ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2015ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಹೊಸ್ತೋಟ ಮಂಜುನಾಥ ಭಾಗವತ, ಮಾರ್ಗೋಳಿ ಗೋವಿಂದ ಶೇರೆಗಾರ, ಸಂಪಾಜೆ ಶೀನಪ್ಪ ರೈ ಮತ್ತು ಲೀಲಾವತಿ ಬೈಪಾಡಿತ್ತಾಯ ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಡಾ.ಮೋಹನ ಕುಂಟಾರ್ ಅವರ ಯಕ್ಷಗಾನ ಸ್ಥಿತ್ಯಂತರ ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು ರೂ.25,000/- ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನು ಒಳಗೊಂಡಿದ್ದು ಕೃತಿ ಪ್ರಶಸ್ತಿಯು ರೂ.10,000/-ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ.

ಹಿರಿಯ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಅವರ ನೇತೃತ್ವದ ಆಯ್ಕೆ ಸಮಿತಿಯು ಯಕ್ಷಗಾನ ವಿದ್ವಾಂಸ ಪ್ರೊ.ಪಾದೆಕಲ್ಲು ವಿಷ್ಣುಭಟ್ಟ, ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಕೆ.ಚಿನ್ನಪ್ಪ ಗೌಡ ಅವರನ್ನು ಒಳಗೊಂಡಿದ್ದು ಈ ಹೆಸರುಗಳನ್ನು ಸರ್ವನುಮತದಿಂದ ಶಿಫಾರಸ್ಸು ಮಾಡಿದೆ.

.ಹೊಸ್ತೋಟ ಮಂಜುನಾಥ.

28 -1 hosdota manjunatha bhagavatha
ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ಅಧ್ಯಯನ, ಸಂಶೋಧನೆ ಮತ್ತು ಪ್ರಸಂಗ ರಚನೆಯ ಮೂಲಕ ಯಕ್ಷಗಾನಕ್ಕೆ ಮಹತ್ತ್ವದ ಕೊಡುಗೆ ನೀಡಿದ ವಿದ್ವಾಂಸರಾಗಿದ್ದಾರೆ. ಮೂರು ದಶಕಗಳಿಗೂ ಮೀರಿ ಯಕ್ಷಗಾನ ಕಲಿಕೆ. ಯಕ್ಷಗಾನ ಪ್ರಸಂಗ ರಚನೆ, ಕನ್ನಡ ಸಾಹಿತ್ಯ ಮತ್ತು ಛಂದಸ್ಸುಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಕನರ್ಾಟಕದ ಹಲವು ಊರು ಮತ್ತು ಮೇಳಗಳಲ್ಲಿ ಯಕ್ಷಗಾನ ಕಲಿಕಾ ಶಿಬಿರಗಳನ್ನು ಆಯೋಜಿಸಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಅಂಧರಿಗೆ ಯಕ್ಷಗಾನ ತರಬೇತು ನೀಡಿದ್ದಾರೆ. ಭಾಗವತಿಕೆ, ಮೃದಂಗವಾದನ, ವೇಷಭೂಷಣ, ಯಕ್ಷಗಾನ ಪ್ರಾತ್ಯಕ್ಷಿಕೆಯ ಶಿಬಿರಗಳು, ತಾಳಮದ್ದಲೆ- ಹೀಗೆ ಹಲವು ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡಿರುವ ಇವರು ಇನ್ನೂರೈವತ್ತಕ್ಕೂ ಹೆಚ್ಚು ಯಕ್ಷಗಾನದ ಪ್ರಸಂಗಳನ್ನು ರಚಿಸಿದ್ದು ಇಂದಿಗೂ ಒಂದು ದಾಖಲೆಯಾಗಿದೆ. ಇವರ ಕೆಲಸವು ಪ್ರಸಂಗಳು ಭಾರತದಾದ್ಯಂತ ಕನ್ನಡ, ಹಿಂದಿ ಮತ್ತು ಸಂಸ್ಕೃತಗಳಲ್ಲಿ ಪ್ರದರ್ಶನಗಳನ್ನು ಕಂಡಿವೆ. ಯಕ್ಷಗಾನದ ನೆನಪುಗಳನ್ನು ಮತ್ತು ಅನುಭವಗಳನ್ನು ಆಧರಿಸಿ ಬರೆದಿರುವ ಇವರ ಕೃತಿಗಳು ಜನಮನ್ನಣೆಗೆ ಪಾತ್ರವಾಗಿವೆ. ಅವಧೂತರಂತೆ ಸಂಚರಿಸುವ ಆಧ್ಯಾತ್ಮ ಪ್ರವೃತ್ತಿಯ ಶ್ರೀಯುತರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ಅಕಾಡೆಮಿ ವಿಶೆಷ ಪ್ರಶಸ್ತಿ-ಮೊದಲಾದ ಹಲವಾರು ಗೌರವಗಳಿಗೆ ಪಾತ್ರರಾಗಿರುವ ಹೊಸ್ತೋಟ ಅವರು ಯಕ್ಷಗುರುವಾಗಿ, ಯಕ್ಷಋಷಿಯಾಗಿ ಮೆರೆಯುತ್ತಿದ್ದಾರೆ. ವಿಶೇಷತಃ ಯಕ್ಷಗಾನಕ್ಕೆ ಹೊಸ್ತೋಟ ಅವರ ಕೊಡುಗೆಯು ದೀಪಕಲ್ಪವಾಗಿದೆ.

