ತುಳುವಿನಲ್ಲಿ ಸಿನಿಮಾವೊಂದು ಬಿಡುಗಡೆಯಾಗುವಾಗ ಅದು ತುಳು ಸಿನಿಮಾ ರಂಗದಲ್ಲಿಯೇ ಒಂದು ಚಾರಿತ್ರಿಕ ದಾಖಲೆ ಮಾಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಇದು ಹೊಸತನದಿಂದ ಕೂಡಿದ ಸಿನಿಮಾ, ನೀವೆಲ್ಲರೂ ನೋಡಲೇಬೇಕಾದ ಅತ್ಯುತ್ತಮ ಗುಣಮಟ್ಟದ ಸಿನಿಮಾ ಎಂದು ಆರಂಭದಲ್ಲಿ ಪ್ರಚಾರ ಮಾಡಲಾಗುತ್ತಿತ್ತು. ಸಿನಿಮಾವೊಂದು ಬಿಡುಗಡೆಯಾಗುವ ಹೊತ್ತಿನಲ್ಲಿ ಇಂಥ ಪ್ರಚಾರ ಸಹಜವೇ. ಹಾಗಿದ್ದರೂ ಪ್ರಚಾರವನ್ನು ಬದಿಗಿರಿಸಿ ಸಿನಿಮಾ ಪ್ರಿಯರು ಸಾಮಾನ್ಯ ನಿರೀಕ್ಷೆಯಿಂದ ಈ ಸಿನಿಮಾವನ್ನು ವೀಕ್ಷಿಸಿದ ಬಳಿಕ ಹೇಳಿದ್ದೊಂದೇ ಮಾತು – ಅದ್ಭುತ ಸಿನಿಮಾ. ಇದೊಂದು ಹೊಸ ದಾಖಲೆ ಬರೆಯುವುದು ಖಚಿತ ಎಂದು. ಆ ಮಾತು ಈಗ ನಿಜವಾಗುತ್ತಿದೆ. ಜಯಕಿರಣ ಫಿಲ್ಮ್ಸ್ ಬ್ಯಾನರ್ನಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ಅವರ ನಿರ್ಮಾಣ ಮತ್ತು ಯುವ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ಹೊಸತನದ ನಿರ್ದೇಶನದಲ್ಲಿ ಮೂಡಿಬಂದ ಚಾಲಿಪೋಲಿಲು ತುಳುಸಿನಿಮಾ ಈಗ ಜೂನ್ 12ಕ್ಕೆ 225 ದಿನಗಳ ಯಶಸ್ವಿ ಪ್ರದರ್ಶನ ಕಾಣಲಿದೆ. ಈ ಹಿಂದೆ ತುಳುವಿನಲ್ಲಿ ಮಾಡಿರದ ಒಂದು ದಾಖಲೆ ಇದು. ಮುಂದೆ ಇಂಥ ಸಾಧನೆಯನ್ನು ನಿರೀಕ್ಷಿಸುವುದೂ ಕಷ್ಟ. ಚಾಲಿಪೋಲಿಲು ಆರಂಭದಿಂದಲೂ ಗಮನ ಸೆಳೆಯುತ್ತಾ, ದಾಖಲೆ ಬರೆಯುತ್ತಾ ಬಂದ ಸಿನಿಮಾ. ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಈ ಸಿನಿಮಾದ ಗುಣಮಟ್ಟ ಮಲಯಾಳಿ ಸಿನಿಮಾದಂತಿದೆ. 5 ಚಿತ್ರಮಂದಿರಗಳಲ್ಲಿ 75 ದಿನಗಳ ಪ್ರದರ್ಶನ ಕಂಡಿರುವ ಇದು ಮೂರು ಥಿಯೇಟರ್ಗಳಲ್ಲಿ ಶತಕದ ದಾಖಲೆ ಬರೆದಿದೆ. ಈ ಮೂರರಲ್ಲಿ ಎರಡು ಮಲ್ಟಿಪ್ಲೆಕ್ಸ್ ಎಂಬುದು ಗಮನೀಯ ಸಂಗತಿ. ಈಗ ಪಾಂಡೇಶ್ವರದ ಪಿವಿಆರ್ನಲ್ಲಿ ದ್ವಿಶತಕ ಬಾರಿಸಿದೆ.

