ಮೂಡುಬಿದರೆ: ಕೇಂದ್ರ ಅಂಚೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಕನಿಷ್ಟ ವೇತನದಲ್ಲಿ ಗರಿಷ್ಟ ಸೇವೆ ಸಲ್ಲಿಸಿಕೊಂಡು ಬಂದಿರುವ ಸುಮಾರು 3 ಲಕ್ಷ ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಒಕ್ಕೂಟ ಪುತ್ತೂರು ವಿಭಾಗದ ಮೂಡುಬಿದಿರೆ ಸದಸ್ಯರು ಮಾಜಿ ಸಚಿವ ಅಮರನಾಥ ಶೆಟ್ಟಿ ನಿವಾಸಕ್ಕೆ ತೆರಳಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಳಿಕ ಮಾಧ್ಯಮ ಜತೆ ಮಾತನಾಡಿದ ನೌಕರರ ಒಕ್ಕೂಟದ ಮೂಡುಬಿದಿರೆ ವಲಯ ಅಧ್ಯಕ್ಷ ಹೆಚ್.ಬಾಬು ಅವರು ನರೇಂದ್ರ ಮೋದಿಯವರ `ಚಾಯ್ ಪೇ’ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡರ ಜತೆ ಮಾತನಾಡುತ್ತಾ `ನಿಮ್ಮ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸುವುದಾಗಿ’ ಮೋದಿ ಭರವಸೆ ನೀಡಿದ್ದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ದೇವೇಗೌಡರಿಗೆ ಅತ್ಮೀಯರಾಗಿರುವುದರಿಂದ ನಮ್ಮ ಮನವಿಯನ್ನು ಅಮರನಾಥ ಶೆಟ್ಟಿ ಮೂಲಕ ದೇವೇಗೌಡರಿಗೆ ನೀಡಿ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಕೆಯಾಗಿ ನಮ್ಮ ಬೇಡಿಕೆ ಈಡೇರಬಹುದೆಂಬ ಭರವಸೆ ಇದೆ ಎಂದರು. ಒಕ್ಕೂಟದ ಪ್ರಮುಖರಾದ ಸದಾಶಿವ ಪ್ರಭು, ಉಪೇಂದ್ರ ಶ್ಯಾನುಭಾಗ, ಶಿವಶಂಕರ ಭಂಡಾರ್ಕರ್, ಮನೋಹರ ಕುಟಿನ್ಹಾ ಹಾಗೂ ಅಂಚೆ ಪಾಲಕರು ಹಾಜರಿದ್ದರು.
