ಮೂಡುಬಿದಿರೆ : ಬಾವಿಗೆ ಬಿದ್ದ ಚಿರತೆಯೊಂದನ್ನು ಮೂಡುಬಿದಿರೆಯ ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮೂಡುಬಿದಿರೆ ಸಮೀಪದ ಮೂಡುಮಾರ್ನಾಡಿನ ಕೆಂಪುಗುಡ್ಡೆ ಎಂಬಲ್ಲಿ ನಡೆದಿದೆ.
ಕೆಂಪುಗುಡ್ಡೆಯ ರಾಘು ಪೂಜಾರಿ ಎಂಬವರಿಗೆ ಸೇರಿದ ಆವರಣವಿಲ್ಲದ ಬಾವಿಗೆ ಸೋಮವಾರ ಮುಂಜಾನೆ ವೇಳೆಗೆ ಚಿರತೆ ಬಿದ್ದಿದ್ದು ಇದು ಸುಮಾರು 4 ವರ್ಷದ ಗಂಡು ಚಿರತೆಯೆಂದು ಗುರುತಿಸಲಾಗಿದೆ. ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಜಿಡಿ ದಿನೇಶ್ ನೇತೃತ್ವ, ಮೂಡುಬಿದಿರೆ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಮಾರ್ಗದರ್ಶನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಅರಣ್ಯಾಧಿಕಾರಿಗಳು ದೊಡ್ಡದಾದ ಮರದ ದಿಮ್ಮಿಯನ್ನು ಏಣಿಯಂತೆ ನಿರ್ಮಿಸಿ ಬಾವಿಯೊಳಗೆ ಹಾಕಿ ಚಿರತೆ ಬಾವಿಯಿಂದ ಮೇಲಕ್ಕೆ ಬರುವಂತೆ ಸಹಾಯ ಮಾಡಲಾಗಿದ್ದು ಆ ಮೂಲಕ ಚಿರತೆ ಬಾವಿಯಿಂದ ಮೇಲಕ್ಕೆ ಬಂದು ಕಾಡಿನೊಳಗೆ ಓಡಿ ಹೋಗಿದೆ.
ಮುಂಜಾನೆ 3 ಗಂಟೆ ವೇಳೆಗೆ ವಸ್ತುವೊಂದು ಬಿದ್ದ ಶಬ್ದ ಕೇಳಿ ಬಂದಿದ್ದು ಎಚ್ಚರಗೊಂಡ ಮನೆಯವರು ಬಂದು ನೋಡಿದಾಗ ಚಿರತೆ ಬಾವಿಯಲ್ಲಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮನೆಯವರು ಮೂಡುಬಿದಿರೆ ಪೊಲೀಸರಿಗೆ, ಅರಣ್ಯಾಧಿಕಾರಿಗಳಿಗೆ ಮತ್ತು ಪಡು ಮಾರ್ನಾಡು ಗ್ರಾ.ಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ ಅವರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಸ್ಪಂದಿಸಿದ ಅರಣ್ಯಾಧಿಕಾರಿಗಳು : ಕೆಂಪುಗುಡ್ಡೆಯಲ್ಲಿ ಬಾವಿಗೆ ಚಿರತೆ ಬಿದ್ದಿರುವುದರ ಬಗ್ಗೆ ರಾಘು ಪೂಜಾರಿ ಅವರು ತನಗೆ ಬೆಳಿಗ್ಗೆ ಕರೆ ಮಾಡಿ ತಿಳಿಸಿದಾಗ ತಾನು ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿ ನಂತರ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದೇನೆ ತಕ್ಷಣ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆಂದು ಪಡು ಮಾರ್ನಾಡು ಗ್ರಾ.ಪಂ ಅಧ್ಯಕ್ಷ ಶ್ರೀನಾಥ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಶಿರ್ತಾಡಿ ಉಪ ವಲಯಾರಣ್ಯಾಧಿಕಾರಿ ಜಯಪ್ರಕಾಶ್, ಬಜಗೋಳಿ ಉಪವಲಯಾರಣ್ಯಾಧಿಕಾರಿ ಪ್ರಮೋದ್, ಬೆಳುವಾಯಿ ಅರಣ್ಯ ರಕ್ಷಕ ನಾಗರಾಜ, ಸುಧಾಕರ, ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿದ್ದರು.


