ಪುತ್ತೂರು ಫಿಲೋಮಿನಾ, ಕಲ್ಯಾಣಪುರ ಮಿಲಾಗ್ರಿಸ್, ಸುರತ್ಕಲ್ ಗೋವಿಂದದಾಸ್ಗೆ ಪ್ರಶಸ್ತಿ
ಮೂಡಬಿದರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಗಾಂಧೀ ವಿಚಾರಧಾರೆ (ಮಹಾತ್ಮ ಗಾಂಧೀಜಿಯವರ `ಗ್ರಾಮ ಸ್ವರಾಜ್ಯ’ದ ಪರಿಕಲ್ಪನೆ)ಯ ಕುರಿತಾದ ಮಂಗಳೂರು ವಿ.ವಿ. ಮಟ್ಟದ ಅಂತರ್ಕಾಲೇಜು ಭಾಷಣ (ಕನ್ನಡ/ಆಂಗ್ಲ) ಸ್ಪರ್ಧೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಜೋಸ್ವಿಟಾ ಲೊರೈನ್ ಲೋಬೋ ಪ್ರಥಮ ಬಹುಮಾನ ಗಳಿಸಿದರು.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರೊಜಾಲಿಯೋ ಕಾರ್ಡೋಜ ಅವರಿಗೆ ದ್ವಿತೀಯ, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವೃಂದಾ ಕೊನ್ನಾರ್ ಅವರಿಗೆ ತೃತೀಯ ಬಹುಮಾನ ಲಭಿಸಿವೆ. ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ದೀಪ್ತಿ ಡಿ’ಕುನ್ಹ, ಶಿರ್ವ ಸೈಂಟ್ ಮೇರೀಸ್ ಕಾಲೇಜಿನ ರೀಶೆಲ್ ಫೆರ್ನಾಂಡಿಸ್ ಮತ್ತು ಉಡುಪಿ ಎಂ.ಜಿ.ಎಂ. ಕಾಲೇಜಿನ ರಕ್ಷಿತಾ ಸಮಾಧಾನಕರ ಬಹುಮಾನ ಗಳಿಸಿದರು.
ಎಸ್.ಡಿ. ಸಾಮ್ರಾಜ್ಯ ಸಂಸ್ಮರಣ ಅಂಗವಾಗಿ ಮಹಾವೀರ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಮಾನವಿಕ ಸಂಘ ಇವುಗಳ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 57 ಮಂದಿ ಸ್ಪರ್ಧಾಳುಗಳು ಭಾಗವಹಿಸಿದರು.
ಮಹಾವೀರ ಕಾಲೇಜಿನ ಪ್ರಾಂಶುಪಾಲ ಫ್ರೊ. ಎಚ್.ಸಿ. ದೀಕ್ಷಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಕೊಡಂಗಲ್ಲು ಶಾಖಾ ಪ್ರಬಂಧಕಿ ಶ್ರೀದೇವಿ ಕೆ.ಎಸ್. ಬಹುಮಾನ ವಿತರಿಸಿದರು. ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಪುರಸಭಾ ಸದಸ್ಯ ಎಂ. ಬಾಹುಬಲಿ ಪ್ರಸಾದ್ ಮುಖ್ಯಅತಿಥಿಗಳಾಗಿದ್ದರು. ಶ್ರೀ ಮಹಾವೀರ ಪ.ಪೂ. ಕಾಲೇಜಿನ ಪ್ರಾಚಾರ್ಯ ಫ್ರೊ.ಎಂ. ರಮೇಶ ಭಟ್, ತೀರ್ಪುಗಾರರಾಗಿ ಸಹಕರಿಸಿದ ಶ್ರೀ ಧವಲಾ ಕಾಲೇಜಿನ ಪ್ರಾಧ್ಯಾಪಕ ಫ್ರೊ.ಸುದರ್ಶನ ಕುಮಾರ್, ಆಳ್ವಾಸ್ ಕಾಲೇಜಿನ ಸಹಪ್ರಾಧ್ಯಾಪಕಿ ಸಂಧ್ಯಾ, ಪತ್ರಕರ್ತ ಧನಂಜಯ ಮೂಡಬಿದರೆ, ಸ್ಪರ್ಧಾ ಸಂಯೋಜಕ ಕ್ಯಾ| ರಾಧಾಕೃಷ್ಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಫ್ರೊ| ಹರೀಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ನೀಲ್ ಕೆನೆತ್ ವಾಸ್, ಮಾನವಿಕ ಸಂಘದ ಕಾರ್ಯದರ್ಶಿ ದೀಕ್ಷಿತಾ ಉಪಸ್ಥಿತರಿದ್ದರು. ಅಭಿಷೇಕ್ ಸ್ವಾಗತಿಸಿದರು. ರೈಚಲ್ ಶ್ವೇತಾ ನಿರೂಪಿಸಿದರು ಪ್ರಣೀತಾ ನೀತಾ ಲೋಬೋ ವಂದಿಸಿದರು.
ಉದ್ಘಾಟನೆ: ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಸ್ಪರ್ಧೆ ಉದ್ಘಾಟಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಫ್ರೊ.ಚಂದ್ರಶೇಖರ ದೀಕ್ಷಿತ್ ಅಧ್ಯಕ್ಷತೆ ವಹಿಸಿದರು. ಡಿಜೆವಿ ಸಂಘದ ಸದಸ್ಯ ಕೆ. ಹೇಮರಾಜ, ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ರಮೇಶ್ ಭಟ್, ಫ್ರೊ.ಹರೀಶ್, ವಿದ್ಯಾರ್ಥಿ ನಾಯಕ ನೀಲ್ ಕೆನೆತ್ ವಾಸ್ ಉಪಸ್ಥಿತರಿದ್ದರು. ಫ್ರೊ.ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಮಾನವಿಕ ಸಂಘದ ಕಾರ್ಯದರ್ಶಿ ದೀಕ್ಷಿತಾ ವಂದಿಸಿದರು.
