ಬಂಟ್ವಾಳ : ಓಮಾನ್ ದೇಶದ ಮಸ್ಕತ್ ಎಂಬಲ್ಲಿ ಕಳೆದ ಗುರುವಾರ ಸಂಜೆಯಷ್ಟೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಯುವಕನೋರ್ವ ದುರಂತ ಮರಣವನ್ನಪ್ಪಿದ ಘಟನೆ ಜನ ಮನಸ್ಸಿನಿಂದ ಮಾಸುವ ಮುನ್ನವೇ ತಾಲೂಕಿನ ಮತ್ತೋರ್ವ ಅವಿವಾಹಿತ ಯುವಕ ಬೆಂಗಳೂರಿನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ದಾರುಣ ಮರಣವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿರುವುದು ವರದಿಯಾಗಿದೆ.

ತಾಲೂಕಿನ ಕಡೇಶ್ವಾಲ್ಯ ನಿವಾಸಿ ಕೆ ಎಸ್ ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಮುರ್ಶದ್ ಕೆ ಎಸ್ (23) ಎಂಬಾತನೇ ಬೆಂಗಳೂರಿನಲ್ಲಿ ಮೃತಪಟ್ಟ ಯುವಕ. ಈ ಹಿಂದೆ ಕೇರಳದಲ್ಲಿ ಧಾರ್ಮಿಕ ವಿದ್ಯಾಭ್ಯಾಸದ ಜೊತೆಗೆ ಲೌಕಿಕ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದ ಮುರ್ಶದ್ ಕಳೆದ ಮೂರು ವರ್ಷಗಳ ಹಿಂದೆ ತವರಿಗೆ ಬಂದು ಪಾಣೆಮಂಗಳೂರು ಸಮೀಪದ ಆಲಡ್ಕ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ದರ್ಸ್ ನಲ್ಲಿ ಧಾರ್ಮಿಕ ವಿದ್ಯಾರ್ಜನೆಯ ಜೊತೆಗೆ ಬಂಟ್ವಾಳದ ಪದವಿ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸವನ್ನೂ ನೆರವೇರಿಸಿದ್ದ. ಕಳೆದ ವರ್ಷವಷ್ಟೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಿದ ಈತ ಅಲ್ಲಿನ ಕಿಡ್ಸ್ ವೇರ್ ಮಳಿಗೆಯೊಂದರಲ್ಲಿ ಉದ್ಯೋಗಿಯಾಗಿದ್ದ.
ಎರಡು ತಿಂಗಳ ಹಿಂದೆಯಷ್ಟೆ ಊರಿಗೆ ಬಂದು ತೆರಳಿದ್ದ ಈತ ಮಂಗಳವಾರ ನಡೆದ ವಿದ್ಯುತ್ ಅವಘಡವೊಂದರಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಮಂಗಳವಾರ ರಾತ್ರಿ ಪತ್ರಿಕೆಗೆ ಪ್ರತಿಕ್ರಯಿಸಿದ ಮೃತನ ತಂದೆ ಕೆ ಎಸ್ ಮುಹಮ್ಮದ್ ಅವರು ವಿದ್ಯುತ್ ಅಪಘಾತದಿಂದ ಮೃತಪಟ್ಟಿದ್ದಾನೆ ಎಂಬ ಸುದ್ದಿಯಷ್ಟೆ ನಮಗೆ ತಲುಪಿದ್ದು, ಇದೀಗ ಸಂಬಂಧಿಕರೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದೇವೆ. ಹೆಚ್ಚಿನ ಮಾಹಿತಿ ನಮಗೂ ತಿಳಿದಿಲ್ಲ
