ಬಂಟ್ವಾಳ: ಮಕ್ಕಳ ಅನನ್ಯತೆಯನ್ನು ಗೌರವಿಸಬೇಕು ಹೊರತು ಒತ್ತಡ ಹೇರಬಾರದು, ಅದರಿಂದ ಪ್ರಯೋಜನವೂ ಇಲ್ಲ. ಹೆತ್ತವರ ಕನಸನ್ನು ಮಕ್ಕಳ ಮೇಲೆ ಹೇರಿದರೆ ಖಿನ್ನತೆಗೊಳಗಾಗುತ್ತಾರೆ ಎಂದು ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ದೇಶಕ ನಾಗಸಿಂಹ ಜಿ ರಾವ್ ಆತಂಕ ವ್ಯಕ್ತ ಪಡಿಸಿದರು. ಪತ್ರಕರ್ತರ ಸಂಘದ ರಜತ ವರ್ಷಾಚರಣೆಯ ಅಂಗವಾಗಿ ರಜತ ವರ್ಷಾಚರಣೆ ಸಮಿತಿ, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ, ಪ್ರೆಸ್ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೊಡಿನ ಪ್ರೆಸ್ ಕ್ಲಬ್ ನಲ್ಲಿ ಸೆ. 2ರಂದು ಬುಧವಾರ ನಡೆದ ಮಕ್ಕಳ ಹಕ್ಕು ಮತ್ತು ಮಾಧ್ಯಮ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
18 ವರ್ಷದ ವರೆಗಿನವರು ಅಪರಾಧ ಮಾಡಿದರೂ ಬಾಲಾಪರಾಧಿ ಎಂದು ಕರೆಯುವ ಹಾಗಿಲ್ಲ. ಯಾವುದೇ ತಪ್ಪಿಗೆ ಶಿಕ್ಷೆ ಇದ್ದಲ್ಲಿ ಮಾತ್ರ ಅವರು ಅಪರಾಧಿಗಾಳಗುತ್ತಾರೆ. ಆದರೆ ಮಕ್ಕಳು ಮಾಡುವ ತಪ್ಪಿಗೆ ಶಿಕ್ಷೆ ಇಲ್ಲದೇ ಇರುವುದರಿಂದ ಹಾಗೂ ಮಕ್ಕಳ ಮನಸನ್ನು ಬದಲಾವಣೆ ಮಾಡಬಹುದಾಗಿರುವುದರಿಂದ ಅವರು ಅಪರಾಧಿಗಳಾಗಿರುವುದಿಲ್ಲ, ಬಾಲಪರಾಧಿ ಎನ್ನುವ ಪದವೇ ನಿಷಿದ್ಧ ಎಂದರು.
ಬಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ರಕ್ಷಣೆಯನ್ನು ಮಕ್ಕಳ ಕಲ್ಯಾಣ ಸಮಿತಿ ಮಾಡಬೇಕು. ಆದರೆ ಅವರ ಪುರ್ವಸತಿ ಕಲ್ಪಿಸುವ ಕೆಂದ್ರಗಳು ತುಂಬಿ ತುಳುಕುತ್ತಿರುವುದರಿಂದ ಜಾಗದ ಕೊರತೆ ಇದೆ.
ಇಂದಿನ ಮಕ್ಕಳು ಇಂದಿನ ಪ್ರಜೆಗಳೇ ಎನ್ನುವ ಮೂಲಕ ಭಿಕ್ಷಾಟನೆಯಲ್ಲಿ ತೊಡಗಿರುವ, ವಲಸೆ ಬಂದಿರುವ, ಓಡಿ ಬಂದಿರುವ ಮಕ್ಕಳ ರಕ್ಷಣೆಗೆ ಸರ್ಕಾರ ಬಜೆಟ್ ನಲ್ಲಿ ಅನುದಾನ ಇಡಬೇಕು. ದುರಾದೃಷ್ಟವೆಂದರೆ ಮಕ್ಕಳ ರಕ್ಷಣೆಗೆ ಶೇ. 0.01 ಮಾತ್ರ ಹಣ ಇಡಲಾಗುತ್ತಿದೆ. ಆದ್ದರಿಂದ ಮಕ್ಕಳ ಕಲ್ಯಾಣ ಸಮಿತಿ ಈ ಜವಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ರಕ್ಷಣೆ ಎಲ್ಲರ ಕರ್ತವ್ಯ. ಮಕ್ಕಳು ಸಮುದಾಯದ ಆಸ್ತಿ ಎಂದು ಹೇಳಿದರು.
