ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟೂರು ಗ್ರಾಮದ ಅಂಗನವಾಡಿ ಕೇಂದ್ರ ಬಳಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಸ್ಥಳೀಯ ನಿವಾಸಿ ಓಬಯ್ಯ ಎಂಬವರ ಪತ್ನಿ ಸುಂದರಿ ಇವರ ಮನೆ ಮೇಲೆ ಬೃಹತ್ ಗಾತ್ರದ ಗೋಳಿ ಮರವೊಂದು ಬುಡ ಸಹಿತ ಉರುಳಿ ಬಿದ್ದು ಅಪಾರ ಹಾನಿ ಸಂಭವಿಸಿದೆ.
20btl-kusitha (1)
ಮನೆ ಹಿಂಬದಿ ಬೃಹತ್ ಗಾತ್ರದ ಗೋಳಿ ಮರವು ಬುಡ ಸಹಿತ ಕಿತ್ತು ಬಂದಿದ್ದು, ಶುಕ್ರವಾರ ತಡರಾತ್ರಿ ಮನೆ ಮೇಲೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಇದರಿಂದಾಗಿ ಮನೆ ಮಾಡು ಸಹಿತ ಗೋಡೆ ಹಾಗೂ ಮನೆಯೊಳಗಿದ್ದ ಬಹುತೇಕ ಸಾಮಾಗ್ರಿಗಳು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಇದೇ ವೇಳೆ ಸ್ಥಳೀಯ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು ನೇತೃತ್ವದಲ್ಲಿ ಸ್ಥಳೀಯರು ಧಾವಿಸಿ ಮನೆ ಮೇಲೆ ಬಿದ್ದ ಮರ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಈ ಘಟನೆಯಿಂದ ಮನೆಯಲ್ಲಿದ್ದ ಯಾರಿಗೂ ಗಾಯವಾಗಿಲ್ಲ ಎಂದಿದ್ದಾರೆ.
ನೆರವು:
ಈ ಘಟನೆ ಬಗ್ಗೆ ಮಾಹಿತಿ ತಿಳಿದು ಶನಿವಾರ ಮನೆಗೆ ಭೇಟಿ ನೀಡಿದ್ದ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಇವರು ರೂ 25ಸಾವಿರ ಮೊತ್ತದ ಪರಿಹಾರಧನ ಘೋಷಿಸಿದರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ, ಸರ್ಕಾರದಿಂದ ಗರಿಷ್ಟ ಮೊತ್ತದ ಪರಿಹಾರಧನ ದೊರಕಿಸಿ ಕೊಡುವುದಾಗಿ ತಿಳಿಸಿದರು. ಮಾಜಿ ಶಾಸಕ ಕೆ.ಪದ್ಮನಾಭ ಕೋಟ್ಟಾರಿ, ತಾ.ಪಂ.ಅಧ್ಯಕ್ಷ ಯಶವಂತ ಡಿ., ಸದಸ್ಯೆ ಐಡಾ ಸುರೇಶ್, ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಕುಲಾಲ್, ಕಾಂಗ್ರೆಸ್ ಮುಖಂಡ ಕೆ.ಸಂಜೀವ ಪೂಜಾರಿ ಮತ್ತಿತರರು ಇದ್ದರು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ಎ.ಪಿ. ಭಟ್ ಸ್ಥಳ ಪರಿಶೀಲನೆ ನಡೆಸಿದ್ದು, ಪರಿಶಿಷ್ಟ ಜಾತಿ ನೆಲೆಯಲ್ಲಿ ರೂ ಒಂದು ಲಕ್ಷ ಮೊತ್ತದ ಪರಿಹಾರಧನ ನೀಡಲು ಜಿಲ್ಲಾಡಳಿತಕ್ಕೆ ವಿನಂತಿಸಲಾಗುವುದು ಎಂದಿದ್ದಾರೆ.

By Suddi9

Leave a Reply

Your email address will not be published. Required fields are marked *