ಮೂಡುಬಿದರೆ: ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೃದ್ಧೆಯೊಬ್ಬರಿಗೆ ಭಜರಂಗದಳ, ಬಿಜೆಪಿ ಹಾಗೂ ಸ್ಥಳೀಯ ಯುವಶಕ್ತಿಯುವಕ ಮಂಡಲದ ಕಾರ್ಯಕರ್ತರು ಮನೆ ಕಟ್ಟಿಸಿಕೊಡುತ್ತಿದ್ದು, ಕೆಲವೇ ದಿನದಲ್ಲಿ ವೃದ್ಧೆಗೊಂದು ಹೊಸ ಮನೆ ಸಿಗಲಿದೆ.
ಬಿಜೆಪಿ ಮುಖಂಡ ದೇವಿ ಪ್ರಸಾದ್ ಶೆಟ್ಟಿ ಅವರು ಮನೆಗೆ 50 ಸಾವಿರಕ್ಕೂ ಅಧಿಕ ಖರ್ಚ ಮಾಡುತಿದ್ದು ಅವರ ನೇತೃತ್ವದಲ್ಲಿ ಮನೆ ನಿರ್ಮಾಣಗೊಳ್ಳುತ್ತಿದೆ.
bjp1
ಹೊಸಬೆಟ್ಟು ಬೊಗ್ರುಗುಡ್ಡೆ ನಿವಾಸಿ, ಒಂಟಿ ಜೀವನ ಸಾಗಿಸುತ್ತಿರುವ ದಲಿತ ಮಹಿಳೆ ಬಿಟ್ಟು(60 ವರ್ಷ) ಮನೆಯನ್ನು ಪಡೆಯುತ್ತಿರುವ ಫಲಾನುಭವಿ. ವಿಧವೆ ಮಹಿಳೆಯಾಗಿರುವ ಬಿಟ್ಟು ಅವರಿಗೆ ಸರ್ಕಾರದ ಸವಲತ್ತು ಪಡೆಯಲು ಪೂರಕ ದಾಖಲೆಯಿಲ್ಲ. ಆರ್ಥಿಕವಾಗಿಯೂ ಕಷ್ಟಪಡುತಿದ್ದ ವೃದ್ಧೆ ಪಾಳುಬಿದ್ದ ಸ್ಥಿತಿಯಲ್ಲಿದ್ದ ಮನೆಯನ್ನು ಸರಿಪಡಿಸಲು ಸಾಧ್ಯವಾಗದೆ ವಾಸಿಸುತ್ತಿದ್ದರು. ಮನೆಯ ಗೋಡೆಯೂ ಕುಸಿದ ಸ್ಥಿತಿಯಲ್ಲಿತ್ತು. ಗ್ರಾ.ಪಂ ಚುನಾವಣೆ ಪ್ರಚಾರ ಸಂದರ್ಭ ಬಿಜೆಪಿ ಕಾರ್ಯಕರ್ತರು ಈ ಮನೆ ಹಾಗೂ ವೃದ್ಧೆಯ ಪರಿಸ್ಥಿತಿಯನ್ನು ಗಮನಿಸಿ, ಬಳಿಕ ಸಹಾಯ ಮಾಡಲು ಮುಂದಾದರು.
ದೇವಿಪ್ರಸಾದ್ ಮನೆ ಕಟ್ಟಲು ಖರ್ಚು ಮಾಡಲು ಮುಂದಾಗಿದ್ದು, ಶ್ರಮದಾನದ ಮೂಲಕ ಮನೆಯನ್ನು ಬೊಗ್ರುಗುಡ್ಡೆ ಯುವಶಕ್ತಿ ಯುವಕ ಮಂಡಲದ ಸದಸ್ಯರು ನಿರ್ಮಿಸಿಕೊಡುತ್ತಿದ್ದಾರೆ. ಗ್ರಾ.ಪಂ ಸದಸ್ಯ, ಪತ್ರಿಕಾ ವಿತರಕ ಸತೀಶ್ ಶೆಟ್ಟಿ, ಬಿಜೆಪಿ ಮುಖಂಡ ಸಂತೋಷ್ ಕುಮಾರ್, ಯುವಶಕ್ತಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಸಾಥ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ದೇವಿ ಪ್ರಸಾದ್ ಶೆಟ್ಟಿ, ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಹಿಳೆ ಮನೆಯನ್ನು ಗಮನಿಸಿದ್ದು, ಅದನ್ನು ಪುನರ್ ನಿರ್ಮಾಣ ಮಾಡುತ್ತಿದ್ದೇವೆ. ಈ ಯೋಜನೆಯು ಇಲ್ಲಿಗೆ ನಿಲ್ಲದೆ, ಇಂತಹ ಕುಟುಂಬಗಳನ್ನು ಗುರುತಿಸಿ ಮುಂಬರುವ ದಿನದಲ್ಲೂ ಸಹಾಯ ಮಾಡುತ್ತೇವೆ ಎಂದಿದ್ದಾರೆ.

