ಮೂಡುಬಿದಿರೆ: ಪಾಲಡ್ಕ ಗ್ರಾ.ಪಂನಲ್ಲಿ ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಪರಸ್ಪರ ತಳ್ಳಾಟ ನಡೆದಿದ್ದು, ಗೊಂದಲದ ಸನ್ನಿವೇಶ ನಿರ್ಮಾಣವಾಯಿತು.

ಚುನಾವಣಾಧಿಕಾರಿ ದಿನೇಶ್ ಕುಮಾರ್ ಫಲಿತಾಂಶ ಘೋಷಿಸಿ ಅಧ್ಯಕ್ಷ, ಉಪಾಧ್ಯಕ್ಷರ ವಿಜಯೋತ್ಸವಕ್ಕೆ ಅಣಿಯಾಗುತ್ತಿದ್ದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡ ಸತೀಶ್ ಮಾರ್ಲ ಸವಿತಾ ಅವರನ್ನು ಚುನಾವಣೆಯಲ್ಲಿ ನಾವೇ ನಿಲ್ಲಿಸಿ ಅವರ ಖರ್ಚು ವೆಚ್ಚಗಳನ್ನು ಭರಿಸಿದ್ದು ಈಗ ಬಿಜೆಪಿಯವರು ಆಮಿಷ ನೀಡಿ ಅವರನ್ನು ಅಧ್ಯಕ್ಷರನ್ನಾಗಿಸಿದ್ದಾರೆ. ಸವಿತಾ ಅವರ ಪತಿಯು ತನಗೆ 13.50 ಲಕ್ಷ ರೂ. ಸಾಲವಿದ್ದು ಈ ಮೊತ್ತವನ್ನು ನೀಡಿದರೆ ಕಾಂಗ್ರಸ್ಗೆ ಬೆಂಬಲಿಸುವುದಾಗಿ ಹೇಳಿದ್ದರು. ಇದಕ್ಕೆ ನಿರಾಕರಿಸಿದಾಗ ಬಿಜೆಪಿಯೊಂದಿಗೆ ಸೇರಿ ನಮಗೆ ಅನ್ಯಾಯ ಮಾಡಿದ್ದಾರೆ ನುಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಬಿಜೆಪಿ ಮುಖಂಡ ಕೆಪಿ ಸುಚರಿತ ಶೆಟ್ಟಿ ನಾವು ಯಾರಿಗೂ ಆಮಿಷ ಒಡ್ಡಿಲ್ಲ. ಎಲ್ಲಾ ಸದಸ್ಯರ ನಡುವೆ ಪಾರದರ್ಶಕವಾಗಿ ಅಧ್ಯಕ್ಷರ ಆಯ್ಕೆ ನಡೆದಿದ್ದು ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ ಎಂದರು. ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಪರಸ್ಪರ ತಳ್ಳಾಟ ನಡೆಯಿತು. ಈ ವಿಷಯ ತಿಳಿಯುತ್ತಿದ್ದಂತೆ ಮೂಡುಬಿದರೆ ಮತ್ತಿತರ ಪ್ರದೇಶಗಳ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಾಹನಗಳಲ್ಲಿ ಗುಂಪು ಗುಂಪಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುವ ಹಂತ ತಲುಪಿತು. ಆಗ ಒಂದಿಬ್ಬರು ಪೋಲಿಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಬಳಿಕ ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಎರಡೂ ಕಡೆಯವರನ್ನು ಚದುರಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದರು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಪ್ರತ್ಯೇಕ ವಿಜಯೋತ್ಸವ ನಡೆಯಿತು
