ಸುದ್ದಿ9ಬಂಟ್ವಾಳ : ಅಡುಗೆ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕನೊಬ್ಬ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಬಸ್ತಿಪಡ್ಪು ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಗಾಯಾಳುವನ್ನು ಸುದೀಪ್ (28) ಎಂದು ಹೆಸರಿಸಲಾಗಿದೆ. ಈತ ಬಿ.ಸಿ.ರೋಡಿನಲ್ಲಿ ಫಾಸ್ಟ್ಫುಡ್ ವ್ಯಾಪಾರ ನಡೆಸುತ್ತಿದ್ದು, ಬಸ್ತಿಪಡ್ಪುವಿನಲ್ಲಿ ಬಾಡಿಗೆ ರೂಂ ಪಡೆದುಕೊಂಡು ವಾಸ್ತವ್ಯ ಹೊಂದಿದ್ದ. ಫಾಸ್ಟ್ಫುಡ್ ತಿಂಡಿ ತಯಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗ್ಯಾಸ್ ಸೋರಿಕೆಯಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಬಂಟ್ವಾಳ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
