ಬಂಟ್ವಾಳ: ಎಲ್ಲರಿಗೂ ತಮ್ಮ ಮಾತೃ ಭಾಷೆಯ ಮೇಲೆ ಅಭಿಮಾನವಿರುತ್ತದೆ. ನನ್ನ ಮೊದಲ ಆದ್ಯತೆ ತುಳು ಭಾಷೆಗೆ. ತಾಂತ್ರಿಕ ಗುಣಮಟ್ಟ ಇರುವ ಯಾವುದೇ ತುಳು ಸಿನಿಮಾ ಸೋಲಲು ಸಾಧ್ಯವೇ ಇಲ್ಲ…
ಇದು ಸಿನಿಮಾ ನಟ, ನಿರ್ದೇಶಕ ಶಿವಧ್ವಜ್ ಅವರ ಮನದಾಳದ ಮಾತು. ತಾಲೂಕಿನ ವೃದ್ಧಿ ಸಿನಿ ಕ್ರಿಯೇಶನ್ಸ್ನಿಂದ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ತುಳು ಚಲನ ಚಿತ್ರ ಪನೋಡಾ ಬೊಡ್ಚಾ…? ಹಾಗೂ ತುಳು ಚಿತ್ರರಂಗದ ಬಗ್ಗೆ ಚಿತ್ರ ತಂಡದೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
ತಾಂತ್ರಿಕ ಗುಣಮಟ್ಟ ಉತ್ತಮವಾಗಿರುವ ಎಲ್ಲಾ ಚಿತ್ರಗಳು ಚೆನ್ನಾಗಿ ಓಡುತ್ತವೆ ಇದಕ್ಕೆ ತುಳು ಸಿನಿಮಾಗಳು ಹೊರತಾಗಿಲ್ಲ. ರಭಸದಿಂದ ಹಲವು ಸಿನಿಮಾಗಳು ಬಂದರೂ ಉತ್ತಮ ಸಿನಾಮಗಳಿಗೆ ಮಾತ್ರ ಪ್ರೇಕ್ಷಕ ಮನ್ನಣೆ ನೀಡುವುದರಿಂದ ಅಂತವುಗಳು ಉಳಿಯುತ್ತದೆ ಎನ್ನುತ್ತಾರೆ ಶಿವಧ್ವಜ್.
ಇತ್ತೀಚಿನ ದಿನಗಳಲ್ಲಿ ತುಳು ಚಿತ್ರರಂಗದ ಬೆಳವಣಿಗೆ ಉತ್ತಮವಾಗಿದೆ. ನಟರಾಗಿ, ತಂತ್ರಜ್ಞರಾಗಿ ಅನೇಕ ತುಳುವರು ದೇಶದ ವಿವಿಧ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ತುಳು ಭಾಷೆಯ ಮೇಲೆ ಅಭಿಮಾನ ವಿದೆ. ತುಳು ಭಾಷೆಯ ಚಿತ್ರದಲ್ಲಿ ಕೆಲಸ ಮಾಡಬೇಕೆನ್ನುವ ಹಂಬಲವಿದೆ. ಪನೋಡಬೊಡ್ಚ ಚಿತ್ರದಲ್ಲೂ ನಟರೂ ಹಾಗೂ ತಂತ್ರಜ್ಷರು ಸಿನಿಮಾ ಕ್ಷೇತ್ರದಲ್ಲಿ ಅನುಭವ ಪಡೆದ ತುಳುವರೇ ಆಗಿದ್ದು ಉತ್ತಮ ಚಿತ್ರವಾಗಿ ಮೂಡಿ ಬರಲಿದೆ ಎಂದರು.
