ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಲ್ಲಿ ಬಂಟ್ವಾಳ ಮಾತ್ರವಲ್ಲದೆ ಪುತ್ತೂರು ಮತ್ತು ಮಂಗಳೂರು ದಕ್ಷಿಣ (ಉಳ್ಳಾಲ) ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಒಟ್ಟು 59 ಗ್ರಾಮ ಪಂಚಾಯಿತಿ ಪೈಕಿ ಶುಕ್ರವಾರ 57 ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿದ್ದು, ಈ ಬಾರಿ ಕಳೆದ ಅವಧಿಗಿಂತಲೂ ಹೆಚ್ಚು ಅಂದರೆ ಶೇ.73.94 ಮತದಾನವಾಗಿದೆ. ಇದರಿಂದಾಗಿ ಇಲ್ಲಿನ ಪ್ರಮುಖ ರಾಜಕೀಯ ಎದುರಾಳಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭಾರೀ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ವಿಟ್ಲ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರಿದ್ದು, ಪುದು ಗ್ರಾಮ ಪಂಚಾಯಿತಿ ಅವಧಿ ಪೂರ್ಣಗೊಳ್ಳದಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆದಿಲ್ಲ. ಈ ಬಾರಿ ಚುನಾವಣಾ ಪ್ರಚಾರದ ಅಬ್ಬರ ಅಥವಾ ಗದ್ದಲ ಇಲ್ಲದಿದ್ದರೂ ಗ್ರಾಮೀಣ ಭಾಗಗಳಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಿದ್ದಾರೆ. ತಾಲ್ಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಶೇ.55.47 ಕನಿಷ್ಟ ಮತ್ತು ಪಂಜಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಶೇ.88.24 ಗರಿಷ್ಟ ಪ್ರಮಾಣದಲ್ಲಿ ಮತದಾನ ನಡೆಯುವ ಮೂಲಕ ಗಮನ ಸೆಳೆದಿದೆ.


ತಾಲ್ಲೂಕಿನಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆದಿರುವುದು ಕಂಡು ಬಂದಿದ್ದು, ಕಾಂಗ್ರೆಸ್ ಹೆಚ್ಚುವರಿ ಪಂಚಾಯಿತಿ ತನ್ನ ಹಿಡಿತಕ್ಕೆ ಬರುವ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ನಿಂದ ಬಹುತೇಕ ಪಂಚಾಯಿತಿ ಕಸಿಯಲು ಚುನಾವಣೆಯಲ್ಲಿ ಕೈಗೊಂಡ ತಂತ್ರದಿಂದ ಬರುವ ಮತಗಳ ಬಗ್ಗೆ ಬಿಜೆಪಿ ಲೆಕ್ಕಾಚಾರ ನಡೆಸುತ್ತಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಒಟ್ಟು 271 ಮಂದಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ.ಸದಸ್ಯರಿದ್ದರೆ, ಒಟ್ಟು 251 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರು. ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ಅಸ್ತಿತ್ವಗೊಂಡ ಹೊಸ 12 ಗ್ರಾಮ ಪಂಚಾಯಿತಿಗಳ ಪೈಕಿ ಒಟ್ಟು 10 ಪಂಚಾಯಿತಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲೇ ಇರುವುದು ಗಮನಾರ್ಹವಾಗಿದೆ.
ಈ ಪೈಕಿ ಏಳಕ್ಕೂ ಮಿಕ್ಕಿ ಗ್ರಾ.ಪಂ. ಬಿಜೆಪಿ ಮಡಿಲಿಗೆ ಬರುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದರೆ, ಎಲ್ಲವೂ ಕಾಂಗ್ರೆಸ್ಗೆ ಪ್ಲಸ್ ಎನ್ನುತ್ತಿದ್ದಾರೆ ಕಾಂಗ್ರೆಸ್ಸಿಗರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 39 ಗ್ರಾಮ ಪಂಚಾಯಿತಿ ಪೈಕಿ 23 ಪಂಚಾಯಿತಿ ಕಾಂಗ್ರೆಸ್ ಆಡಳಿತದಲ್ಲಿದ್ದು, 12 ಪಂಚಾಯಿತಿನಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿತ್ತು. ಇನ್ನೂ ನಾಲ್ಕು ಪಂಚಾಯಿತಿನಲ್ಲಿ ಮೀಸಲಾತಿಯಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ದೊರೆತಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಬಹುತೇಕ ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಇದರಿಂದಾಗಿ ಕೆಲವೆಡೆ ಹಾಲಿ ಸದಸ್ಯರು ‘ಕಪ್ಪೆ ಜಿಗಿತ’ ಮೂಲಕ ಪರಸ್ಪರ ಪಕ್ಷ ವಿನಿಮಯ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಕೆಲವೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ‘ವಲಸೆ ಅಭ್ಯರ್ಥಿಗಳ ವಿರುದ್ಧ ಪಕ್ಷೇತರರೂ ಸೆಣಸಾಟ ನಡೆಸಿ ಅಚ್ಚರಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಒಂದು ವರ್ಷದ ಆಡಳಿತಾವಧಿಯಲ್ಲಿ ಕೈಗೊಂಡ ಪಿಂಚಣಿ, ವಿಮೆಯಂತಹ ಕೆಲವೊಂದು ಮಹತ್ತರ ಯೋಜನೆಗಳು ಜನಸಾಮಾನ್ಯರಿಗೂ ತಲುಪಿರುವುದು ಈ ಬಾರಿ ಚುನಾವಣೆಯಲ್ಲಿ ನಮಗೆ ಅನುಕೂಲವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ‘ಅನ್ನಭಾಗ್ಯ’ ಮತ್ತಿತರ ಜನಪ್ರಿಯ ಯೋಜನೆ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಇಟ್ಟುಕೊಂಡಿರುವ ನಿಕಟ ಸಂಪರ್ಕ ನಮಗೆ ಅನುಕೂಲಕರವಾಗಿದೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.
ಈ ಹಿಂದೆ ಬಡಕಬೈಲು ಮತ್ತು ನಂದಾವರ ಪಂಚಾಯಿತಿನಲ್ಲಿ ಕೇವಲ ಎರಡು ಸ್ಥಾನ ಹೊಂದಿದ್ದ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕೂಡಾ ಈ ಬಾರಿ 16 ಗ್ರಾ. ಪಂ.ನಲ್ಲಿ ಒಟ್ಟು 52 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ನಾವೂರು ಮತ್ತು ಸಜಿಪಮುನ್ನೂರು ಗ್ರಾಮ ಪಂಚಾಯಿತಿನಲ್ಲಿ ನಿರ್ಣಾಯಕ ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯುವ ವಿಶ್ವಾಸ ಹೊಂದಿದೆ.
ಒಟ್ಟಿನಲ್ಲಿ ಗ್ರಾಮೀಣ ಭಾಗದ ಜನರೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿರುವ ಗ್ರಾಮೀಣ ಅಭ್ಯರ್ಥಿಗಳನ್ನು ಗೆಲ್ಲಿಸಲು ನಾವು ಯಾವುದೇ ರಾಜಕೀಯ ಪಕ್ಷ ಗಣನೆಗೆ ತೆಗೆದುಕೊಂಡಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ಮತದಾರ ಮಹಾಪ್ರಭು.
-ಮೋಹನ್ ಕೆ.ಶ್ರೀಯಾನ್ ರಾಯಿ


