ಜಾತಿಗಣತಿಯಲ್ಲಿ ಲೋಪ ಆರೋಪ
ಮೂಡುಬಿದರೆ : ಕರ್ನಾಟಕ ರಾಜ್ಯದ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ಲೋಪ ಹಾಗೂ ಹೊಸ ಜಾತಿ ಸೇರ್ಪಡೆ ಮತ್ತು ಅದನ್ನು ತೆರವುಗೊಳಿಸುವ ಕುರಿತಾದ ವಿಚಾರ ಸಂಕಿರಣವು ಆ.23ರಂದು ಮೂಡುಬಿದರೆ ಸಮಾಜ ಮಂದಿರದ ಮೀಟಿಂಗ್ ಹಾಲ್‍ನಲ್ಲಿ ನಡೆಯಲಿದೆ ಎಂದು ಕರ್ನಾಟದ ಆದಿ ದ್ರಾವಿಡ ಮಹಾಮಂಡಲದ ಮೂಡುಬಿದರೆ ಶಾಖೆಯ ಅಧ್ಯಕ್ಷ ಜಯಕುಮಾರ್ ಬೆಳುವಾಯಿ ತಿಳಿಸಿದ್ದಾರೆ.
ಮೂಡುಬಿದರೆ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಕೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಹಾಮಂಡಲದ ಗೌರವ ಅಧ್ಯಕ್ಷ ಶೀನ ಮಾಸ್ತಿಕಟ್ಟೆ 2015ರಲ್ಲಿ ಸರಕಾರ ನಡೆಸಿದ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯಲ್ಲಿ ಆದಿದ್ರಾವಿಡ ಸಮುದಾಯಕ್ಕೆ ಅನ್ಯಾಯವಾಗಿದ್ದು ಈ ಸಮೀಕ್ಷೆಯಲ್ಲಾಗಿರುವ ಲೋಪವನ್ನು ಸರಿಪಡಿಸಬೇಕು. ಹೊಸ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಯ ವಿವರದಲ್ಲಿ ಹೆಚ್ಚುವರಿ ಜಾತಿಗಳನ್ನು ಅನಗತ್ಯವಾಗಿ ಸೇರಿಸಲಾಗಿದೆ. ಸಮೀಕ್ಷೆಯ ಕೈಪಿಡಿ ಪುಟ 86ರಲ್ಲಿ ಕ್ರ.ಸಂಖ್ಯೆ 799 ಮತ್ತು 800ರಲ್ಲಿ ನಿಷೇಧಿತ ಪದಗಳಾದ `ಮನ್ಸ’ ಮತ್ತು `ಮನ್ಸೇರ್’ ಅನ್ನು ಬಳಕೆಮಾಡಲಾಗಿದೆ. ಇದರ ಜತೆಗೆ ಹಲವು ಲೋಪಗಳು ಆಗಿವೆ. ಸರಕಾರದ ಹಿಂದುಳಿದ ವರ್ಗಗಳ ಆಯೋಗ ಪರಿಶಿಷ್ಟ ಜಾತಿಯ ಮಾಹಿತಿ ಸಂಗ್ರಹಿರುವುದೆ ಕಾನೂನುಬದ್ದವಲ್ಲ. ಆದ್ದರಿಂದ ಈ ಸಮೀಕ್ಷೆಯನ್ನು ಸರಕಾರ ಅಧಿಕೃತಗೊಳಿಸಿ ಅಧಿಸೂಚನೆ ಹೊರಡಿಸಬಾರದು ಎಂದು ಅವರು ಆಗ್ರಹಿಸಿದರು. ಗಣತಿಯಲ್ಲಾಗಿರುವ ಲೋಪ, ಅನಗತ್ಯ ಜಾತಿಪದ ಸೇರ್ಪಡೆ ತೆರವುಗೊಳಿಸುವ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿಯಾಗಿ ಒತ್ತಾಯಿಸಲಾಗುವುದು ಎಂದರು. . ಸಂಘದ ಉಪಾಧ್ಯಕ್ಷ ಲೋಕನಾಥ, ಜತೆಕಾರ್ಯದರ್ಶಿ ಕೇಶವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
