ಬಂಟ್ವಾಳ; ಮಂಚಿ ಗ್ರಾಮದ ನೂಜಿಯಲ್ಲಿ ನಾಲ್ವರು ಬಲಿಯಾದ ದುರಂತ ಸಾವಿನ ಪ್ರಕರಣದ ಸುತ್ತ ಅನುಮಾನಗಳ ಹುತ್ತ ಆವರಿಸಿಕೊಂಡಿದ್ದು, ಅಂತೆ ಕಂತೆಗಳ ಹೊಸ ಕತೆಗಳು ಸೃಷ್ಟಿಯಾಗತೊಡಗಿದೆ. ಪೊಲೀಸ್ ಇಲಾಖೆ ಕೂಡ ಇದೊಂದು ಮಾನಸಿಕ ಅಸ್ವಸ್ಥತೆಯಿಂದ ಕೌಟುಂಬಿಕವಾಗಿ ನಡೆದ ಕೊಲೆ ಪ್ರಕರಣ ಎಂದು ಹೇಳಿಕೊಂಡಿದ್ದರೂ, ನಾಲ್ವರನ್ನು ಬಲಿತೆಗೆದುಕೊಂಡ ಈ ಪ್ರಕರಣದಲ್ಲಿ ಹೊರಗಿನ ಶಕ್ತಿಗಳ ಕೈವಾಡ ವಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ.


ಮಂಚಿ ಗ್ರಾಮಪಂಚಾಯತ್ ಸದಸ್ಯ ಪದ್ಮನಾಭ ನಾಯಕ್ ಮೃತದೇಹ ಬುಧವಾರ ಬೆಳಿಗ್ಗೆ ನೂಜಿಯ ತನ್ನ ಮನೆಯಲ್ಲಿ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದೇ ಕೊಠಡಿಯಲ್ಲಿ ಪತ್ನಿ ಪುಷ್ಪಾವತಿ, ಮಕ್ಕಳಾದ ಪೃಥ್ವಿ ಹಾಗೂ ಪೂರ್ವಿ ಯವರು ಕೊಲೆಯಾಗಿ ರಕ್ತದ ಮಡುವಿನಲ್ಲಿ ಶವವಾಗಿದ್ದರು. ಕಳೆದ ಹಲವು ತಿಂಗಳಿನಿಂದ ಆತ್ಮಹತ್ಯೆಕುರಿತಾಗಿ ಮಾತನಾಡುತ್ತಿದ್ದ ಪದ್ಮನಾಭ ನಾಯಕ್ , ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಘಟನಾ ಸ್ಥಳದ ಪರಿಶೀಲನೆ ನಡೆಸಿದ ಪೊಲೀಸರೂ ಇದನ್ನೇ ಹೇಳಿದ್ದು, ಮಾನಸಿಕವಾಗಿ ನೊಂದು ಕೊಂಡು ಪದ್ಮನಾಭ ನಾಯಕ್ ಈ ಕೃತ್ಯ ವೆಸಗಿದ್ದಾನೆಂಬುವುದು ಅವರ ಹೇಳಿಕೆ.
