ಬಂಟ್ವಾಳ:ತಾಲ್ಲೂಕಿನ ಒಟ್ಟು 57 ಗ್ರಾಮ ಪಂಚಾಯಿತಿನ ಒಟ್ಟು 837 ಸ್ಥಾನಗಳಿಗೆ ಕಳೆದ ಶುಕ್ರವಾರ ನಡೆದ ಚುನಾವಣೆಯಲ್ಲಿ ಪುರುಷರನ್ನೂ ಮೀರಿಸಿ ಮಹಿಳೆಯರಿಂದ ಮತದಾನವಾಗಿರುವುದು ಇಲ್ಲಿನ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರಕ್ಕೆ ನಿದ್ದೆಗೆಡಿಸುವಂತೆ ಮಾಡಿದೆ.
ತಾಲ್ಲೂಕಿನಲ್ಲಿ ಒಟ್ಟು 2,51,456 ಮಂದಿ ಮತದಾರರ ಪೈಕಿ 1,83,635 ಮಂದಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಶೇ.73.94 ಮತದಾನ ದಾಖಲಾಗಿದೆ.
ಇಲ್ಲಿನ ಒಟ್ಟು 1,26,118 ಮಂದಿ ಪುರುಷ ಮತದಾರರ ಪೈಕಿ 91,221 ಮಂದಿ ಹಾಗೂ ಒಟ್ಟು 1,25,338 ಮಂದಿ ಮಹಿಳಾ ಮತದಾರರ ಪೈಕಿ 92,414 ಮಂದಿ ಮತದಾನ ಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರದಂತೆ ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರು ಪುರುಷರಿಗಿಂತ ಮೇಲುಗೈ ಸಾಧಿಸಿರುವುದು ಕಂಡು ಬಂದಿದೆ.
ತಾಲ್ಲೂಕಿನಲ್ಲಿ ಒಟ್ಟು ಮಹಿಳಾ ಮತದಾರರಿಗಿಂದ ಪುರುಷ ಮತದಾರರ ಸಂಖ್ಯೆ ಒಟ್ಟು 780 ಮಂದಿ ಹೆಚ್ಚಿದ್ದರೂ ಒಟ್ಟು 1,193 ಮಂದಿ ಮಹಿಳೆಯರಿಂದ ಹೆಚ್ಚುವರಿ ಮತದಾನವಾಗಿರುವುದು ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರಕ್ಕೆ ಅಡ್ಡಿಯಾಗಿದೆ ಎನ್ನುತ್ತಿದ್ದಾರೆ.
ತಾಲ್ಲೂಕಿನ ಒಟ್ಟು 311 ಮತಗಟ್ಟೆಗಳಲ್ಲಿ ಸರಾಸರಿ ಶೇ.70ರಷ್ಟು ಮತದಾನವಾಗಿದ್ದು, ಈ ಬಾರಿ ಮಹಿಳಾ ಅಭ್ಯರ್ಥಿಗಳು ಗರಿಷ್ಟ ಸಂಖ್ಯೆಯಲ್ಲಿರುವುದೇ ಮತದಾನ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಆರಂಭದಲ್ಲಿ ಒಟ್ಟು 1,824 ಮಂದಿ ಅಭ್ಯರ್ಥಿಗಳ ಪೈಕಿ 33 ಮಂದಿ ಅವಿರೋಧ ಆಯ್ಕೆಗೊಂಡಿದ್ದಾರೆ. ಈ ಬಾರಿ ಅಮ್ಮುಂಜೆ, ಕಳ್ಳಿಗೆ, ಪೆರಾಜೆ, ಸಜಿಪಪಡು, ಸಾಲೆತ್ತೂರು, ಅರಳ, ಬರಿಮಾರು, ಮಣಿನಾಲ್ಕೂರು, ನೆಟ್ಲಮುಡ್ನೂರು, ಮಾಣಿಲ, ಮೂಡುಪಡುಕೋಡಿ, ಬೋಳಂತೂರು ಹೀಗೆ ಒಟ್ಟು 12 ಹೊಸ ಗ್ರಾಮ ಪಂಚಾಯಿತಿ ಅಸ್ತಿತ್ವಗೊಂಡ ಪರಿಣಾಮ ಅಲ್ಲಿಯೂ ಗರಿಷ್ಟ ಪ್ರಮಾಣದಲ್ಲಿ ಮತದಾನವಾಗಿರುವುದು ಕಂಡು ಬಂದಿದೆ. ಸಕರ್ಾರದ ಕಡ್ಡಾಯ ಮತದಾನ ನೆಪದಲ್ಲಿ ಅಭ್ಯರ್ಥಿಗಳೇ ಸ್ವತಃ ಮತದಾರರನ್ನು ವಿವಿಧ ವಾಹನಗಳಲ್ಲಿ ಕರೆದೊಯ್ದು ಮತದಾನ ನಡೆಸುವಲ್ಲಿ ಭಾರೀ ಶ್ರಮಿಸಿದ್ದಾರೆ ಎನ್ನುತ್ತಾರೆ ಇಲ್ಲಿನ ಮತದಾರರು.
5ರಂದು ಮತ ಎಣಿಕೆ:
ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಇದೇ 5ರಂದು ಬೆಳಿಗ್ಗೆ 8ಗಂಟೆಯಿಂದ ಮತಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಇದೀಗ ಭಾರೀ ಪೊಲೀಸ್ ಭದ್ರತೆಯೊಂದಿಗೆ ಮತಪೆಟ್ಟಿಗೆಗಳನ್ನು ಅಲ್ಲಿ ಜೋಪಾನವಾಗಿ ಇಡಲಾಗಿದೆ. ಮತಎಣಿಕೆಗೆ ಒಟ್ಟು 91 ಟೇಬಲ್ ಸಿದ್ಧಗೊಳಿಸಲಾಗಿದ್ದು, ಒಂದು ಮತಪೆಟ್ಟಿಗೆ ಮತಎಣಿಕೆಗೆ ಕನಿಷ್ಟ ಎರಡು ಗಂಟೆ ಸಮಯ ಬೇಕಾಗಬಹುದು. ಒಂದು ಮೇಜಿಗೆ ತಲಾ ಒಬ್ಬರು ಮೇಲ್ವಿಚಾರಕರು ಮತ್ತು ಇಬ್ಬರು ಸಹಾಯಕರಂತೆ ಸುಮಾರು 300ಕ್ಕೂ ಮಿಕ್ಕಿ ಮಂದಿ ಸಿಬ್ಬಂದಿಗಳಿಗೆ ಇದೇ 3ರಂದು ತರಬೇತಿ ಆಯೋಜಿಸಲಾಗಿದೆ. ಫಲಿತಾಂಶ ಪ್ರಕಟಣೆಯಲ್ಲೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ಹೀಗೆ ಮೀಸಲಾತಿ ವ್ಯವಸ್ಥೆ ಇರುವ ಸಾಧ್ಯತೆಯಿದೆ ಎಂದು ಬಂಟ್ವಾಳ ಚುನಾವಣಾಧಿಕಾರಿ ಪರಮೇಶ್ವರ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
-ಮೋಹನ್ ಕೆ.ಶ್ರೀಯಾನ್ ರಾಯಿ