ಪ್ರತಿ ಜಿಲ್ಲೆಯಲ್ಲಿ ಮಕ್ಕಳ ನ್ಯಾಯಾಲಯ ಇರಬೇಕಾಗಿದೆ. ಪೊಕ್ಸೋ ಕೇಸುಗಳನ್ನು ಮಕ್ಕಳ ನ್ಯಾಯಾಲದಲ್ಲಿ ಇತ್ಯರ್ಥ ಮಾಡಬೇಕಾಗಿದೆ. ಮಕ್ಕಳ ಗ್ರಾಮಸಭೆ ಕೇವಲ ಸುತ್ತೋಲೆಯಾಗಿರುವುದರಿಂದ ಯಶಸ್ಸಾಗಿಲ್ಲ. ಹೆಚ್ಚಿನ ಕಡೆಗಳಲ್ಲಿ ಕಾಟಚಾರಕ್ಕೆ ಮಕ್ಕಳ ಗ್ರಾಮ ಸಭೆ ನಡೆಸಲಾಗುತ್ತಿದೆ. ಅದು ಸರ್ಕಾರದ ಆದೇಶವಾದಗ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದರು.
ಮಕ್ಕಳ ಭಾವನೆಗೆ ಬೆಲೆಕೊಡಬೇಕಾಗಿದೆ. ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಸಂಘ ಇರಲೇ ಬೇಕಿದೆ 1098 ಸಹಾಯವಾಣಿ ಸಂಖ್ಯೆಯನ್ನು ಶಾಲೆಯ ಮುಂದೆ ಹಾಕಬೇಕಾಗಿದೆ. 15 ಪೊಲೀಸ್ ಠಾಣೆಗಳು ಸೇರಿ ಪೊಲೀಸ್ ಯುನಿಟ್ ಮಾಡಿಕೊಂಡು ಮಕ್ಕಳ ಹಕ್ಕುಗಳ ಚರ್ಚೆ ಮಾಡಬೇಕು. ಎಸ್ ಜೆ ಪಿ ಮೂಲಕ ಪೊಲೀಸ್ ಇಲಾಖೆ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಒದಗಿಸ ಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು ಕೇವಲ ಅಂಗನವಾಡಿಗಳಿಗೆ ಮಾತ್ರ ಅಂಗನವಾಡಿಗಳಿಗೇ ಸೀಮಿತವಾಗಬಾರದು ಎಂದು ತಿಳಿಸಿದರು.
ಮಕ್ಕಳ ಹಕ್ಕುಗಳ ಬಗ್ಗೆ ವ್ಯಾಪಕವಾದ ಪ್ರಚಾರ ಅಗತ್ಯವಿದೆ. ಪರಿಚ್ಛೇದ 16ರನ್ವಯ ಮಕ್ಕಳ ಖಾಸಗೀ ತನವನ್ನು ಕಾಯ್ದುಕೊಳಬೇಕು. ಜೆಜೆ ಕಾಯ್ದೆಯ ಪ್ರಕಾರ ಮಕ್ಕಳ ಹೆಸರನ್ನು ಅಥವಾ ಭಾವಚಿತ್ರವನ್ನು ಮಾದ್ಯಮಗಳಲ್ಲಿ ಪ್ರಕಟ ಪಡಿಸಬಾರದು. ಪೋಕ್ಸೋ ಪ್ರಕರಣದಡಿ ಬಂದಿತನಾದವ ಅರೋಪಿಯಾಗದೆ ಅಪರಾಧಿಯಾಗಿರುತ್ತಾನೆ. ಆತ ನಿರಪರಾಧಿತನವನ್ನು ಸಾಬೀತುಪಡಿಸಿಕೊಳ್ಳಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಾಗಿ ಜಾಗೃತಿ ಇರಬೇಕು ಎಂದರು.