60 ಲಕ್ಷ ರೂ. ಬಜೆಟ್ನ ಈ ಸಿನಿಮಾವು 2 ಕೋ.ರೂ. ಮಿಕ್ಕಿದ ಸಂಗ್ರಹ ಮಾಡಿದ್ದು, ಸಿನಿಮಾಕ್ಕಾಗಿ ಖರ್ಚು ಮಾಡಿರುವ ಹಣ ಮೂರು ವಾರಗಳಲ್ಲಿ ವಾಪಸಾಗಿದೆ. ಕೇರಳದ ಪ್ರಮುಖ ಕೆಮರಾಮ್ಯಾನ್ ಆಗಿರುವ ಉತ್ಪಲ್ ನಾಯನಾರ್ ಅವರ ಕೆಮರಾದಿಂದ ಅದ್ಭುತವಾಗಿ ಸೆರೆ ಹಿಡಿಯಲ್ಪಟ್ಟ ಈ ಸಿನಿಮಾದ ಯಶಸ್ಸಿನಲ್ಲಿ ಅವರ ಕೊಡುಗೆ ವಿಶೇಷವಾದುದು. ವಿ.ಮನೋಹರ್ ಸಂಗೀತ, ಮಣಿಕಾಂತ್ ಕದ್ರಿಯವರ ಹಿನ್ನೆಲೆ ಸಂಗೀತ ಕೂಲ್ ಜಯಂತ್ ಅವರ ನೃತ್ಯ ಎಲ್ಲವೂ ಇಲ್ಲಿ ವರ್ಕ್ ಟ್ ಆಗಿದೆ. ಜತೆಗೆ ತುಳುರಂಗಭೂಮಿಯ ದಿಗ್ಗಜರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವದ್ ಬೋಳಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಕೂಡಾ ಸಿನಿಮಾ ಈ ಮಟ್ಟದ ಯಶಸ್ಸಿಗೆ ಕಾರಣವಾಗಿದೆ. ತುಳುರಂಗಭೂಮಿಯ ಪ್ರಮುಖ ಕಲಾವಿದರೆಲ್ಲರಿಗೂ ಹೊಸ ಅನುಭವ, ತೃಪ್ತಿ, ಖುಷಿ ನೀಡಿದ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಲು ಅದರಲ್ಲಿದ್ದ ಹಲವಾರು ಉತ್ತಮ ಅಂಶಗಳು ಮತ್ತು ತುಳುನಾಡಿಗೆ ಹೇಳಿಮಾಡಿಸಿದಂಥ ಅವರ ಕಥಾಶೈಲಿ ಕಾರಣ. ಕೋಮುಸಾಮರಸ್ಯ, ಉತ್ಕೃಷ್ಟ ದರ್ಜೆಯ ಹಾಸ್ಯ, ಉತ್ತಮ ಕಥೆ… ಮುಂತಾದವುಗಳೆಲ್ಲವೂ ಸಿನಿಮಾಪ್ರಿಯರಲ್ಲದವರನ್ನೂ ಆಕರ್ಷಿಸಿದ ಕಾರಣವೇ ಇದು ಇಂಥದ್ದೊಂದು ಹೊಸ ದಾಖಲೆ ಮಾಡಲು ಕಾರಣವಾಯಿತು. ಸಿನಿಮಾ ಅಂದರೆ ಹೀಗಿರಬೇಕು ಎಂದು ಹೇಳಿದ ಪ್ರೇಕ್ಷಕರು, ನಾಟಕದವರಿಂದಲೇ ನಾಟಕವಲ್ಲದ ಶ್ರೇಷ್ಠಮಟ್ಟದ ಸಿನಿಮಾ ನಿರ್ಮಾಣ ಮಾಡಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಲು ಚಾಲಿಪೋಲಿಲು ವೇದಿಕೆ ಒದಗಿಸಿತು. ಅತಿಯಾದ ಸಿನಿಮಾ ಪ್ರಿಯರಂತು ಇದನ್ನು ಎಷ್ಟು ಬಾರಿ ನೋಡಿದ್ದಾರೆ ಎಂಬುದು ಅವರಿಗೇ ಗೊತ್ತಿರಲಿಕ್ಕಿಲ್ಲ. ಟಿಕೆಟ್ ಸಿಗದೆ ವಾಪಸ್ ಹೋದುದರಲ್ಲೂ ಚಾಲಿಪೋಲಿಲು ದಾಖಲೆ ಮಾಡಿದೆ ಎಂದು ಹೇಳಿದರೆ ತಪ್ಪಾಗದು. ಉತ್ತಮ ಸಿನಿಮಾ ಮಾಡಿದರೆ ತುಳುವಿನಲ್ಲೂ ಯಶಸ್ಸು, ಜನಪ್ರಿಯತೆ, ಲಾಭ ಗಳಿಸಬಹುದು ಎಂಬುದನ್ನೂ ಚಾಲಿಪೋಲಿಲು ಸಾಬೀತು ಮಾಡಿದೆ. ಇದರ ಯಶಸ್ಸಿನ ಬಳಿಕ ಸಾಲುಸಾಲು ತುಳು ಸಿನಿಮಾ ನೋಂದಣಿಯಾದವು. ಅವೆಲ್ಲವೂ ಮುಂದಿನ ದಿನಗಳಲ್ಲಿ ತೆರೆಗೆ ಬರಲಿವೆ.