ಬೆಳುವಾಯಿಯಲ್ಲಿ ಚರಂಡಿ:
ಹೊಸಬೆಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ ಬಿಜೆಪಿ, ಭಜರಂಗದಳದವರು ಮನೆಕಟ್ಟಿಕೊಟ್ಟರೆ, ಬೆಳುವಾಯಿಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೆಳುವಾಯಿ ಪೇಟೆ ಚರಂಡಿ ದುರಸ್ಥಿಗೊಳಿಸುವ ಮೂಲಕ ಬಿಜೆಪಿ ವಿಜಯೋತ್ಸವ ಆಚರಿಸಿದ್ದಾರೆ.
ಬೆಳುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ನೇತೃತ್ವದಲ್ಲಿ ನಡೆದ ಶ್ರಮದಾನಕ್ಕೆ ಉದ್ಯಮಿ ಹರ್ಷವರ್ಮ ಹೆಗ್ಡೆ ಹಾಗೂ ಕರಿಯನಂಗಡಿಯ ಅಬೂಬಕ್ಕರ್ ಹೂಳು ತೆಗಯಲು ಜೆಸಿಬಿ ಯಂತ್ರಗಳನ್ನು ನೀಡಿದರೆ. ಪಂಚಾಯತ್ ಸದಸ್ಯ ಸೋಮನಾಥ ಕೋಟ್ಯಾನ್ ಮಣ್ಣು ಸಾಗಿಸಲು ಟಿಪ್ಪರ್ ಒದಗಿಸಿದ್ದರು. ಬೆಳುವಾಯಿಯ ಸಮರ್ಥ ಕಾಂಪ್ಲೆಕ್ಸ್ನಿಂದ ನವರತ್ನ ಕಾಂಪ್ಲೆಕ್ಸ್ವರೆಗೆ ಚರಂಡಿಯ ಚಪ್ಪಡಿ ಕಲ್ಲುಗಳನ್ನು ಎತ್ತಿ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಮಿ ಶ್ರೀನಾಥ್ ಸುವರ್ಣ, ಪಂಚಾಯಿತಿ ಸದಸ್ಯರಾದ ಭಾಸ್ಕರ್ ಆಚಾರ್ಯ, ಶಿವರಾಮ ಹೆಗ್ಡೆ, ರವೀಂದ್ರ ಪೂಜಾರಿ, ಮೋಹನ ನಾಯ್ಕ್ ಹಾಗೂ ಅಚ್ಚುತ ಶೆಟ್ಟಿ, ಸತೀಶ್ ಶೆಟ್ಟಿ ಮತ್ತಿತರರು ಶ್ರಮದಾನದಲ್ಲಿ ತೊಡಗಿಸಿಕೊಂಡರು.

By Suddi9

Leave a Reply

Your email address will not be published. Required fields are marked *