ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು-ಕುರಿಯಾಳ ರಸ್ತೆಯು ತೀರಾ ಹದಗೆಟ್ಟು ಹೋಗಿದ್ದು, ರಸ್ತೆಯುದ್ದಕ್ಕೂ ಅಲ್ಲಲ್ಲಿ ಜೆಲ್ಲಿ ಎದ್ದು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ. ಇನ್ನೂ ಕೆಲವೆಡೆ ರಸ್ತೆಯಲ್ಲೇ ಮಳೆನೀರು ಹರಿದು ರಸ್ತೆ ಮಧ್ಯೆ ಮಾತ್ರ ಡಾಂಬರು ಉಳಿದು ಎರಡೂ ಬದಿ ಇಳಿಜಾರು ಪ್ರದೇಶ ಉಂಟಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರಲ್ಲಿ ಜೆಲ್ಲಿ ಹಾರಾಟ ಮತ್ತು ರಸ್ತೆ ಬದಿ ಜಾರಿ ಬೀಳುವ ಭೀತಿ ಆವರಿಸಿಕೊಂಡಿರುವುದು ಕಂಡು ಬಂದಿದೆ.
27btl-Kuriyalಈ ರಸ್ತೆಯು ಸ್ಥಳೀಯ ಎರ್ಮಾಳು, ಪಾಲೆದಗುರಿ, ಕುಕ್ಕುರಿ, ಕೆಂಪುಗುಡ್ಡೆ, ನಲ್ಕೆಮಾರು, ತಲೆಂಬಿಲ ಮತ್ತಿತರ ಪ್ರದೇಶವನ್ನು ಸಂಪರ್ಕಿಸುತ್ತಿದೆ. ಈ ರಸ್ತೆಯಲ್ಲಿ ಓಡಾಡುವ ಏಕೈಕ ಸರ್ಕಾರಿ ಬಸ್ ಕೂಡಾ ಹೊಂಡಮಯ ರಸ್ತೆಯಿಂದಾಗಿ ಸಮಯಕ್ಕೆ ಸರಿಯಾಗಿ ಬರುವಲ್ಲಿ ಅಡಚಣೆಯಾಗುತ್ತಿದೆ. ಇಲ್ಲಿನ ರಸ್ತೆ ಅವ್ಯವಸ್ಥೆಯಿಂದಾಗಿ ರಿಕ್ಷಾ ಚಾಲಕರು ಕೂಡಾ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ನೂರಾರು ಮಂದಿ ಕೂಲಿ ಕಾರ್ಮಿಕರು, ಉದ್ಯೋಗಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಗದಿತ ಸಮಯದಲ್ಲಿ ಎಲ್ಲಿಯೂ ತಲುಪಲು ಅಸಾಧ್ಯವಾಗಿದೆ ಎಂಬ ಅಳಲು ತೋಡಿಕೊಂಡಿದ್ದಾರೆ. ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯೆ ನಳಿನಿ ಬಿ.ಶೆಟ್ಟಿ ಅವರು ತೀರಾ ಹದಗೆಟ್ಟ ಕೆಲವೆಡೆ ತೇಪೆ ಡಾಂಬರೀಕರಣ ಮಾಡಿ ರಸ್ತೆ ದುರಸ್ತಿಗೆ ಪ್ರಯತ್ನಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಕಳೆದ ಎರಡೂವರೆ ತಿಂಗಳ ಹಿಂದೆಯಷ್ಟೇ ಇಲ್ಲಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆ ವತಿಯಿಂದ ರೂ 75ಸಾವಿರ ವೆಚ್ಚದಲ್ಲಿ ರಸ್ತೆಯುದ್ದಕ್ಕೂ ಸಿಮೆಂಟ್ ಮಿಶ್ರಿತ ಜೆಲ್ಲಿ ಹರಡಲಾಗಿದ್ದು, ಇದರಲ್ಲಿ ಸ್ಥಳೀಯ ಅಮ್ಟಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ ಶೆಟ್ಟಿ ಸಹಿತ ಅಪಾರ ಮಂದಿ ಶ್ರಮದಾನ ನಡೆಸಿದ್ದರು. ಈ ರಸ್ತೆ ಅಭಿವೃದ್ಧಿ ಮತ್ತು ಸಂಪೂರ್ಣ ಡಾಂಬರೀಕರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾಬನಾಥ ರೈ ಅವರು ಸರ್ಕಾರಕ್ಕೆ ರೂ 1ಕೋಟಿ ವೆಚ್ಚದ ಪ್ರಸ್ತಾವನೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ರಸ್ತೆಗೆ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಅಭಿಪ್ರಾಯ ಇಲ್ಲಿನ ನಾಗರಿಕರಿಂದ ವ್ಯಕ್ತವಾಗಿದೆ.

By suddi9

Leave a Reply

Your email address will not be published. Required fields are marked *