8 ಪ್ರಶಸ್ತಿ ಬಾಚಿಕೊಂಡಿತ್ತು
ಎಲ್ಲರ ನಿರೀಕ್ಷಗಳಿಗೂ ಮೀರಿದ ಸಾಧನೆ ಮಾಡುತ್ತಿರುವ ಚಾಲಿಪೋಲಿಲು ಸಿನಿಮಾಕ್ಕೆ ತುಳು ಸಿನಿಮಾ ಪ್ರಶಸ್ತಿ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ 8 ಪ್ರಶಸ್ತಿ ಸಂದಿವೆ. ಹೊಸಬರು ಮಾಡಿದ ಈ ಸಿನಿಮಾವು ಹೊಸತನದಿಂದಲೇ ಕೂಡಿರುವುದು ಮತ್ತು ಹೊಸಬರಲ್ಲೂ ವಿಶೇಷ ಸಾಮಥ್ರ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಪ್ರಸ್ತುತ ಈ ಸಿನಿಮಾವನ್ನು ರಾಜ್ಯ ಮಟ್ಟದ ಸಿನಿಮಾ ಸ್ಪರ್ಧೆಗೂ ಕಳುಹಿಸಲಾಗಿದೆ.
ಹೊರರಾಜ್ಯದ ನಗರಗಳಲ್ಲೂ ಯಶಸ್ಸು
ಚಾಲಿಪೋಲಿಲು ಕೇವಲ ಕರಾವಳಿಯಲ್ಲಿ ಮಾತ್ರ ಕ್ರಾಂತಿ ಎಬ್ಬಿಸಿದ್ದಲ್ಲ, ಕರ್ನಾಟಕದ ಬೆಂಗಳೂರು ಸೇರಿದಂತೆ ಬೇರೆ ಬೇರೆ ಪ್ರಮುಖ ನಗರಗಳಲ್ಲಿ, ನೆರೆಯ ಕೇರಳದ ಕಾಸರಗೋಡಿನಲ್ಲಿ, ಮಹಾರಾಷ್ಟ್ರದ ಮುಂಬಯಿ, ಪೂನಾದಂಥ ಮಹಾನಗರಗಳಲ್ಲೂ ಪ್ರದರ್ಶನ ಕಂಡಿದೆ. ಅಲ್ಲೆಲ್ಲ ಪ್ರದರ್ಶನಗೊಂಡ ಚಿತ್ರಮಂದಿರಗಳು ತುಂಬಿ ತುಳುಕುತ್ತಿದ್ದವು.
ವಿದೇಶಕ್ಕೆ
ಈಗ ಇದು ಭಾರತದ ಗಡಿ ದಾಟಿ ವಿದೇಶಕ್ಕೂ ಹಾರಿದೆ. ಮೇ 29ರಂದು ಬೆಹೆರಿನ್ನಲ್ಲಿ ಪ್ರದರ್ಶನ ಕಂಡಿದೆ. ಆ ಮೂಲಕ ಅಲ್ಲಿನ ಕಲಾಪ್ರೇಮಿಗಳಿಗೂ ಚಾಲಿಪೋಲಿಲು ಮಜಾ ಕೊಟ್ಟಿದೆ. ತುಳುನಾಡಿನ ಸಿನಮಾವೊಂದರ ಸಾಧನೆಗೆ ಅವರೂ ತಲೆದೂಗಿದ್ದಾರೆ. ದುಬಾಯಿ-ಅಬುದಾಬಿಯಲ್ಲಿ ಪ್ರದರ್ಶನ ಕಾಣಲಿದೆ.
ದಬಕ್ದಬ ಐಸಾ
ತುಳು ಚಿತ್ರರಂಗದಲ್ಲಿ ಮಹಾನ್ ಸಾಧನೆ ಮಾಡಿರುವ ಜಯಕಿರಣ ಫಿಲ್ಮ್ಸ್ನಿಂದ ಮುಂದಿನ ಸೆಪ್ಟಂಬರ್ನಲ್ಲಿ ಹೊಸ ಸಿನಿಮಾಕ್ಕೆ ಮುಹೂರ್ತ ನಡೆಯಲಿದೆ. ದಬಕ್ದಬಾ ಐಸಾ ಹೆಸರಿನ ಈ ಸಿನಿಮಾದಲ್ಲಿ ಕೂಡಾ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಅಭಿನಯಿಸಲಿದ್ದಾರೆ. 2016ರ ಆರಂಭದಲ್ಲಿಯೇ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.
