ಬಂಟ್ವಾಳ: ಮಹಾತ್ಮಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ಬಂಟ್ವಾಳ ಪುರಸಭೆ ವತಿಯಿಂದ ನಿರ್ಮಲ ಬಂಟ್ವಾಳ ಯೋಜನೆಯಡಿ ಸ್ವಚ್ಛತಾ ಆಂದೋಲನಕ್ಕೆ ವಾರ್ಡ್ 11ರ ಸಂಚಯಗಿರಿ ಪರಿಸರದಲ್ಲಿ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹಾತ್ಮಗಾಂಧಿಯವರ ಆಶಯದಂತೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ನಿರ್ಮಲ ಬಂಟ್ವಾಳ ಯೋಜನೆಯಡಿ ಸ್ವಚ್ಛತಾ ಆಂದೋಲನ ನಡೆಸಲು ನಿರ್ಧರಿಸಿದ್ದೇವೆ ಎಂದರು. ಪುರಸಭೆಯ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದು ಸಂಚಯಗಿರಿ ಹಾಗೂ ಅಜ್ಜಿಬೆಟ್ಟು ಪರಿಸರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ವಾರದ ಒಂದು ದಿನ ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಡೆಸಿ ಜನಸಾಮಾನ್ಯರದಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು. ವಾರ್ಡ್ ಸದಸ್ಯ ಸದಾಶಿವ ಬಂಗೇರಾ ಮಾತನಾಡಿ ಇಂದು ಚಾಲನೆ ಪಡೆದುಕೊಂಡ ಈ ಸ್ಚಚ್ಛತಾ ಆಂದೋಲನ ಪುರಸಭೆಯ ಎಲ್ಲಾ ವಾರ್ಡ್ಗಳಲ್ಲಿ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.
ಪುರಸಭಾ ಸದಸ್ಯರಾದ ಸದಾಶಿವ ಬಂಗೇರಾ, ಬಿ.ಮೋಹನ್, ಜಗದೀಶ ಕುಂದರ್, ಭಾಸ್ಕರ ಟೈಲರ್, ಇಕ್ಬಾಲ್ ಐಎಂಆರ್, ಮುಮ್ತಾಝ್, ಮಹಮ್ಮದ್ ನಂದರಬೆಟ್ಟು, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಪುರಸಭಾ ಅಧಿಕಾರಿಗಳಾದ ಮತ್ತಡಿ, ಪ್ರಸಾದ್, ಚೆನ್ನಪ್ಪಗೌಡ, ಡೊಮೆನಿಕ್ ಡಿಮೆಲ್ಲೋ, ಪ್ರಭಾದೇವಿ, ರಝಾಕ್, ಇನ್ನಿತರ ಸಿಬ್ಬಂದಿಗಳು ಸೇರಿದಂತೆ ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಸಂಚಯಗಿರಿ ಹಾಗೂ ಅಜ್ಜಿಬೆಟ್ಟು ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ರಸ್ತೆ ಬದಿ ಬೆಳೆದಿದ್ದ ಗಿಡಗಳನ್ನು ಕಡಿದು ಹಾಗೂ ಕಸಗಳನ್ನು ಗುಡಿಸಿ ಪರಿಸರ ಸ್ವಚ್ಛಗೊಳಿಸಲಾಯಿತು.