ಆದರೆ ನಾಲ್ವರ ಶವಗಳು ಪತ್ತೆಯಾದ ಸ್ಥಿತಿ, ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಬೇಕಾದ ಅನಿವಾರ್ಯತೆ ತಂದಿದೆ. ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪದ್ಮನಾಭ ನಾಯಕ್ ಅವರ ಪತ್ನಿ ಪುಷ್ಪಾವತಿ ಹಾಗೂ ಮಕ್ಕಳಾದ ಪೃಥ್ವಿ ಹಾಗೂ ಪೂರ್ವಿ ಯವರು ಮಲಗಿದದ್ದ ಸ್ಥಿತಿಯಲ್ಲೇ ಕೊರಳ ಭಾಗ, ಎದೆ, ಕೈ, ಮುಖ ದ ಮೇಲೆ ಮಚ್ಚಿನಿಂದ ಕಡಿಯಲಾಗಿದೆ. ಅದರ ತೀವ್ರತೆಗೆ ಗೋಡೆಯ ಮೇಲೆ ರಕ್ತ ಎರಚಿದಂತಿದೆ. ಪುಷ್ಪಾವತಿಯವರ ಕಾಲಿನ ಮೇಲೆ ಮಗಳು ಪೃಥ್ವಿಯ ಕಾಲು ಇರುವುದರಿಂದ ವಿಪರೀತ ರಕ್ತಸ್ರಾವದಿಂದ ಮಲಗಿದ್ದಲ್ಲೇ ಮೃತಪಟ್ಟಿರುವುದು ಗೋಚರಿಸಿದೆ. ರಕ್ತದ ಕೈಗಳಿಂದಲೇ ಸ್ವಿಚ್ ಹಾಕಲು ಯತ್ನಿಸಿರುವುದಕ್ಕೆ ಅದರ ಮೇಲಿರುವ ರಕ್ತದ ಕಲೆಗಳೇ ಸಾಕ್ಷಿ ನುಡಿಯುತ್ತಿದೆ. ಆದರೆ ಮೂವರನ್ನು ಕೊಲೆ ಗೈದ ಬಳಿಕ ಕೈಯನ್ನು ತೊಡೆಯ ಭಾಗವನ್ನು ಕೊಯ್ದುಕೊಂಡಿರುವ ಪದ್ಮನಾಭ ಕಿಟಕಿಗೆ ನೇಣಿನ ಹಗ್ಗ ಹಾಕಿರುವುದಾದರೂ ಹೇಗೆ, ಒಂದೇ ಕೈಯಿಂದ ಹಗ್ಗ ಏರಿಸಿದನೇ, ಕಡಿದ ಮಚ್ಚನ್ನು ಹೆಣದ ಬಳಿ ಇಟ್ಟದ್ದು ಹೇಗೆ, ಚಾವಡಿಯಲ್ಲಿ ರಕ್ತ ಚೆಲ್ಲಿದ್ದು ಹೇಗೆ, ಮುಂಬಾಗಿಲ ಬಳಿಯ ಗೋಡೆಯಲ್ಲಿ ರಕ್ತದ ಕೈ ಅಚ್ಚು ಹೇಗೆ ಬಂತು ಮತ್ತು ಯಾರದು ಎಂಬೆಲ್ಲಾ ಪ್ರಶ್ನೆಗಳಿಗೆ ಪೊಲೀಸರೇ ಉತ್ತರ ಹುಡಕಬೇಕಿದೆ.
ವಾಮಾಚಾರದ ಬಗ್ಗೆ ನಂಬಿಕೆ ಇರಿಸಿಕೊಂಡಿದ್ದ ಪದ್ಮನಾಭ ಅದರಿಂದ ಉಂಟಾದ ಮಾನಸಿಕತೆಯಿಂದ ಈ ಕೃತ್ಯವೆಸಗಿಕೊಂಡಿದ್ದಾನೆ ಎಂಬ ಮಾತುಗಳನ್ನೂ ಪೂರ್ಣ ನಂಬುವಂತಿಲ್ಲ. ಮನೋರೋಗ ತಜ್ಞ ಗಣೇಶ್ ಪ್ರಸಾದ್ ಮುದ್ರಾಜೆ ಯವರು ಹೇಳುವಂತೆ ಸೈಕೋಸಿಸ್ ಪ್ರಾಬ್ಲಂ ನಿಂದ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇದೆ, ಅಂತಹಾ ಸಂದರ್ಭದಲ್ಲಿ ಆ ವ್ಯಕ್ತಿಗೆ ತಾನು ಯಾರಿಗೆ ಅಪಾಯ ಉಂಟುಮಾಡುತ್ತಿದ್ದೇವೆ ಅನ್ನುವ ಅರಿವು ಇರುವುದಿಲ್ಲವಂತೆ, ಮಾನಸಿಕತೆಯ ಉಚ್ಛ್ರಾಯ ಸ್ಥಿತಿ ಕಳೆದ ಬಳಿಕ ತನ್ನ ತಪ್ಪಿನ ಅರಿವಾಗುತ್ತದೆ ಎನ್ನುತ್ತಾರೆ ಅವರು.

