ಪುತ್ತೂರು: ಆರು ವರ್ಷ ಪ್ರಾಯದ ಬಾಲಕಿಗೆ ತಾಯಿಯ ಕುಮ್ಮಕ್ಕಿನಿಂದ ಆಕೆಯ ಎರಡನೆ ಪತಿ ಚಾಕುವಿನಿಂದ ಗೀರಿ, ಸಿಗರೇಟ್ ಬೆಂಕಿಯಿಂದ ಚುಚ್ಚಿ ಚಿತ್ರೆಹಿಂಸೆ ನೀಡಿದ ವಿಲಕ್ಷಣ ಘಟನೆಯೊಂದು ಬೆಳ್ತಂಗಡಿಯಲ್ಲಿ ನಡೆದಿದ್ದು, ಇದರಿಂದಾಗಿ ಗಂಭೀರ ಗಾಯಗೊಂಡಿರುವ ಮಗುವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ನಿವಾಸಿ ರೊಹರಾ ಅವರ ಮೊಮ್ಮಗಳಾದ ಫಾಹಿಮಾ (6) ಚಿತ್ರೆಹಿಂಸೆಗೊಳಗಾದ ಬಾಲಕಿ. ಫಾಹಿಮಾಳ ತಾಯಿ ಫೌಝಿಯಾಳ ಎರಡನೆ ಪತಿ ಬೆಳ್ತಂಗಡಿಯ ಶಾಫಿ ಎಂಬಾತ ಪತ್ನಿ ಫೌಝಿಯಾಳ ಕುಮ್ಮಕ್ಕಿನ ಮೇರೆಗೆ ಬಾಲಕಿಗೆ ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಲಾಗಿದೆ. ಫೌಝಿಯಾ ಮೊದಲು ಫಾರೂಕ್ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ ಫಾಹಿಮಾ ಹುಟ್ಟಿದ ಬಳಿಕ ಫಾರೂಕ್ ಅವರು ಫೌಝಿಯಾಳನ್ನು ತ್ಯಜಿಸಿ ಹೋಗಿದ್ದರು. ಬಳಿಕ ಫೌಝಿಯಾ ಬೆಳ್ತಂಗಡಿಯ ಶಾಫಿ ಎಂಬಾತನನ್ನು ವಿವಾಹವಾಗಿದ್ದಳು.
ಕೆಲವು ಸಮಯ ಪುತ್ತೂರಿನ ಬನ್ನೂರಿನಲ್ಲಿ ನೆಲೆಸಿದ್ದ ವೇಳೆ ಈ ದಂಪತಿ ತನ್ನ ಜೊತೆಗಿದ್ದ ಎಳೆಯ ಪ್ರಾಯದ ಫಾಹಿಮಾಳಿಗೆ ನಿತ್ಯ ಚಿತ್ರಹಿಂಸೆ ನೀಡಲಾರಂಭಿಸಿದ್ದರು. ಈ ಕುರಿತು ಪುತ್ತೂರು ನಗರ ಪೊಲೀಸರಿಗೆ ಈ ಹಿಂದೆ ದೂರು ನೀಡಲಾಗಿತ್ತು. ಬಳಿಕ ಪ್ರಕರಣವನ್ನು ರಾಜಿ ಮಾತುಕತೆಯ ಮೂಲಕ ಬಗೆ ಹರಿಸಲಾಗಿತ್ತು. ಕಳೆದ ಕೆಲ ಸಮಯ ಹಿಂದೆ ಫೌಝಿಯಾ-ಶಾಫಿ ದಂಪತಿ ಬೆಳ್ತಂಗಡಿಗೆ ತಮ್ಮ ವಾಸ್ತವ್ಯವನ್ನು ಸ್ಥಳಾಂತರಿಸಿದ್ದು, ತಮ್ಮಾಂದಿಗೆ ಕರೆದೊಯ್ದಿದ್ದ ಬಾಲಕಿ ಫಾಹಿಮಾಳಿಗೆ ಶಾಫಿ ಅಲ್ಲಿ ಶುಕ್ರವಾರ ರಾತ್ರಿ ಕತ್ತಿಯಿಂದ ದೇಹದ ಕಾಲು, ತೊಡೆ ಭಾಗಗಳಿಗೆ ಕತ್ತಿಯಿಂದ ಗೀರಿ ಹಲ್ಲೆ ನಡೆಸಿದ್ದಲ್ಲದೆ, ಕುತ್ತಿಗೆಯ ಭಾಗಕ್ಕೆ ಸಿಗರೇಟು ಬೆಂಕಿಯಿಟ್ಟು ಚಿತ್ರಹಿಂಸೆ ನೀಡಿದ್ದರು. ಈ ವಿಚಾರ ತಿಳಿದ ನೆರೆ ಮನೆಯವರು ಘಟನೆಯ ಕುರಿತು ಎಸ್ಡಿಪಿಐ ಮುಖಂಡರಿಗೆ ಮಾಹಿತಿ ನೀಡಿದ್ದರು. ಅಲ್ಲಿನ ಎಸ್ಡಿಪಿಐ ನಾಯಕರು ನೀಡಿದ ಮಾಹಿತಿಯಂತೆ ಪುತ್ತೂರಿನ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಯ ಮುಖಂಡರು ಶನಿವಾರ ಬೆಳ್ತಂಗಡಿಗೆ ತೆರಳಿ ಬಾಲಕಿಯನ್ನು ಅವರ ಕೈಯಿಂದ ರಕ್ಷಿಸಿ ಇದೀಗ ಪುತ್ತೂರಿಗೆ ಕರೆತಂದು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿತ್ರಹಿಂಸೆಗೊಳಗಾದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಚಿತ್ರಹಿಂಸೆ ನೀಡಲು ಪತಿಗೆ ಕುಮ್ಮಕ್ಕು ನೀಡಿದ್ದ ಆರೋಪದಲ್ಲಿ ಫೌಝಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.
ಬಾಲಕಿಗೆ ಕಿರುಕುಳ ನೀಡಿರುವ ಮಲತಂದೆ ಹಾಗೂ ಆರೋಪಿ ಶಾಫಿಯ ಮೇಲೆಯೂ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.