ಒಂದೇ ತಿಂಗಳಲ್ಲಿ ಎರಡು ಮೂರು ಚಿತ್ರಗಳು ಬಿಡುಗಡೆಯಾದರೆ ಥಿಯೇಟರ್ಗಳ ಕೊರತೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ತುಳು ನಿರ್ಮಾ ಪಕರ ಸಂಘಟನೆ ಅಗತ್ಯವಾಗಿದ್ದು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸ ಬೇಕಾಗಿದೆ. ಪನೋಡಾಬೊಡ್ಚ ಚಿತ್ರದಲ್ಲಿ ಉತ್ತಮ ಸಂದೇಶ ಇದ್ದು ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಆರೋಗ್ಯಕರ ಸ್ಪರ್ಧೆ ಬೇಕು:
ಕನ್ನಡ, ಮಲಯಾಳಂ, ಮರಾಠಿ ಚಿತ್ರಗಳಂತೆ ತುಳು ಸಿಮಾಗಳಿಗೂ ಮಾರ್ಕೆಟ್ ಸೃಷ್ಟಿಯಾಗುತ್ತಿದೆ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನುವುದು ಚಿತ್ರದ ನಿರ್ದೇಶಕ ಮಧು ಸುರತ್ಕಲ್ ಅಭಿಪ್ರಾಯ. ಪ್ರೇಕ್ಷಕರ ಸಹಕಾರ ತುಳು ಸಿನಿಮಾ ಹಾಗೂ ರಂಗಭೂಮಿಗೆ ಇದ್ದೇ ಇದೆ. ಆದ್ದರಿಂದಲೇ ಇಷ್ಟೋಂದು ಸಿನಿಮಾಗಳು ಒಂದರ ಹಿಂದೆ ಒಂದು ಬರಲು ಸಾಧ್ಯವಾಗಿದೆ ಮಾತ್ರವಲ್ಲದೆ ಅನೇಕ ನಾಟಕ ತಂಡಗಳು ಜೀವಂತಿಕೆಯಲ್ಲಿರಲು ಸಾಧ್ಯವಾಗಿದೆ. ಪನೋಡಾ ಬೊಡ್ಚಾ… ಉತ್ತಮ ಕಥೆ. ಮಂಗಳೂರು ಸುತ್ತಮುತ್ತ ಈಗಾಗಲೇ ಅನೇಕ ಚಿತ್ರಗಳು ನಿರ್ಮಾಣಗೊಂಡಿರುವುದರಿಂದ ಬಂಟ್ವಾಳದ ಸುತ್ತಮುತ್ತಲಿನ ಪಾಕೃತಿಕ ಸೌಂದರ್ಯದ ಸ್ಥಳಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
5 ಮಧುರ ಹಾಡುಗಳಿವೆ:
ಮೆಲೋಡಿಯಸ್ ಹಾಡುಗಳಿಗೆ ಪ್ರಾಮುಖ್ಯತೆ ನಿಡಿಲಾಗಿದ್ದು 5 ಮಧುರವಾದ ಹಾಡುಗಳಿವೆ. ಒಂದು ಐಟಂ ಹಾಡು ಇದೆ. ಚಿತ್ರದ ಕಥೆಯನ್ನು ಆದರಿಸಿ ಸಂಗೀತ ಸಿದ್ದ ಪಡಿಸಲಾಗಿದೆ ಎಂದು ಸಂಗೀತಾ ನಿರ್ಧೇಶಕ ಚಂದ್ರಕಾಂತ್ ಶೆಟ್ಟಿ ತಿಳಿಸಿದರು.
ರಂಗ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ:
ಇತ್ತೀಚಿನ ದಿನಗಳಲ್ಲಿ ತುಳು ಸಿಮಾದಲ್ಲಿ ಹಾಸ್ಯ ಪ್ರಧಾನ ಚಿತ್ರಗಳೇ ಬರುತ್ತಿವೆ. ಇದಕ್ಕೆ ಭಿನ್ನವಾಗಿ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಪನೋಡಾ ಬೊಡ್ಚ ಚಿತ್ರದ ಕಥೆ ಬರೆದಿದ್ದೇನೆ. ಸಿನಿಮಾ ನೋಡುತ್ತಿದ್ದಂತೆಯೇ ಅದರಲ್ಲಿನ ಪಾತ್ರಗಳು ನಾವೇ ಆಗಿ ಬಿಡುವಷ್ಟು ಕಥೆ ಮೌಲ್ಯುಯುತವಾಗಿದೆ ಎನ್ನುವುದು ಚಿತ್ರಕಥೆ, ಸಂಭಾಷಣೆ ಬರೆದ ಸುಂದರ ರೈ ಮಂದಾರ ಅವರ ಅಭಿಪ್ರಾಯ.
