ಬಂಟ್ವಾಳ: ಅವಿವಾಹಿತ ಯುವಕನೋರ್ವ ಹೊಟೇಲ್ ಲಾಡ್ಜ್ವೊಂದರ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ. ಬಿ.ಮೂಡ ಗ್ರಾಮದ ಕೈಕಂಬ, ಮೊಡಂಕಾಪು ನಿವಾಸಿ ದಿ.ಸೀನ ಶೆಟ್ಟಿ ಎಂಬವರ ಮಗ ನವೀನ್ (24) ಮೃತ ಯುವಕ. ಸೆ.2ರಂದು ನವೀನ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹೊಟೇಲ್ ಲಾಡ್ಜ್ನಲ್ಲಿ ಕೊಠಡಿಯೊಂದನ್ನು ಪಡೆದು ತಂಗಿದ್ದನು.

ಲಾಡ್ಜ್ ವರಾಂಡ ಸ್ವಚ್ಛಗೊಳಿಸಲು ಹೋಗಿದ್ದ ಕೆಲಸದಾಳುಗಳು ನವೀನ್ ತಂಗಿದ್ದ ಕೊಠಡಿಯ ಬಾಗಿಲು ಸ್ವಲ್ಪ ತೆರೆದಿರುವುದನ್ನು ಗಮನಿಸಿ ಬಾಗಿಲು ದೂಡಿದ್ದರು. ಅಷ್ಟರಲ್ಲಿ ಬಾಗಿಲಿನಲ್ಲಿ ಬಾಕಿಯಾದ ಕೀಲಿಕೈ ನೆಲಕ್ಕೆ ಬಿದ್ದ ಸದ್ದು ಕೇಳಿಸಿತು. ಕೆಲಸದಾಳು ಇತರ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಅವರು ಬಾಗಿಲು ಸಂದಿನಿಂದ ಒಳಗಿನ ದೃಶ್ಯವನ್ನು ವೀಕ್ಷಿಸಿದರು. ಯುವಕ ನೇಣು ಹಾಕಿದ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಮಾಲೀಕರು, ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಠಾಣಾಧಿಕಾರಿ ನಂದಕುಮಾರ್, ರಕ್ಷಿತ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆಗೆ ಕಾರಣಗಳೇನೆಂದು ಪೊಲೀಸರಿಗೆ ತಿಳಿದುಬಂದಿಲ್ಲ. ಯುವಕನ ಶವ ಬಳಿ ಬೀಯರ್ ಬಾಟಲಿ ಪತ್ತೆಯಾಗಿದೆ. ಆತನ ಮೊಬೈಲ್ ಸೆಟ್ಅನ್ನು ವಶಪಡಿಸಲಾಗಿದ್ದು, ಘಟನೆಯ ಮೊದಲಿನ ದಿನ ಯಾರ ಜತೆ ಸಂಭಾಷಣೆ ನಡೆಸಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನಾ ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿದ್ದಾರೆ. ಯುವಕ ಸಂಬಂಧಿಕರನ್ನು ಕರೆಯಿಸಿ ಮಹಜರು ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃಹದೇಹವನ್ನು ವಾರೀಸುದಾರರಿಗೆ ಒಪ್ಪಿಸಲಾಯಿತು.