.ಮಾರ್ಗೋಳಿ ಗೋವಿಂದ ಸೇರೆಗಾರ.

28-2 margoli govinda seregara

ಮಾರ್ಗೋಳಿ ಗೋವಿಂದ ಸೇರೆಗಾರ ಅವರು ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಪ್ರಸಿದ್ಧ ಹಿರಿಯ ಕಲಾವಿದರಾಗಿದ್ದಾರೆ. ಮಾರ್ಗೋಳಿ ಇವರು ತಮ್ಮ ಹದಿಮೂರರ ಹರೆಯದಲ್ಲಿಯೇ ಬಣ್ಣದ ಬದುಕಿಗೆ ಪ್ರವೇಶ ಮಾಡಿದರು. ಕೌಟುಂಬಿಕ ಯಕ್ಷಗಾನೀಯ ಹಿನ್ನೆಲೆ ಇವರಿಗಿಲ್ಲವಾದರೂ, ಬಾಲ್ಯದಿಂದಲೇ ಇವರ ಮೈಮನ ಆವರಿಸಿದ್ದ ಯಕ್ಷಗಾನ ಕಲಾಸಕ್ತಿಯು ಇವರು ರಂಗಬಾಳುವೆಯನ್ನು ಆಲಂಗಿಸುವಂತೆ ಮಾಡಿತು. ದಶಾವತಾರಿ ಗುರು ವೀರಭದ್ರನಾಯಕ ಹಾಗೂ ಕೊಕ್ಕರ್ಣಿ ನರಸಿಂಹ ಕಮ್ತಿಯವರ ಗುರುತನದಲ್ಲಿ ಶಾಸ್ತ್ರೋಕ್ತ ಯಕ್ಷಶಿಕ್ಷಣವನ್ನು ಹೊಂದಿದ ಇವರು ಪೀಠಿಕಾ ವೇಷಗಳಲ್ಲಿ ಮಿಂಚಿ ಯಕ್ಷಗಾನ ಬಯಲು ವಿಶ್ವವಿದ್ಯಾಲಯದಲ್ಲಿ ತೇರ್ಗಡೆಹೊಂದುತ್ತಾ ಪ್ರಧಾನ ಸ್ತ್ರೀವೇಷಧಾರಿಯಾಗಿ ರಂಗದಲ್ಲಿ ಪ್ರೇಕ್ಷಕರ ಮನಸೂರೆಗೊಂಡರು.