ಪರಿಚ್ಛೇದಗಳ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಚುರ ಪಡಿಸುವುದರಿಂದ ಎಲ್ಲರಿಗೂ ಮಕ್ಕಳ ಹಕ್ಕುಗಳನ್ನು ಅರಿಯಲು ಸಹಕಾರಿಯಾಗಿರುತ್ತದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಾಗ ನ್ಯಾಯ ದೊರಕಿಸಿ ಕೊಡಲು ಪತ್ರಕರ್ತರು ಸಹಕರಿಸಿದ್ದಾರೆ ಎಂದು ಮಾಧ್ಯಮದ ಸಹಕಾರವನ್ನು ನೆನೆಪಿಸಿಕೊಂಡ ಅವರು ಮಾಧ್ಯಮಗಳು ಬದಲಾಗುತ್ತಿದ್ದು, ಮಕ್ಕಳ ಖಾಸಗೀ ತನಕ್ಕೆ ತೊಂದರೆಯಾಗದಂತೆ ಸಹಕರಿಸುತ್ತಿದೆ ಎಂದರು .
ಎಂಡೋಪೀಡಿತ ಮಕ್ಕಳನ್ನು ಗುರುತಿಸುವ ಕಾರ್ಯ ಆಂದೋಲನದ ರೀತಿಯಲ್ಲಿ ನಡೆಯಬೇಕು. ಎಂಡೋ ಸಿಂಪಡಣೆಯಾದ ಪ್ರದೇಶದಿಂದ ಬಂದ ತಾಯಿಯಮದಿರ ಮಕ್ಕಳು ಕೂಡ ಎಂಡೋ ಬಾದಿತರಾಗುವುದರಿಂದ ಅವರನ್ನು ಗುರುತಿಸಿ ಅವರಿಗೂ ಪರಿಹಾರ ನೀಡಬೇಕು. ಈ ಬಗ್ಗೆ ನಾವು ಸರ್ಕಾರದ ಜೊತೆ ಚರ್ಚಿಸುವುದಾಗಿ ತಿಳಿಸಿದರು.
ಬಂಟ್ವಾಳ ಉಪವಿಭಾಗದ ಎಎಸ್ಪಿ ರಾಹುಲ್ ಕುಮಾರ್ ಮುಖ್ಯ ಅಥಿಯಾಗಿ ಭಾಗವಹಿಸಿ ಮಾತನಾಡಿ ದ.ಕ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ದವಾಗಿದ್ದು ಇತರ ಜಿಲ್ಲೆಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಮಕ್ಕಳ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಠನಗೊಳಿಸಲಾಗಿದ್ದು ಮಕ್ಕಳ ಹಕ್ಕುಗಳ ರಕ್ಷಣೆ ಪೋಷಣೆ ಕುರಿತಾದ ವಿವಿಧ ಕಾಯ್ದೆಗಳ ಕುರಿತಾಗಿ ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಪತ್ರಕರ್ತರು ಈ ಬಗ್ಗೆ ತರಬೇತಿ ಪಡೆಯುವುದು ಔಚಿತ್ಯಪೂರ್ಣ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಜತ ವರ್ಷಾಚರಣೆ ಸಮಿತಿ ಇಬ್ರಾಹಿಂ ಅಡ್ಕಸ್ಥಳ, ಪ್ರೆಸ್ ಕ್ಲಬ್ ಅಧ್ಯಕ್ಷ, ಪ್ರಶಾಂತ್ ಪುಂಜಾಲಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಸ್ವಾಗತಿಸಿದರು. ಉಪಾಧ್ಯಕ್ಷ ರತ್ನದೇವ್ ವಂದಿಸಿದರು. ರಜತ ವರ್ಷಾ ಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.







