ಬಂಟ್ವಾಳ : ಸೋಮವಾರ ರಾತ್ರಿ ಸುರಿದ ಮಳೆಗೆ ಮನೆಯೊಂದರ ಹಂಚಿನ ಛಾವಣಿ ಕುಸಿದು ಬಿದ್ದಿದ್ದು ಮನೆಮಂದಿ ಅತಂತ್ರರಾಗಿದ್ದಾರೆ.ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ರಾಮಗುರಿ ಎಂಬಲ್ಲಿನ ಬೂದ ಎಂಬವರ ಮನೆಯ ಛಾವಣಿ ಕುಸಿದಿದೆ. ಮನೆಯಲ್ಲಿ ಬೂದ ಮತ್ತು ಅವರ ಪತ್ನಿ ಮಾತ್ರ ವಾಸವಾಗಿದ್ದು ಛಾವಣಿ ಕುಸಿದ ವೇಳೆ ಪಕ್ಕದ ಕೋಣೆಯಲ್ಲಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೂದ ಅವರಿಗೆ ಮಕ್ಕಳಿಲ್ಲ. ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಬರುವ ಸಂಪಾದನೆಯಲ್ಲಿ ಮನೆ ದುರಸ್ತಿ ಮಾಡಲಾಗದೆ ಮನೆಯ ಛಾವಣಿ ಗೋಡೆ ಸಹಿತ ಕುಸಿದು ಬೀಳುವುದರಲ್ಲಿದೆ. ಹೊಸ ಮನೆ ಕಟ್ಟಲು ಇವರಿಗೆ ಸರಕಾರದ ಯಾವುದೇ ಅನುದಾನ ಲಭಿಸಿಲ್ಲ . ಈಗಿರುವ ಮನೆ 15 ವರ್ಷಗಳ ಹಿಂದೆ ಸರಕಾರದ ಅನುದಾನದಲ್ಲಿ ಕಟ್ಟಿದ ಮನೆಯಾಗಿದ್ದು ಬಳಿಕ ಯಾವುದೇ ದುರಸ್ತಿ ಕಂಡಿಲ್ಲ ಇದೀಗ ಇದ್ದ ಮನೆಯೂ ಕುಸಿಯುವುದರಲ್ಲಿದ್ದು ಬೂದ ದಂಪತಿಗಳು ಕಂಗಾಲಾಗಿದ್ದಾರೆ. ಅವರಿಗೆ ನೆಲೆ ನಿಲ್ಲಲು ಸೂರಿನ ಜೊತೆ ಜೀವನ ನಿರ್ವಹಣೆಗೂ ದಾರಿಯಾಗಬೇಕಾಗಿದೆ.

