ಬಂಟ್ವಾಳ: ನಕಲಿ ಪಾಸ್ಪೋರ್ಟ್ ತಯಾರಿಸಿ ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಕೊಲೆ ಕೇಸಿನ ಪ್ರಮುಖ ಆರೋಪಿಯನ್ನುಮಂಗಳವಾರ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರಕ್ಷಿತ್ ಎ ಕೆ ಮತ್ತು ತಂಡ ಬಂಧಿಸಿದೆ.
ಮಾರಿಪ್ಪಳ್ಳ ನಿವಾಸಿ ಮಹಮ್ಮದ್ ಹನೀಫ್ ಯಾನೆ ಹನೀಫ್ ಯಾನೆ ಚೊಟ್ಟೆ ಹನೀಫ್ (33) ಬಂಧನಕ್ಕೊಳಗಾದ ವ್ಯಕ್ತಿಯಾಗಿದ್ದಾನೆ.ಈತ ಮಾರಿಪ್ಪಳ್ಳ ರಿಕ್ಷಾ ಚಾಲಕ ರಿಪಾಯಿ ಕೊಲೆ ಕೇಸಿನ ಪ್ರಮುಖ ಆರೋಪಿಯಾಗಿದ್ದು, ರಾಜ್ಯ ಉಚ್ಛ ನ್ಯಾಯಾಲದಿಂದ ಶರತ್ತು ಬದ್ದ ಜಾಮೀನು ಮೂಲಕ ಹೊರಗಡೆ ಬಂದಿದ್ದ. ಪಾಸ್ ಪೋರ್ಟ್ ಮಾಡಿರುವ ಮಾಹಿತಿ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಗಳಿಗೆ ಲುಕೌಟ್ ನೋಟೀಸ್ ಜಾರಿಗೊಳಿಸಲಾಗಿತ್ತು.
ಮಂಗಳವಾರ ಬಜ್ಪೆ ನಿಲ್ದಾಣದಲ್ಲಿ ವಿದೇಶಕ್ಕೆ ಪಲಾಯನ ನಡೆಸಲು ಯತ್ನಿಸುತ್ತಿದ್ದ ಸಂದರ್ಭ ವಿಮಾನ ನಿಲ್ದಾಣ ಅಧಿಕಾರಿಗಳು ತಡೆ ಹಿಡಿದು, ಬಂಟ್ವಾಳ ಗ್ರಾಮಾಂತರ ಠಾಣೆಗೆ ಹಸ್ಥಾಂತರಿಸಿದ್ದಾರೆ. ಈತ 2008ರಲ್ಲಿ ಮೈಸೂರಿನ ನಕಲಿ ವಿಳಾಸವನ್ನು ನೀಡುವ ಮೂಲಕ ನಕಲಿ ಪಾಸ್ಪೋರ್ಟ್ ತಯಾರಿಸಿಟ್ಟುಕೊಂಡಿದ್ದು, ಅದರ ಮೂಲಕ ವಿದೇಶಕ್ಕೆ ಹೋಗುವ ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

