ಬಂಟ್ವಾಳ, ಸೆ. 25: ಸಮಾಜದಲ್ಲಿ ಎಲ್ಲರೂ ನೆಮ್ಮದಿಯ ಬದುಕು ಸಾಗಿಸಬೇಕಾದರೆ ಶಿಕ್ಷಣ ಮತ್ತು ಆರ್ಥಿಕ ಪ್ರಗತಿ ಆಗಬೇಕು. ಜನತೆಗೆ ಅದರಲ್ಲೂ ಬಡವರಿಗೆ ಸಹಾಯ ಮಾಡಿದವರನ್ನು ಮರೆತರೆ ಹೆತ್ತವರನ್ನು ಮರೆತಂತೆ. ನಮ್ಮ ಅಜ್ಜನ ಕಾಲದಲ್ಲಿ, ಮುತ್ತಜ್ಜನ ಕಾಲದಲಿ ನಾವೇನು ಆಗಿದ್ದೆವು ಎಂದು ಸ್ಮರಿಸಿದರೆ ಇಂದು ನಾವು ಸಾಕಷ್ಟು ಪ್ರಗತಿಯನ್ನು ಕಂಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಸೆ. 25ರಂದು ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಶ್ರಿ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಮೆಲ್ಕಾರ್ ಬಿರ್ವ ಸೆಂಟರ್ ಇದರ ಪ್ರಥಮ ಶಾಖೆಯನ್ನು ಟೇಪ್ ಕತ್ತರಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಊರಿನ ಮಂದಿಗೆ ಸಹಾಯ ಆಗಬೇಕು ಎಂದು ಹಿರಿಯರು, ಸಂಸ್ಥೆಯ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ತನ್ನ ಸ್ವಂತ ಕಟ್ಟಡದಲ್ಲಿ ಆರ್ಥಿಕ ಸಂಸ್ಥೆಯನ್ನು ತಂದಿದ್ದಾರೆ ಎಂದರು. ಗ್ರಾಮ ಪಂಚಾಯತ್ ವಿಂಗಡಣೆ ಸಂದರ್ಭ ನೂತನ ನಿರ್ಮಾಣ ಕಳ್ಳಿಗೆ ಗ್ರಾಮ ಪಂಚಾಯತ್ ಕಛೇರಿ ಕಟ್ಟಡ ನಿರ್ಮಾಣಕ್ಕೆ ರಾಜ್ಯದಲ್ಲಿಯೇ ಪ್ರಥಮವಾಗಿ ಅನುದಾನ ಮಂಜೂರಾತಿ ಮಾಡಿಸಿದ್ದೇನೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ ಎಂದರು.
ಬಂಟ್ವಾಳಕ್ಕೆ ಒಂದು ಅರ್ಬನ್ ಬ್ಯಾಂಕ್ ಮಾಡುವ ಯೋಜನೆಯೊಂದು ನಮ್ಮ ಮುಂದೆ ಬಂದಿತ್ತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸಿದ್ದಕಟ್ಟೆ ವಿಜಯಾ ಬ್ಯಾಂಕ್ ಮೆನೇಜರ್ ಬೇಬಿ ಕುಂದರ್ ಅಂತಹ ಪ್ರಸ್ತಾಪ ನೀಡಿದ್ದಾರೆ. ಇಲ್ಲಿ ಸಹಕಾರಿ ಸಂಸ್ಥೆ ಆಗುತ್ತಿದ್ದಂತೆ ಅವರು ಆ ವಿಚಾರವನ್ನು ನೆನಪಿಸಿದ್ದಾರೆ. ಮುಂದೊಂದು ದಿನ ಅಂತಹ ಪ್ರಸ್ತಾಪ ಅನುಷ್ಠಾನದಲ್ಲಿ ಬರುವುದು. ಇನ್ನೂ ಸಾಕಷ್ಟು ಸಮಯದ ಅವಕಾಶ ಇದೆ ಎಂದರು.ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಯಶವಂತ ಡಿ. ಮುಖ್ಯ ಅತಿಥಿಯಾಗಿ ಮಾತನಾಡಿ ಸಹಕಾರಿ ಸಂಸ್ಥೆಯ ಮೂಲಕ ಗ್ರಾಮಕ್ಕೆ ಒಳ್ಳೆಯ ದಿನಗಳು ಬರಲಿ. ಈ ಗ್ರಾಮಕ್ಕೆ ಮೊದಲಾಗಿ ಇಂತಹ ಆರ್ಥಿಕ ಸಂಸ್ಥೆ ಬರಲು ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದರು.
ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಮಾತನಾಡಿ ಕಳೆದ ಒಂದು ವರ್ಷದಿಂದ ಇಲ್ಲಿಗೊಂದು ಸಹಕಾರಿ ಸಂಸ್ಥೆ ಬೇಕು ಎಂಬ ಅಪೇಕ್ಷೆ ನಮ್ಮದಾಗಿತ್ತು. ನಮ್ಮ ಸಂಘಟನೆಯ ಮೂಲಕ ನಿರಂತರವಾಗಿ ನಾವು ಸಂಘದ ಅಧ್ಯಕ್ಷ ಭುವನೇಶ ಪಚ್ಚಿನಡ್ಕ ಅವರಲ್ಲಿ ಒತ್ತಾಯ ಮಾಡುತ್ತಿದ್ದೆವು. ಅದು ಮಂಜೂರಾತಿ ಆಗಿ ಬಂದಿರುವುದು ನಮಗೆ ಸಂತಸ ನೀಡಿದೆ. ಈ ಮೂಲಕ ಗ್ರಾಮದ ಅಭಿವೃದ್ದಿ ಆಗಬೇಕು. ನಾನು ಈ ಪ್ರದೇಶದ ಒಬ್ಬ ಸದಸ್ಯನಾಗಿದ್ದೇನೆ. ಇಲ್ಲಿ ಉತ್ತಮ ವ್ಯವಹಾರ ಆಗುವುದು. ಜನರಿಗೆ ಸಹಕಾರಿ ಸಂಸ್ಥೆಯಿಂದ ಪ್ರಯೋಜನ ಆಗಲಿದೆ. ಶಾಖೆಯನ್ನು ಇಲ್ಲಿಗೆ ತರಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ವೇದಿಕೆಯಲ್ಲಿ ತಾ.ಪಂ. ಸದಸ್ಯ ಎಫ್ರೇಮ್ ಸಿಕ್ವೇರಾ, ಕಳ್ಳಿಗೆ ಗ್ರಾ.ಪಂ. ಅಧ್ಯಕ್ಷೆ ರತ್ನ, ಸದಸ್ಯ ಮಧುಸೂದನ ಶೆಣೈ, ಸಹಕಾರಿ ಸಂಘದ ಆಡಳಿತ ನಿರ್ದೇಶಕ ಕೆ. ಸಂಜೀವ ಪೂಜಾರಿ ಬೊಳ್ಳಾಯಿ, ರತ್ನಾಕರ ನಾಡಾರು, ರಮೇಶ್ ಅನ್ನಪ್ಪಾಡಿ, ನಾರಾಯಣ ಪೂಜಾರಿ ಬೊಳ್ಳುಕಲ್ಲು, ಪುಷ್ಪಾವತಿ ಕೊಲ್ಯ, ಅಮ್ಟಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಕಾರ್ಯನಿರ್ವಹಣಾ„ಕಾರಿ ಪ್ರವೀಣ್, ಶಾಖಾ ವ್ಯವಸ್ಥಾಪಕಿ ಪ್ರಜ್ಞಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಠೇವಣಿದಾರರಿಗೆ ಠೇವಣಿ ಪತ್ರ ವಿತರಿಸಲಾಯಿತು.
ಸೊಸೈಟಿಯ ಉಪಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ನಿರ್ದೇಶಕ ಸಂತೋಷ್ ಕುಮಾರ್ ಕೊಟ್ಟಿಂಜ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರ್ವಹಿಸಿದರು.
