ಹೈದರಾಬಾದ್: ಹೈದರಾಬಾದಿನ ತರುಣನೊಬ್ಬ ಪ್ರಮುಖ ಇ-ಕಾಮರ್ಸ್ ವಾಣಿಜ್ಯ ಸಂಸ್ಥೆಯಾಗಿರುವ ಫ್ಲಿಪ್ ಕಾರ್ಟ್‌ಗೆ 20 ಲಕ್ಷ ರೂ.ಗಳಿಗೂ ಮೀರಿದ ಪ್ರಮಾಣದಲ್ಲಿ ವಂಚನೆ ಎಸಗಿರುವುದು ಇದೀಗ ಬೆಳಕಿಗೆ ಬಂದಿದೆ.
ಹೈದರಾಬಾದಿನ ವನಸ್ಥಳೀಪುರಂ ನಿವಾಸಿಯಾಗಿರುವ 32ರ ಹರೆಯದ ವೀರ ಸ್ವಾಮಿ ರೆಡ್ಡಿ ಎಂಬಾತ ಫ್ಲಿಪ್ ಕಾರ್ಟ್‌ಗೆ ವಿವಿಧ ಉತ್ಪನ್ನಗಳಿಗಾಗಿ ಆರ್ಡರ್ ಬುಕ್ ಮಾಡುತ್ತಿದ್ದ ಮತ್ತು ಅವುಗಳನ್ನು ಮರಳಿಸುತ್ತಿದ್ದ.
ಆತ ತನ್ನ ತಂದೆ, ತಾಯಿ, ಸಹೋದರರು ಮತ್ತು ತನಗೆ ಗೊತ್ತಿರುವ ಪರಿಸರದ ಇತರ ವ್ಯಕ್ತಿಗಳ ಹೆಸರಲ್ಲಿ ದುಬಾರಿ ಬೆಲೆಯ ಇಲೆಕ್ಟ್ರಾನಿಕ್ ವಸ್ತುಗಳಿಗಾಗಿ ಆರ್ಡರ್ ಬುಕ್ ಮಾಡುತ್ತಿದ್ದ. ಆತ ಮಾಡಿದ ಆರ್ಡರ್ ಪ್ರಕಾರ ಐಟಂಗಳು ಆತನಿಗೆ ಡೆಲಿವರಿ ಆಗುತ್ತಿದ್ದವು. ಡೆಲಿವರಿ ಆಗುತ್ತಿದ್ದಂತೆಯೆ ಕಾಲ್ ಸೆಂಟರ್ ಗೆ ಕರೆ ಮಾಡಿ ಕಳಪೆ ಗುಣ ಮಟ್ಟದ ವಸ್ತು ಸಿಕ್ಕಿದೆ ಎಂದು ದೂರು ದಾಖಲಿಸುತ್ತಿದ್ದ. ಹಾಗೆ ಡೆಲಿವರಿ ಬಂದೊಡನೆಯೇ ಆತ ಅದರೊಳಗಿನ ಅಮೂಲ್ಯ ವಸ್ತುಗಳನ್ನು ಎಗರಿಸಿ ಪಾರ್ಸೆಲ್ ಒಳಗೆ ಅಲ್ಲಸಲ್ಲದ್ದನ್ನೆಲ್ಲ ತುಂಬಿ “ಡೆಲಿವರಿ ಆಗಿರುವ ವಸ್ತುಗಳು ಕಳಪೆ ಗುಣಮಟ್ಟದ್ದಾಗಿವೆ’ ಎಂದು ದೂರಿ ಅವುಗಳನ್ನು ಕಂಪೆನಿಗೆ ಮರಳಿಸುತ್ತಿದ್ದ !
ವೀರ ಸ್ವಾಮಿಯು ನಕಲಿ ಇ-ಮೇಲ್ ಐಡಿಗಳನ್ನು ಸೃಷ್ಟಿಸುತ್ತಿದ್ದ ಮತ್ತು ಬೇರೆ ಬೇರೆ ಬ್ಯಾಂಕ್ ಖಾತೆಗಳ ಮೂಲಕ ಪಾವತಿಗಳನ್ನು ಮಾಡುತ್ತಿದ್ದ. ಆದರೆ ಆತ ತನಗೆ ಡೆಲಿವರಿಯಾದ ವಸ್ತುಗಳನ್ನು ಮರಳಿಸುತ್ತಲೇ ಆತನ ಸಂಬಂಧಿತ ಬ್ಯಾಂಕ್ ಖಾತೆಗಳಿಗೆ ಕಂಪೆನಿಯು ತಾನೇ ಘೋಷಿಸಿಕೊಂಡ ನಿಯಮಗಳ ಪ್ರಕಾರ ಹಣವನ್ನು ಮರಳಿ ಜಮೆ ಮಾಡುತ್ತಿತ್ತು.
ವೀರ ರೆಡ್ಡಿಯು ಈ ತನಕ ವಿವಿಧ ವ್ಯಕ್ತಿಗಳ ಹೆಸರಲ್ಲಿ, ಕಳೆದ 20 ತಿಂಗಳಲ್ಲಿ, 200ಕ್ಕೂ ಹೆಚ್ಚು ಖರೀದಿ ವ್ಯವಹಾರಗಳನ್ನು ಮಾಡಿದ್ದಾನೆ. ಈತನ ಈ ಒಟ್ಟು ಕಳ್ಳ ವ್ಯವಹಾರದಲ್ಲಿ ತನಗೆ 20 ಲಕ್ಷಕ್ಕೂ ಅಧಿಕ ರೂ.ಗಳ ನಷ್ಟ ಉಂಟಾಗಿದೆ ಎಂದು ಫ್ಲಿಪ್ ಕಾರ್ಟ್ ಹೇಳಿಕೊಂಡಿದೆ. ಅಂತೆಯೇ ಕಂಪೆನಿಯ ಹೈದರಾಬಾದಿನ ಪ್ರತಿನಿಧಿಯು ವನಸ್ಥಳೀಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸು ದಾಖಲಿಸಿದೆ.
ನಾವು ಈ ದೂರಿನಲ್ಲಿರುವ ವಿಷಯಗಳನ್ನು ಪರಿಶೀಲಿಸುತ್ತಿದ್ದೇವೆ ಅಂತೆಯೇ ಆರೋಪಿಯ ಹೇಳಿಕೆಯನ್ನೂ ದಾಖಲಿಸಿಕೊಳ್ಳುತ್ತಿದ್ದೇವೆ’ ಎಂದು ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಠಾಣಾಧಿಕಾರಿ ಪಿ ಪುಷ್ಪನ್ ಕುಮಾರ್ ಹೇಳಿದ್ದಾರೆ.