ಶ್ರೀದೇವಿ, ಮೀನಾಕ್ಷಿ, ದ್ರೌಪದಿ, ಶಶಿಪ್ರಭೆ, ಚಿತ್ರಾಂಗದೆ, ಪ್ರಮೀಳೆ, ಮದನಾಕ್ಷಿ, ಕಾಂತಿಮತಿ – ಮೊದಲಾದ ಮುಖ್ಯ ಸ್ತ್ರೀಪಾತ್ರಗಳಿಗೆ ವಿಶೇಷ ಕಲಾವರ್ಚಸ್ಸು ನೀಡಿದ ಮಾರ್ಗೋಳಿಯವರು ಕಸೆ ಸ್ತ್ರೀವೇಷದಲ್ಲಂತೂ ಸಾಟಿ ಇಲ್ಲದ ಪ್ರತಿಭೆಯ ಪ್ರಭೆಯಲ್ಲಿ ಪ್ರಜ್ವಲಿಸಿದರು. ಹಿಂದೆ ತೆಂಕುತಿಟ್ಟಿಗೆ ಮೀಸಲು ಎಂಬಂತಿದ್ದ ದೇವಿ ಮಹಾತ್ಮೆಯ ಶ್ರೀದೇವಿ ಪಾತ್ರವನ್ನು ಬಡಗಿನ ರಂಗಸ್ಥಳದಲ್ಲಿ ಅದ್ಭುತ ನಿರ್ವಹಣೆಯಿಂದ ಪ್ರತಿಷ್ಠಾಪಿಸಿದ ಹಿರಿಮೆ ಮಾರ್ಗೋಳಿಯವರಿಗಿದೆ. ಯಕ್ಷಗಾನ ಕ್ಷೇತ್ರದ ಉನ್ನತ ಪ್ರತಿಭಾವಂತರಿಗೆ ಗುರುವಾದ ಗರಿಮೆ ಸೇರೆಗಾರ ಅವರಿಗೆ ಸಲ್ಲುತ್ತದೆ. ಸರ್ವಶ್ರೇಷ್ಠ ಸ್ತ್ರೀವೇಷಧಾರಿಯಾಗಿ ಯಕ್ಷಲೋಕದಲ್ಲಿ ಪರಂಪರೆಯ ಹೆಜ್ಜೆ ಮೂಡಿಸಿದ ಶ್ರೀಯುತರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕಾರ್ಕಳ ಶ್ರೀನಿವಾಸ ಉಡುಪ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ ಸೇರಿದಂತೆ ನೂರಾರು ಪ್ರತಿಷ್ಠಿತ ಸನ್ಮಾನ, ಗೌರವಗಳು ದೊರಕಿವೆ.

