ಕೈಕಂಬ: ಮರವೇರಿ ತೆಂಗಿನಕಾಯಿ ತೆಗೆಯುವ ಕಾಯಕದೊಂದಿಗೆ ಜೀವನ ನಡೆಸುವವರಿದ್ದಾರೆ. ತೆಂಗಿನ ಸಿಪ್ಪೆ ತೆಗೆದು ಬದುಕುವ ದಿನಗೂಲಿಗಳಿದ್ದಾರೆ. ಆದರೆ ತೆಂಗಿನ ಮರವೇರಬೇಕು ಅಥವಾ ಸಿಪ್ಪೆ ತೆಗೆಯಬೇಕು ಎಂಬ ತಾಪತ್ರಯವೇ ಇಲ್ಲದ ಮತ್ತೊಂದು ವರ್ಗ ಸಕತ್ತಾಗಿ ತೆಂಗಿನ ವ್ಯಾಪಾರ ಮಾಡುತ್ತದೆ ಎಂದರೆ ನೀವು ನಂಬಲೇಬೇಕು. ಹೌದು, ಅವರು ಮಳೆಗಾಲದಲ್ಲಿ ನದಿಗಳು, ತೋಡು ಬದಿಗಳಲ್ಲಿ ತೇಲಿ ಬರುವ ತೆಂಗಿನಕಾಯಿ ಹಿಡಿಯುತ್ತಾರೆ ಮತ್ತು ಆ ಮೂಲಕ ಜೀವನ ಸಾಗಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ಸಾಕಷ್ಟು ತೆಂಗಿನ ತೋಟಗಳಿವೆ. ಮಳೆಗಾಲದಲ್ಲಿ ಮರ ಜಾರುವ ಕಾರಣ ತೆಂಗಿನ ಮರವೇರುವುದು ವಿರಳ. ಹಾಗಾಗಿ ಮಳೆಗಾಲದಲ್ಲಿ ಒಣಗಿದ ತೆಂಗು ನದಿಗೋ, ತೊರೆಗೋ ಬಿದ್ದು, ನೀರುಪಾಲಾಗುವುದು ಸಹಜ. ನದಿಯಲ್ಲಿ ಪ್ರವಾಹ ಬಂದಾಗ ಅಲ್ಲಿಲದಲಿ ಸಿಕ್ಕಿಹಾಕಿಕೊಂಡಿದ್ದ ಇಂತಹ ನೂರಾರು ತೆಂಗಿನಕಾಯಿ ತೇಲಿಕೊಂಡು ಬರುವುದು ಮತ್ತು ನಾನಾ ಕಸರತ್ತಿನ ಮೂಲಕ ಅದನ್ನು ಹಿಡಿಯಲು ಪ್ರಯತ್ನಿಸುವಜನರನ್ನು ನಾವು ಕಾಣುತ್ತೇವೆ.
ನದಿಗೆ ಹತ್ತಿರದಲ್ಲಿ ವಾಸಿಸುತ್ತಿರುವ ಕೆಲವರು ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿದು ಮಾರಾಟ ಮಾಡಿ ಜೀವನಹೊರೆಯುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ನದಿ ಪಾತ್ರದಲ್ಲಿ ವಾಸಿಸುವ ಬಹುತೇಕ ಮಂದಿ ಈಜು ಕಲಿತಿರುತ್ತಾರೆ. ನದಿಯಲ್ಲಿ ತೇಲಿ ಬರುವ ತೆಂಗಿನಕಾಯಿ, ಅಡಕೆ, ಮರದ ದಿಮ್ಮಿ ಮತ್ತಿತರ ಸೊತ್ತು ಹಿಡಿಯುವ ಈ ಮಂದಿ ಅದಕ್ಕಾಗಿ ನದಿ ಬದಿಯಲ್ಲಿ ಸಿದ್ಧತೆ ಮಾಡಿಟ್ಟುಕೊಂಡಿರುತ್ತಾರೆ. ಕೆಲವು ಸಾಹಸಿಗರು ನದಿಯಲ್ಲಿ ಪ್ರವಾಹದೆದುರು ಈಜಿಕೊಂಡು ಸಲೀಸಾಗಿ ತೆಂಗಿನಕಾಯಿ ಹಿಡಿದರೆ, ಇನ್ನು ಕೆಲವರು ನದಿ ದಂಡೆಯಲ್ಲಿ ಮರದ ಅಟ್ಟಳಿಕೆ ಮಾಡಿಕೊಂಡು, ಅದರಲ್ಲಿ ನಿಂತು ಬಲೆ ಬೀಸಿ ಅಥವಾ ಮಾವು ಕೊಯ್ಯುವ `ಕಲ್ಲಿ’ (ತುಳುವಿನ ಹೆಸರು) ಬಳಸಿಕೊಂಡು ತೆಂಗಿನಕಾಯಿ ಹಿಡಿಯುತ್ತಾರೆ.
