ಬಂಟ್ವಾಳ:  ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಆನಂದ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು. ಚೆನ್ನೈತ್ತೋಡಿ ಗ್ರಾಮ ಪಂಚಾಯತು ಅಧ್ಯಕ್ಷ ಯತೀಶ್ ಶೆಟ್ಟಿ ವಿಜಯನಗರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ನಾನಾ ಕ್ಷೇತ್ರ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು ಅವರು ಹಳೇ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರು.
ಪತ್ರಕರ್ತ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಸರಕಾರಿ ಶಾಲೆಗಳ ಉಳಿವು ಬೆಳವಣಿಗೆಯಲ್ಲಿ ಸಮುದಾಯದ ಪಾತ್ರ ಮಹತ್ತರವಾದುದು. ಶಾಲೆಗಳ ಉದ್ಧಾರವೂ ಗ್ರಾಮದ ಪ್ರಗತಿಗೆ ಪೂರಕ ಎಂಬ ಮನೋಭಾವನೆ ನಮ್ಮಲ್ಲಿ ಬೆಳೆಯಬೇಕು. ಆರಾಧನಾ ಕೆಂದ್ರಗಳಿಗೆ ನೀಡುವ ಮಹತ್ವವನ್ನು ಶಾಲೆಗಳಿಗೂ ನೀಡಬೇಕು. ಶಾಲೆಗಾಗಿ ಏನನ್ನಾದರೂ ಕೊಡುವ ಸಂಕಲ್ಪ ತೊಡಬೇಕು. ಈ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿ ಸಂಘಟನೆಗಳ ಸೇವೆಯೂ ಶಾಲಾಭಿವೃದ್ದಿಯಲ್ಲಿ ಪೂರಕ ಪಾತ್ರ ವಹಿಸುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ರಾಮರಾಯ ನಾಯಕ್, ಪಂಚಾಯತು ಸದಸ್ಯರಾದ ನವೀನ್‍ಚಂದ್ರ ಶೆಟ್ಟಿ, ಅನಂತ ಪೈ ಸಲಹೆ ಸೂಚನೆ ನೀಡಿದರು. ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕ ರಾಜೀವ ಎಸ್. ಸ್ವಾಗತಿಸಿದರು.
ಇದೇ ಸಂದರ್ಭ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷ, ಚಂದ್ರಶೇಖರ ಶೆಟ್ಟಿ ಪ್ರಧಾನ ಕಾರ್ಯದರ್ಶಿ, ಪದ್ಮನಾಭ ಶೆಟ್ಟಿ ಕೋಶಾಧಿಕಾರಿ ಹಾಗೂ ಪದಾಧಿಕಾರಿಗಳನ್ನೊಳಗೊಂಡ ನೂತನ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಅಸ್ಥಿತ್ವಕ್ಕೆ ತರಲಾಯಿತು.

By suddi9

Leave a Reply

Your email address will not be published. Required fields are marked *