ಸಂಪಾಜೆ ಶೀನಪ್ಪ ರೈ

28-3sheenappa rai

ಸಂಪಾಜೆ ಶೀನಪ್ಪ ರೈ ಅವರು ತೆಂಕುತಿಟ್ಟು ಯಕ್ಷಗಾನದ ಹಿರಿಯ, ಸಮರ್ಥ ಮತ್ತು ಪರಿಪೂರ್ಣ ಕಲಾವಿದರೆಂದು ಖ್ಯಾತರಾಗಿದ್ದಾರೆ. ಸಂಪಾಜೆ ಅವರು ತೆಂಕುತಿಟ್ಟಿನ ಬಹುದೊಡ್ಡ ಆಸ್ತಿ. ತಂದೆಯವರಿಂದ ಅರ್ಥಗಾರಿಕೆಯನ್ನು, ಶ್ರೀ ಕುಂಬಳೆ ಕಣ್ಣನ್ ಅವರಿಂದ ನಾಟ್ಯಾಭ್ಯಾಸವನ್ನು, ಶ್ರೀ ಮಾಸ್ತರ್ ಕೇಶವ ಅವರಿಂದ ಭರತನಾಟ್ಯವನ್ನು, ಶ್ರೀ ಬಣ್ಣದ ಕುಟ್ಯಪ್ಪ್ಪು ಅವರಿಂದ ಬಣ್ಣಗಾರಿಕೆಯನ್ನು ಕಲಿತ ಶ್ರೀಯುತರು ಯಕ್ಷಗಾನಕ್ಕೆ ಸೃಜನಶೀಲ ಆಯಾಮವನ್ನು ತಂದುಕೊಟ್ಟವರಾಗಿದ್ದಾರೆ. ತನ್ನ ಹದಿಮೂರನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದ ಶೀನಪ್ಪ ರೈಗಳು ಇರಾ ಶ್ರೀ ಸೋಮನಾಥೇಶ್ವರ ಕುಂಡಾವು ಮೇಳ, ವೇಣೂರು ಮೇಳ, ಇರುವೈಲು ಮೇಳ, ಸೌಕೂರು ಮೇಳ, ಶ್ರೀ ಕಟೀಲು ದುರ್ಗಪರಮೇಶ್ವರಿ ಯಕ್ಷಗಾನ ಮಂಡಳಿ, ಶ್ರೀ ಎಡನೀರು ಮೇಳ, ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ – ಹೀಗೆ ವಿವಿಧ ಮೇಳಗಳಲ್ಲಿ ಅರುವತ್ತು ವರ್ಷಗಳ ತಿರುಗಾಟವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಯಕ್ಷಗಾನ ಪಾತ್ರಗಳನ್ನು ಸಮರ್ಥವಾಗಿ ರಂಗದ ಮೇಲೆ ಹೊಸ ಬಗೆಯಲ್ಲಿ, ಹೊಸ ವಿನ್ಯಾಸದಲ್ಲಿ ಕಟ್ಟಿಕೊಡುತ್ತಾ ಬಂದಿದ್ದಾರೆ. ದೇವೇಂದ್ರ, ಕರ್ಣ, ಅರ್ಜುನ, ಹಿರಣ್ಯಾಕ್ಷ, ದಕ್ಷ, ರಕ್ತಬೀಜಾಸುರ, ಇಂದ್ರಜಿತು, ಭಾನುಕೋಪ, ಶಿಶುಪಾಲ, ಕಾರ್ತವೀರ್ಯ, ಭೀಮ, ಮಹಿಷಾಸುರ, ತಾಮ್ರಧ್ವಜ, ಮಕರಾಕ್ಷ – ಇವು ಸಂಪಾಜೆಯವರಿಗೆ ಕೀರ್ತಿ ತಂದ ಪಾತ್ರಗಳು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ, ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಶಸ್ತಿ, ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಪ್ರಶಸ್ತಿ – ಹೀಗೆ ನೂರಕ್ಕಿಂತ ಹೆಚ್ಚು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿರುವ ಶ್ರೀಯುತರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ.

.ಲೀಲಾವತಿ ಬೈಪಾಡಿತ್ತಾಯ.