ತುಳುನಾಡಿನಲ್ಲಿ ಸುಮಾರು 18 ನಾಟಕ ತಂಡಗಳಿವೆ. ಪ್ರತೀ ತಂಡದಿಂದಲೂ ಇಬ್ಬರು ಕಲಾವಿದರನ್ನು ಸಿನಿಮಾಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ನಾಟಕ ಬಿಟ್ಟು ಸಿನಿಮಾ ಇಲ್ಲ. ಜನ ಬದಲಾವಣೆ ಕೇಳಿದಾಗ ಪರಿಸ್ಥಿತಿಗೆ ತಕ್ಕಂತೆ ಕಲಾವಿದರು ಒಗ್ಗಿಕೊಳ್ಳುವ ಅಗತ್ಯತೆ ಇದೆ. ನಾಟಕ ಹಾಗೂ ಸಿನಿಮಾವನ್ನು ಜತೆಯಾಗಿ ಕೊಂಡೊಯ್ಯುವ ಚಿಂತನೆ ಇದೆ ಎಂದರು.
ವಿಶಿಷ್ಟ ಕ್ಯಾಮಾರಾ ಬಳಕೆ:
ತುಳು ಚಿತ್ರರಂದಲ್ಲೇ ಮೊದಲ ಬಾರಿಗೆ ಛಾಯಾಗ್ರಹಣಕ್ಕಾಗಿ ಸುದಾರಿತ ಕ್ಯಾಮರ ಬಳಸಿಕೊಳ್ಳಲಾಗುತ್ತ್ತಿದೆ ಎಂದು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ತಿಳಿಸಿದರು. ರೆಡ್ ಎಪಿಕ್ ಡ್ರಾಗನ್ ಕ್ಯಾಮರ ಹಾಗೂ ಅಲೂರಾ ಝೂಂನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಕನ್ನಡ ಹಗೂ ತಮಿಳಿನ ಅಧಿಕ ಬಜೆಟ್ನ ಚಿತ್ರಗಳಲ್ಲಿ ಈ ಕ್ಯಾಮಾರ ಬಳಸಿಕೊಳ್ಳಲಾಗಿದೆ. ತುಳುನಾಡಿನ ಪ್ರಾಕೃತಿಕ ಸವಂದರ್ಯ ಶೂಟಿಂಗ್ಗೆ ಹೆಚ್ಚು ಸೂಕ್ತವಾದುದು. ಈಗೀನ ಸೀಸನ್ ಅಂತೂ ಕ್ಯಾಮರಮನ್ಳಿಗೆ ಉತ್ತಮವಾದುದು ಎಂದರು. ಸಂಭಾವನೆಗಿಂತಲೂ ಹೆಚ್ಚಾಗಿ, ತುಳುವಿನಲ್ಲಿ ಉತ್ತಮ ಗುಣಮಟ್ಟದ ಸಿನಿಮಾ ನಿರ್ಮಾಣವಾಗಬೇಕು ಎನ್ನುವ ಅಭಿಮಾನದಿಂದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ತುಳು ಚಿತ್ರರಂಗ ಬೆಳೆಯಬೇಕು
ತುಳು ಚಿತ್ರರಂಗ ಚೆನ್ನಾಗಿ ಬೆಳೆಯ ಬೇಕು ಎನ್ನುವ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕೆ ಕೈ ಹಾಕಲಾಗಿದೆ ಎಂದು ಚಿತ್ರ ನಿರ್ಮಾಪಕ ವಿನಯ ನಾಯಕ್ ಪಚ್ಚಾಜೆ ತಿಳಿಸಿದರು. ತುಳುನಾಡಿನ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಂಡು ಚಿತ್ರ ಮೂಡಿ ಬರಲಿದೆ. ಉತ್ತಮ ಕಥೆಯಿದೆ, ಜೊತೆಗೆ ಸಂಪೂರ್ಣ ಸಹಕಾರ ನೀಡುವ ಚಿತ್ರತಂಡವಿದೆ. ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಹೊಸ ತಾಂತ್ರಕತೆ ಹಾಗೂ ಪ್ರಯೋಗದೊಂದಿಗೆ ಚಿತ್ರ ನಿರ್ಮಾಣವಾಗಲಿದ್ದು ಪ್ರೇಕ್ಷಕರು ಸಂಪೂರ್ಣ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
.ಸಂದೀಪ್ ಸಾಲ್ಯಾನ್

