಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮನೆಮುಂದೆ ಕುಟುಂಬ ಸಮೇತರಾಗಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಸಚಿವ ಖಾದರ್ ಹೇಳಿಕೆ ಹಿಂಪಡೆಯಲು ಆಗ್ರಹ
ಕೊಲೆಗೀಡಾದ ನಾಸಿರ್ , ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು, ಕಳೆದ ವಿಧಾನಸಭಾ , ಲೋಕಸಭೆ ಹಾಗೂ ಗ್ರಾಮಪಂಚಾಯತ್ ಚುನಾವಣೆಯ ಕಾಲದಲ್ಲಿ ಕಾಂಗ್ರೇಸ್ ಪಕ್ಷದ ಗೆಲುವಿಗೆ ಶ್ರಮಿಸಿದ್ದರು. ಇದೀಗ ಆತ ಪಿಎಫ್ಐ ಕಾರ್ಯಕರ್ತ ಎಂದು ಸಚಿವ ಯು.ಟಿ.ಖಾದರ್ ಅವರು ಹಣೆಪಟ್ಟಿ ಕಟ್ಟಿರುವುದು ಖಂಡನೀಯ, ಅವರು ಈ ಹೇಳಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಸಜಿಪಮುನ್ನೂರು ಗ್ರಾಮದ ವಾರ್ಡ್ ಸಮಿತಿಯ ಯುವ ಕಾಂಗ್ರೇಸ್ ಅಧ್ಯಕ್ಷ ಉಮ್ಮರ್ ಫಾರೂಕ್ ಆಗ್ರಹಿಸಿದರು. ಸಚಿವ ಖಾದರ್ ಅವರ ಈ ಹೇಳಿಕೆ ತಮಗೆ ಹಾಗೂ ನಾಸಿರ್ ಅವರ ಕುಟುಂಬಕ್ಕೆ ಖೇದ ಉಂಟುಮಾಡಿದ್ದು, ತಕ್ಷಣ ಅವರು ಈ ಕುರಿತು ಕುಟುಂಬದ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು. ನಾಸಿರ್ ಕೊಲೆಯಾಗಿ 82 ದಿನ ಕಳೆದರೂ ಸಚಿವರಗಳಾದ ರಮಾನಾಥ ರೈ ಆಗಲೀ, ಖಾದರ್ ಆಗಲೀ ನಾಸಿರ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಸೌಜನ್ಯ ತೋರಿಲ್ಲ. ಚುನಾವಣಾ ಸಂದರ್ಭ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದ ಕಾರ್ಯಕರ್ತನ ನಿಷ್ಠೆಗೆ ಸಚಿವರು ಸ್ಪಂದಿಸದಿರುವುದು ದುರದೃಷ್ಟಕರ ಎಂದರು.

By suddi9

Leave a Reply

Your email address will not be published. Required fields are marked *