28-4  leelavathi baipadittaya

ಲೀಲಾವತಿ ಬೈಪಾಡಿತ್ತಾಯ ಅವರು ತೆಂಕುತಿಟ್ಟು ಯಕ್ಷಗಾನದ ಭಾಗವತರಾಗಿ ಸುಮಾರು ಮೂವತ್ತು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಬೈಪಾಡಿತ್ತಾಯ ಅವರು ಅಗ್ರಮಾನ್ಯ ಮಹಿಳಾ ಭಾಗವತರಾಗಿ ಯಕ್ಷಗಾನಕ್ಕೆ ಮಹಿಳಾ ಸಂವೇದನೆಯನ್ನು ತುಂಬಿದವರಾಗಿದ್ದಾರೆ. ತೆಂಕುಶೈಲಿಯಲ್ಲಿ ಖಚಿತ ಹಿಡಿತವುಳ್ಳ ಆಕರ್ಷಕ ಶಾರೀರದ ಗಾಯಕಿ ಶ್ರೀಮತಿ ಬೈಪಾಡಿತ್ತಾಯರು ಸಾಹಿತ್ಯ ಶುದ್ಧಿ, ಮಾಧುರ್ಯ, ಸೃಜನಶೀಲ ಗಾನ ಪ್ರಯೋಗ ಮತ್ತು ಜನಪ್ರಿಯತೆಗಳಲ್ಲಿ ವಿಶಿಷ್ಟ ಅಧ್ಯಾಯವನ್ನು ನಿರ್ಮಿಸಿದ್ದಾರೆ. ಮಧೂರು ಪದ್ಮನಾಭ ಸರಳಾಯರಲ್ಲಿ ಸಂಗೀತಾಭ್ಯಾಸ ಮತ್ತು ಪತಿ ಮದ್ಲೆಗಾರ ಕೆ.ಹರಿನಾರಾಯಣ ಬೈಪಾಡಿತ್ತಾಯರಿಂದ ಭಾಗವತಿಕೆಯ ಅಭ್ಯಾಸ ಮಾಡಿದ ಇವರು ಪುತ್ತೂರು ಮೇಳ, ಸುಬ್ರಹ್ಮಣ್ಯ ಮೇಳ, ಅರುವ ಮೇಳ, ಕುಂಬ್ಳೆ ಮೇಳ, ಬಪ್ಪನಾಡು ಮೇಳಗಳಲ್ಲಿ ಭಾಗವತರಾಗಿ ದುಡಿದು ಪುರುಷ ಪ್ರಧಾನವಾದ ಯಕ್ಷಗಾನ ಕಲೆಯಲ್ಲಿ ಮಹಿಳೆಯರು ಕೂಡಾ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಯಕ್ಷಗಾನ ಗುರುವಾಗಿಯೂ ಸೇವೆ ಸಲ್ಲಿಸಿರುವ ಇವರು ಭಾಗವತಿಕೆಯ ತರಬೇತಿಯನ್ನು ಯಶಸ್ವಿಯಾಗಿ ನೀಡಿದ್ದಾರೆ. ರಾಣಿ ಅಬ್ಬಕ್ಕ ಪುರಸ್ಕಾರ, ಯಕ್ಷಪ್ರಮೀಳ ಪ್ರಶಸ್ತಿ, ಅಗರಿ ಪ್ರಶಸ್ತಿ, ರಾಮ ಗಾಣಿಗ ಪ್ರಶಸ್ತಿ – ಹೀಗೆ ಹಲವಾರು ಸನ್ಮಾನ, ಗೌರವಗಳಿಗೆ ಪಾತ್ರರಾಗಿರುವ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರು ಚಲನಚಿತ್ರ ‘ಗ್ರಹಣ’ದಲ್ಲಿ ಭಾಗವತರಾಗಿ ಮಿಂಚಿದ್ದಾರೆ.

.ಡಾ.ಮೋಹನ ಕುಂಟಾರ್ – ‘ಯಕ್ಷಗಾನ ಸ್ಥಿತ್ಯಂತರ’ ಕೃತಿ.

