ಫೋಟೋಗ್ರಾಫಿ, ಪ್ರವಾಸ, ನಟನೆ, ನೃತ್ಯ…..ಇವೆಲ್ಲವೂ ಈತನ ಹವ್ಯಾಸ. ವಿಶೇಷ, ಅಧ್ಭುತವಾದ ಫೋಟೋಗ್ರಾಪಿಗಾಗಿ 6 ಅಂತರ್ರಾಷ್ಟ್ರ ಮಟ್ಟ, 6 ರಾಷ್ಟ್ರ ಮಟ್ಟ ಹಾಗೂ 5 ರಾಜ್ಯ ಮಟ್ಟದ ಆವಾರ್ಡ್ ತನ್ನ ಮುಡಿಗೇರಿಸಿದ ಪ್ರತಿಭಾವಂತ
ನಿತ್ಯಪ್ರಕಾಶ್ ಎಚ್.ಎಸ್.ಬಂಟ್ವಾಳ್.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಾಯಾರ್ಮಾರ್ ನಿವಾಸಿ ಕೆ.ಹರಿಕೃಷ್ಣ ಬಂಟ್ವಾಳ್ ಹಾಗೂ ಶಶಿಕಲಾ. ಜೆ ದಂಪತಿಯ ಪುತ್ರ ನಿತ್ಯಪ್ರಕಾಶ್.ಎಚ್.ಎಸ್. ಬಂಟ್ವಾಳ್, ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದವನು. ಅಟ್ಲಸ್ ಇಂಡಿಯ ಇಂಜಿನರ್ಸ್ ಎಂಬ ಸ್ವಂತ ಉದ್ಯಮ ಸಂಸ್ಥೆ ನಡೆಸುತ್ತಿರುವ ನಿತ್ಯಪ್ರಕಾಶ್ ಪ್ರವೃತ್ತಿಯಲ್ಲಿ ಸೃಜನಶೀಲ ಫೋಟೋಗ್ರಾಫರ್.


ಆಸ್ಟ್ರೇಲಿಯಾ, ಚೀನಾ, ಹಾಂಕಾಂಗ್, ಮೆಶಾವೊ ಮುಂತಾದ ದೇಶಗಳಲ್ಲಿ ಹಾಗೂ ರಾಷ್ಟ್ರದ ಹಲವಾರು ರಾಜ್ಯಗಳಲ್ಲಿ ಸುತ್ತಾಡಿ ಕ್ಲಿಕ್ಕಿಸಿದ ಛಾಯಾಚಿತ್ರಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ನಿತ್ಯಪ್ರಕಾಶ್ ಬಂಟ್ವಾಳ್ ಫೋಟೋ ಟ್ರಾವೆಲ್ ವಿಭಾಗದಲ್ಲಿ ಪೋಟೋ ಗ್ರಾಫಿಕ್ ಸೊಸೈಟಿ ಆಫ್ ಅಮೇರಿಕಾ ಮಾನ್ಯತೆ ಪಡೆದ ಚಿನ್ನದ ಪದಕ, ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ರಾಜಸ್ಥಾನದ ಜೊದೆಪುರದಲ್ಲಿ ನಡೆದ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಓಪನ್ ಕಲರ್ ವಿಭಾಗ ಹಾಗೂ ಫೋಟೋ ಟ್ರಾವೆಲ್ ವಿಭಾಗದಲ್ಲಿ 2 ಚಿನ್ನದ ಪದಕ ಹಾಗೂ 2 ಎಫ್ಐಎಪಿ ರಿಬ್ಬನ್ ಆವಾರ್ಡ್ ಪ್ರಶಸ್ತಿಯನ್ನು ಪಡೆದಿರುವುದು ಫೋಟೋಗ್ರಾಫಿಯ ಮೇಲಿನ ನಿತ್ಯಪ್ರಕಾಶನ ಆಸಕ್ತಿ, ಕ್ರಿಯಾಶೀಲತೆ, ಸಾಧನಾಶೀಲತೆಗೆ ಸಂದ ವಿಶೇಷ ಗೌರವವೇ ಸರಿ. ಅಂತರಾಷ್ಟ್ರ ಮಟ್ಟದ ಈ ಸ್ಪರ್ಧೆಯಲ್ಲಿ 40 ರಾಷ್ಟ್ರಗಳ ಛಾಯಾಚಿತ್ರಗಾರರು ಭಾಗವಹಿಸಿದ್ದರು ಎನ್ನುವುದು ಗಮನಾರ್ಹ ಅಂಶ. ಹೀಗೆ ನಿತ್ಯಪ್ರಕಾಶನ ಸಾಧನೆ ನಿತ್ಯನಿರಂತರವಾಗಿ ಪ್ರಕಾಶಿಸುತ್ತಿರಲಿ ಎಂಬುದೇ ನಮ್ಮ ಹಾರೈಕೆ.
* ಅಂಚು ಬಂಟ್ವಾಳ