ಇಂತಹ ಸನ್ನಿವೇಶಗಳು ನಿಮ್ಮೂರಲ್ಲೂ ಇರಬಹುದಲ್ಲವೇ ? ಏನೇ ಇರಲಿ, ನಾವೀಗ ನೇರವಾಗಿ ವಯಾ ಮಾನಿಲ ಗ್ರಾಮವಾಗಿ ಕರ್ನಾಟಕ-ಕೇರಳ ಗಡಿ ಪ್ರದೇಶದಲ್ಲಿ ಹರಿಯುವ ಸೆರಾಜೆ ಉಪನದಿಯತ್ತ ತೆರಳಿ ಅಲ್ಲಿ ತೆಂಗಿಕಾಯಿ ಹೇಗೆ ಹಿಡಿಯುತ್ತಾರೆ ಎಂಬುದರ ಬಗ್ಗೆ ಸ್ವಲ್ಪದರಲ್ಲಿ ಅವಲೋಕಿಸೋಣ. ಮಳೆಗಾಲವೆಂದರೆ ಸೆರಾಜೆ ಜನರಿಗೆ ಇನ್ನಿಲ್ಲದ ಸಂತಸ. ಜೋರು ಮಳೆಯಾಯಿತೆಂದರೆ ಈ ಸಂತೋಷಕ್ಕೆ ಪಾರವೇ ಇಲ್ಲ. ಇದಕ್ಕೆ ಕಾರಣ ತೆಂಗು ! ಇಲ್ಲಿನ ಕೆಲವಾರು ರೈತರು ನದಿ ಬದಿಯಲ್ಲಿ ಬಿದಿರು ಮತ್ತು ಕಂಗಿನ ತುಂಡುಗಳಿಂದ ನಿರ್ಮಿಸಲಾದ ಅಟ್ಟಳಿಕೆಯಲ್ಲಿ ನಿಂತು ಕಲ್ಲಿ ಅಥವಾ ಬಲೆ ಬೀಸಿ ತೆಂಗಿನಕಾಯಿ ಹಿಡಿದರೆ, ಇನ್ನು ಕೆಲವರು ರೊಯ್ಯೆಂದು ನೀರಿಗೆ ಹಾರಿ ಸೊತ್ತುಹಿಡಿದು ಈಜಿಕೊಂಡು ದಡ ಸೇರುತ್ತಾರೆ. ಸೇರಾಜೆಯ ದಾಮು ಎಂಬವರು ಮಳೆಗಾಲದಲ್ಲಿ ತನ್ನ ತಂಡದೊಂದಿಗೆ ಈ ವೃತ್ತಿ ನಡೆಸುತ್ತಿದ್ದು, ಇವರ ತಂಡ ಮೂರು ತಿಂಗಳ ಮಳೆಗಾಲದಲ್ಲಿ 10,0000ಕ್ಕೂ ಹೆಚ್ಚು ತೆಂಗಿನಕಾಯಿ ಹಿಡಿಯುತ್ತದೆ ಎಂದರೆ ನೀವು ನಂಬಲೇಬೇಕು.
ಈ ತೆಂಗಿನಕಾಯಿ ಮಾರಾಟದಲ್ಲಿ ಬಂದ ಹಣವನ್ನು ತಂಡದ ಸದಸ್ಯರು ಹಂಚಿಕೊಳ್ಳುತ್ತಾರೆ. ತೆಂಗಿನ ತೋಟವೇ ಇಲ್ಲದ ಇವರು ಮಾರ್ಕೆಟ್ಟಿಗೆ ತೆಂಗಿನಕಾಯಿ ಕೊಂಡೊಯ್ಯುವಾಗ ಕೆಲವರು ಬೆರಗುಗಣ್ಣಿನಿಂದ ನೋಡುವುದುಂಟಂತೆ. ಇದೊಂದು ಜೀವದ ಹಂಗು ತೊರೆದು ನಡೆಸುವ ಸಾಹಸಮಯ ವೃತ್ತಿಯೂ, ಪ್ರವೃತ್ತಿಯೂ ಆಗಿದೆ. ನೋಡುಗರಿಗೆ ಇದೊಂದು ಸುಲಭದ ಕಾಯಕವೆಂದು ಕಂಡು ಬಂದರೂ ಪ್ರವಾಹದೆದುರು ಈಜಿ ತಮ್ಮ ಹೊಟ್ಟೆಗೆ ಹಿಟ್ಟು ಹಾಕಲು
ಕಂಡುಕೊಂಡಿರುವ ಇವರ ಸಾಹಸ ನಿಜಕ್ಕೂ ಮೈನವಿರೇಳಿಸುವಂತಿದೆ.
ದನಂಜಯ ಗುರುಪುರ.