28-5Dr. Mohana Kuntar
ಯಕ್ಷಗಾನ ವಿದ್ವತ್ ವಲಯದಲ್ಲಿ ತನ್ನ ಅಧ್ಯಯನ, ಸಂಶೋಧನೆ ಮತ್ತು ಬರವಣಿಗೆಗಳಿಂದ ಮಾನ್ಯತೆ ಪಡೆದಿರುವ ಡಾ.ಮೋಹನ ಕುಂಟಾರ್ ಅವರ ಯಕ್ಷಗಾನ ಸ್ಥಿತ್ಯಂತರವು ಒಂದು ಮೌಲಿಕ ಗ್ರಂಥವಾಗಿದೆ. ಈ ಗ್ರಂಥದಲ್ಲಿರುವ ಇಪ್ಪತ್ತಮೂರು ಲೇಖನಗಳಲ್ಲಿ ಯಕ್ಷಗಾನದ ವಿವಿಧ ವಿಷಯಗಳು ಮತ್ತು ಪರಿಕಲ್ಪನೆಗಳ ಬಗೆಗೆ ಲೇಖಕರು ಚರ್ಚಿಸಿದ್ದಾರೆ. ಯಕ್ಷಗಾನದ ಪ್ರಸ್ತುತತೆ, ಅದರ ಧಾರ್ಮಿಕ ಸಂಚಲನ, ಸಾಂಸ್ಕೃತಿಕ ಹಿನ್ನೆಲೆ, ಯಕ್ಷಗಾನದ ಸ್ಥಿತ್ಯಂತರಗಳು, ಯಕ್ಷಗಾನ ಅರ್ಥಗಾರಿಕೆಯ ಭಾಷಿಕ ನೆಲೆಗಳು, ವಾಚಿಕತೆ ಮತ್ತು ಸಾಂಸ್ಕೃತಿಕ ಅನನ್ಯತೆ, ಪ್ರಯೋಗ ಮತ್ತು ಪ್ರದರ್ಶನ – ಹೀಗೆ ಶಾಸ್ತ್ರೀಯ ಅಧ್ಯಯನದ ಹಿನ್ನೆಲೆಯಿಂದ ಪ್ರಾಯೋಗಿಕ ರೂಪಗಳನ್ನು ಪರಿಶೀಲಿಸಿ ಮಹತ್ತ್ವದ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.

ಸಂಶೋಧನೆಯ ಶಿಸ್ತಿನಿಂದ ರೂಪುಗೊಂಡ ಹಿರಿಮೆ ಈ ಗ್ರಂಥಕ್ಕೆ ಸಲ್ಲುತ್ತದೆ. ಅನುಭವ, ಅಧ್ಯಯನ, ಕ್ಷೇತ್ರಕಾರ್ಯ ಮತ್ತು ಒಳನೋಟಗಳ ಕುಲುಮೆಯಲ್ಲಿ ಸಿದ್ಧವಾಗಿರುವ ಈ ಕೃತಿಯು ಯಕ್ಷಗಾನ ಕಲೆಯೊಂದರ ಸಂಕೀರ್ಣತೆ ಮತ್ತು ವಿಭಿನ್ನ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಒಂದು ಸಮರ್ಥ ಆಕರಗ್ರಂಥವಾಗಿದೆ. ಯಕ್ಷಗಾನದ ಅರ್ಥಗಾರಿಕೆ ಮತ್ತು ವೇಷಭೂಷಣಗಳ ಬಗೆಗೆ ಡಾ.ಕುಂಟಾರ್ ಅವರು ನೀಡಿರುವ ಮಾಹಿತಿಗಳು ಬಹಳ ಅಧಿಕೃತವಾಗಿವೆ. ವಿಶ್ಲೇಷಣಾತ್ಮಕವಾಗಿರುವ ಅವರ ಲೇಖನಗಳು ಯಕ್ಷಗಾನದ ಬಗೆಗಿನ ನಮ್ಮ ತಿಳುವಳಿಕೆಯನ್ನು ವಿಸ್ತರಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ.

ಇಬ್ಬರು ವಿದ್ವಾಂಸರಿಗೆ ನೀಡಲಾಗುತ್ತಿದ್ದ ಯಕ್ಷಮಂಗಳ ಪ್ರಶಸ್ತಿಯನ್ನು ಈ ಬಾರಿ ನಾಲ್ಕುಮಂದಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ನ.7ರಂದು ಶನಿವಾರ ಅಪರಾಹ್ನ 3 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಕೆ.ಚಿನ್ನಪ್ಪ ಗೌಡ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *