ಬಂಟ್ವಾಳ: ಜನರು ಜ್ವರ ಬಂದಾಕ್ಷಣ ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರಿಂದ ಉಚಿತ ತಪಾಸಣೆಗೆ ಒಳಪಡಿಸಿ ಉಚಿತ ಔಷಧಿ ಪಡೆದುಕೊಳ್ಳಿ. ಆರೋಗ್ಯಾಧಿಕಾರಿಗಳು ಸಹಿತ ಸಿಬ್ಬಂದಿಗಳು ಭಾನುವಾರವೂ ಆಸ್ಪತ್ರೆಯಲ್ಲಿದ್ದು, ಕೆಲಸ ಮಾಡುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಸೂಚನೆ ನೀಡಿದ್ದಾರೆ.
3 (3)
ಬಂಟ್ವಾಳ ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಖುದ್ಧು ಬಂಟ್ವಾಳಕ್ಕೆ ಭೇಟಿ ನೀಡಿ ತಾಲೂಕಿನ ಆರೋಗ್ಯ ಅಧಿಕಾರಿಗಳ, ಪಿಡಿಓ ಹಾಗೂ ಆಶಾ ಕಾರ್ಯಕರ್ತರು ಸಭೆ ನಡೆಸಿ ವಿವರ ಪಡೆದುಕೊಂಡರು. ಮಳೆಗಾಲದಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ ಸಚಿವರು, ಗ್ರಾಮೀಣಾಭಿವೃದ್ಧಿ ಇಲಾಖೆ, ಆರೋಗ್ಯ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಜಂಟಿಯಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಇದಕ್ಕೆ ಜನರು ಕೂಡ ಸಹಕರಿಸಬೇಕೆಂದು ಹೇಳಿದರು. ಬಡ ಕೂಲಿ , ಶಾಲಾ ಮಕ್ಕಳು ವಾರದ ದಿನಗಳಲ್ಲಿ ತಮ್ಮ ಕರ್ತವ್ಯಕ್ಕೆ ತೆರಳುತ್ತಿರುವುದರಿಂದ ಈ ಸಂದರ್ಭದಲ್ಲಿ ಅವರಿಗೆ ಆಸ್ಪತ್ರೆಗೆ ಬರಲು ಅನಾನುಕೂಲವಾಗುತ್ತಿದೆ. ಈ ದಿಸೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಭಾನುವಾರವೂ ಕಾರ್ಯ ನಿರ್ವಹಿಸಬೇಕು. ಇದರಿಂದ ಬಡ ಜನರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

62 ಡೆಂಗ್ಯೂ ಪತ್ತೆ: ಮಲೇರಿಯಾ ಇಲ್ಲ!
ತಾಲೂಕಿನಲ್ಲಿ ಈ ವರೆಗೆ 62 ಡೆಂಗ್ಯೂ ರೋಗಿಗಳನ್ನು ಪತ್ತೆ ಹಚ್ಚಲಾಗಿದ್ದು, 53 ಮಂದಿ ಶಂಕಿತ ಡೆಂಗ್ಯೂ ರೋಗಿಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿ ಮನೆಗೆ ತೆರಳಿದ್ದಾರೆ. 12 ಮಂದಿಯಲ್ಲಿ ಡೆಂಗ್ಯೂ ರೋಗ ಕಂಡುಬಂದಿದ್ದು, ಇದರಲ್ಲಿ 8ಮಂದಿ ಬಿ.ಸಿ.ರೋಡ್, 4ಮಂದಿ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಸಚಿವರು ಈ ತಿಂಗಳಲ್ಲಿ ತಾಲೂಕಿನಲ್ಲಿ ಯಾರಲ್ಲೂ ಮಲೇರಿಯಾ ರೋಗ ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಚೇರಿಯಲ್ಲಿ ಕೂರದಿರಿ!

ಸಮಸ್ಯೆಯನ್ನು ತಳಮಟ್ಟದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಕಚೇರಿಯಲ್ಲಿ ಕೂರದೇ ದಿನಕ್ಕೊಮ್ಮೆ ತಾಲೂಕಿನ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ವಿವರವನ್ನು ಪಡೆದುಕೊಳ್ಳಬೇಕೆಂದು ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಅವರಿಗೆ ಈ ಸಂದರ್ಭ ಸೂಚನೆ ನೀಡಿದರು. ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೈರ್ಮಲ್ಯ ಸಮಿತಿಯ ಸಭೆ ಕರೆದು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪಿಡಿಓಗಳಿಗೆ ಸೂಚನೆ ನೀಡಿದ ಸಚಿವರು, ಪ್ರತಿ ಹೊಟೇಲ್ನಲ್ಲಿ ಕಡ್ಡಾಯವಾಗಿ ಬಿಸಿನೀರನ್ನು ಗ್ರಾಹಕರಿಗೆ ನೀಡಲು ಸೂಚಿಸಿದರು. ಈ ಬಗ್ಗೆ ನಿಗಾ ವಹಿಸುವಂತೆ ಪಿಡಿಓಗಳಿಗೆ ತಿಳಿಸಿದರು. ತಾಪಂ ಅದ್ಯಕ್ಷ ಯಶವಂತ ಡಿ, ಉಪಾಧ್ಯಕ್ಷೆ ವಿಲಾಸಿನಿ, ದಕ ಜಿಪಂ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುನಾಥ್, ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಗಿರೀಶ್ ಕೆ.ಪಿ ಈ ಸಂದರ್ಭ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *