ಬಂಟ್ವಾಳ:ಬಂಟ್ವಾಳ ಪುರಸಭೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ‘ನಿರ್ಮಲ ಬಂಟ್ವಾಳ’ ಯೋಜನೆಯಡಿ ರೂ 2ಕೋಟಿ ಮೊತ್ತದ ಅನುದಾನ ಮಂಜೂರಾಗಿದ್ದರೂ ಈ ಕಾಮಗಾರಿ ಮಾತ್ರ ತ್ವರಿತವಾಗಿ ಅನುಷ್ಠಾನಗೊಳಿಸುವಲ್ಲಿ ಇಲ್ಲಿನ ಅಧಿಕಾರಿಗಳು ತೀರಾ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತದ ಬಳಿ ಸುಂದರ ಪಾರ್ಕ್ ನಿರ್ಮಿಸುವ ಉದ್ದೇಶವಿದ್ದು, ಅಲ್ಲಿಯೂ ತ್ಯಾಜ್ಯ ರಾಶಿ ಬಿದ್ದಿದೆ. ಕಳೆದ 10 ವರ್ಷಗಳಿಂದ ಗುತ್ತಿಗೆ ವಹಿಸಿಕೊಂಡಿರುವ ಶರತ್ ಶೆಟ್ಟಿ ಎಂಬವರು ಇಲ್ಲಿನ ತ್ಯಾಜ್ಯ ವಿಲೇವಾರಿ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂಬ ಲಿಖಿತ ಉತ್ತರ ನೀಡಿದ್ದರೂ ಮತ್ತೆ ‘ಇ -ಟೆಂಡರ್ ಮೂಲಕ ಅಬ್ದುಲ್ ಸಲಾಂ ಎಂಬವರ ಜೊತೆಗೆ ಶರತ್ ಶೆಟ್ಟಿಯ ಟೆಂಡರ್ನ್ನೂ ಸ್ವೀಕರಿಸಿದ ಔಚಿತ್ಯವಾದರೂ ಏನು…? ಇದರ ಹಿಂದೆ ಅದ್ಯಾವುದೋ ಷಡ್ಯಂತ್ರವಿದೆ. ಒಟ್ಟಿನಲ್ಲಿ ಬಂಟ್ವಾಳ ಪುರಸಭೆ ಮಾನ ಹರಾಜು ಹಾಕಿ, ನಗರಸಭೆಯಾಗಿ ಮೇಲ್ದರ್ಜೆಗೇರಿಸಲೂ ಬಿಡದಿರುವ ಅಧಿಕಾರಿಗಳು ಇಲ್ಲಿ ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಬೇರೆ ಕಡೆಗೆ ತೆರಳಬಹುದು. ಇಲ್ಲಿ ಶ್ರಮವಹಿಸಿ ದುಡಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕರೆಸಿಕೊಳ್ಳುತ್ತೇನೆ.
ನಿಜವಾಗಿಯೂ ಕೆಲಸ ಮಾಡಲು ಆಸಕ್ತಿ ಇದ್ದವರು ಮಾತ್ರ ಇಲ್ಲಿದ್ದರೆ ಸಾಕು. ಎಲ್ಲಾ ಪುರಸಭಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನಾದರೂ ಶ್ರಮವಹಿಸಿ ಕೆಲಸ ಮಾಡುವ ಮೂಲಕ ‘ನಿರ್ಮಲ ಬಂಟ್ವಾಳ’ ಯೋಜನೆ ತ್ವರಿತಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗರಂ ಆಗಿ ಒಂದೇ ಸಮನೆ ಇಲ್ಲಿನ ಅಧಿಕಾರಿಗಳನ್ನು ಶನಿವಾರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಪುರಸಭಾಧ್ಯಕ್ಷೆ ವಸಂತಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯಸಭೆಯಲ್ಲಿ ಅವರು ಆಡಳಿತಪಕ್ಷ (ಕಾಂಗ್ರೆಸ್) ಮತ್ತು ವಿರೋಧ ಪಕ್ಷ (ಬಿಜೆಪಿ) ಸದಸ್ಯರಿಂದ ‘ಅಸಮರ್ಪಕ ತ್ಯಾಜ್ಯ ವಿಲೇವಾರಿ’ ಬಗ್ಗೆ ದೂರುಗಳನ್ನು ಸಮಾಧಾನವಾಗಿ ಆಲಿಸಿದ ಬಳಿಕ ಏಕಾಯೇಕಿ ಗರಂ ಆಗಿ ಅಧಿಕಾರಿಗಳನ್ನು ಹೀಗೆ ಎಚ್ಚರಿಸಿದರು.

ಇಲ್ಲಿನ ಬಡ್ಡಕಟ್ಟೆ ವಾಣಿಜ್ಯ ಸಂಕೀರ್ಣಕ್ಕೆ ವಿದ್ಯುತ್ ಸಂಪರ್ಕ ನೀಡದಿರುವ ಬಗ್ಗೆ ಮೆಸ್ಕಾಂ ಕಾಯಾನಿರ್ವಾಹಕ ಎಂಜಿನಿಯರ್ ಕೆ.ಉಮೇಶ್ಚಂದ್ರ ಅವರನ್ನು ಕರೆಸಿ ಕಾರಣ ಕೇಳಿ ಕೂಡಲೇ ಕಾನೂನು ರೀತಿಯಲ್ಲಿ ಸಂಪರ್ಕ ನೀಡಲು ಸೂಚಿಸಿದರು.
ಬಂಟ್ವಾಳ ಪುರಸಭೆಯನ್ನು ಸ್ವಚ್ಚವಾಗಿಡಲು ಈಗಾಗಲೇ ರೂ 2ಕೋಟಿ ಅನುದಾನ ಒದಗಿಸಿದ್ದು, ಜೆಸಿಬಿ, ಟ್ರ್ಯಾಕ್ಟರ್ ಮತ್ತಿತರ ವಾಹನವೂ ಬಂದಿದೆ. ಇವೆಲ್ಲವನ್ನೂ ನಿರ್ವಹಣೆ ಮತ್ತು ದುರಸ್ತಿಯಲ್ಲಿ ಇಟ್ಟುಕೊಳ್ಳುವ ಜವಾಬ್ದಾರಿ ಎಲ್ಲಾ ಸದಸ್ಯರಿಗೂ ಇದೆ. ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಈಗಾಗಲೇ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ರೂ 1ಕೋಟಿಗೂ ಮಿಕ್ಕಿ ಮೊತ್ತದ ಅನುದಾನ ವ್ಯಯಿಸಲಾಗಿದೆ. ಕಸ ವಿಲೇವಾರಿಗೆ ಹಣಕಾಸು ಸಮಸ್ಯೆಯಾದರೆ ಹೇಳಿ, ತಾನು ಸ್ವತಃ ಆರ್ಥಿಕ ನೆರವು ನೀಡುವುದಾಗಿ ಖಾರವಾಗಿ ತಿಳಿಸಿದರು. ಮುಂದಿನ ಒಂದು ತಿಂಗಳೊಳಗೆ ಹಂತ ಹಂತವಾಗಿ ಅಲ್ಲಿನ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ಎಚ್ಚರಿಸಿದರು.
ಸದಸ್ಯರಾದ ಎ.ಗೋವಿಂದ ಪ್ರಭು, ಬಿ.ದೇವದಾಸ ಶೆಟ್ಟಿ, ಮಹಮ್ಮದ್ ನಂದರಬೆಟ್ಟು, ಸದಾಶಿವ ಬಂಗೇರ, ಪಿ.ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಮಹಮ್ಮದ್ ಷರೀಫ್, ಜಗದೀಶ ಕುಂದರ್, ಗಂಗಾಧರ್ ಪೂಜಾರಿ, ಪ್ರವೀಣ್ ಜಕ್ರಿಬೆಟ್ಟು, ಚಂಚಲಾಕ್ಷಿ, ಸುಗುಣ ಕಿಣಿ, ಮಹಮ್ಮದ್ ಇಕ್ಬಾಲ್, ಮುನೀಶ್ ಆಲಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ಯಾಸ್ಮಿನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಪ್ರಭಾದೇವಿ, ಆರೋಗ್ಯಾಧಿಕಾರಿ ರಾಜಶೇಖರ್ ಮತ್ತಿತರರು ಇದ್ದರು.