1. 44 ವರ್ಷಗಳ ತುಳು ಚಿತ್ರರಂಗದ ಇತಿಹಾಸದಲ್ಲಿ ಚಾಲಿಪೋಲಿಲು 52ನೇ ತುಳು ಸಿನಿಮಾ ಆಗಿ ತೆರೆಕಂಡಿದೆ
2. 11 ಥಿಯೇಟರ್ನಲ್ಲಿ ಬಿಡುಗಡೆಗೊಂಡ ಚಾಲಿಪೋಲಿಲು ಈಗ ಪಾಂಡೇಶ್ವರದ ಪಿವಿಆರ್ನಲ್ಲಿ ಸತತ 225ನೇ ದಿನದಲ್ಲಿ ಪ್ರದರ್ಶನ ಕಂಡಿದೆ.
3. 200 ದಿನ ಪೂರೈಸಿದ ಪ್ರಪ್ರಥಮ ತುಳು ಸಿನಿಮಾ ಚಾಲಿಪೋಲಿಲು
4. 5 ಸಿನಿಮಾ ಮಂದಿರದಲ್ಲಿ 75 ದಿನ , 3 ಸಿನಿಮಾ ಮಂದಿರದಲ್ಲಿ ಶತದಿನದ ಸಂಭ್ರಮ ಕಂಡಿದೆ.
5 . ಈಗ 32ನೇ ವಾರವನ್ನು ಪೂರೈಸಿರುವ ಚಾಲಿಪೋಲಿಲು ಸಿನಿಮಾ ತುಳು ಸಿನಿಮಾರಂಗದ ಎಲ್ಲಾ ದಾಖಲೆಗಳನ್ನು ಬದಿಗೆ ಸರಿಸಿದೆ. ಮುಂಬಾಯಿ, ಬೆಂಗಳೂರು,
ಮಡಿಕೇರಿಯಲ್ಲೂ ಪ್ರದರ್ಶನ ಕಂಡಿದೆ.
6. ಬೆಹರಿನ್ನಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿತು. ಮುಂದಿನ ದಿನಗಳಲ್ಲಿ ದುಬಾಯಿ, ಅಬುದಾಬಿಯಲ್ಲಿ ಪ್ರದರ್ಶನ ಕಾಣಲಿದೆ.
7. 60ಲಕ್ಷ ಲಕ್ಷ ರೂಪಾಯಿ ಬಜೆಟ್ನ ಈ ಸಿನಿಮಾ 2 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿದೆ.
8. ಈ ಸಿನಿಮಾದಲ್ಲಿ ನಟಿಸಿದ ಎಲ್ಲಾ ಕಲಾವಿದರನ್ನು ಪ್ರೇಕ್ಷಕರು ಗುರುತಿಸಿದ್ದಾರೆ. ಮುಖ್ಯ ಕಲಾವಿದರಿಗೆ ಈಗ ಬಹುಬೇಡಿಕೆ.
9. ಚಾಲಿಪೋಲಿಲು ಸಿನಿಮಾದ ಯಶಸ್ಸಿನ ಬಳಿಕ ಬೆಂಗಳೂರಿನ ಗಾಂಧಿನಗರದಲ್ಲೂ ತುಳು ಸಿನಿಮಾ ರಂಗದ ಬಗ್ಗೆ ಚರ್ಚೆ .
10. ಚಾಲಿಪೋಲಿಲು ಸಿನಿಮಾದ ಮೂಲಕ ಹೊಸ ನಿರ್ದೇಶಕರನ್ನು ಸಿನಿಮಾರಂಗಕ್ಕೆ ಪರಿಚಯಿಸಲಾಗಿದೆ.
11. ಚಾಲಿಪೋಲಿಲು ಯಶಸ್ಸಿನ ನಂತರ ಉದ್ಯಮಿ ರೋಹನ್ ಮೊಂತೆರೊ ನಿರ್ಮಾಣದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ‘ದಬಕ್ ದಬಾ ಐಸ’ ಚಿತ್ರ ತೆರೆಗೆ ಬರಲಿದೆ. ಸೆಪ್ಟಂಬರ್ನಲ್ಲಿ ಚಿತ್ರೀಕರಣ. ಆ ಸಿನಿಮಾದಲ್ಲೂ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಮುಖ್ಯ ಪಾತ್ರದಲ್ಲಿರುತ್ತಾರೆ.



