ಬಂಟ್ವಾಳ; ಕರಾವಳಿ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಮುಂಬೈಗೆ ತೆರಳಿ ಕೇವಲ ಪತ್ರಕರ್ತನಾಗಿ ಗುರುತಿಸಿಕೊಳ್ಳದೆ ಸಾಮಾಜಿಕ, ಸಾಂಘಿಕವಾಗಿ ತೊಡಗಿಸಿಕೊಂಡು ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಂಡ ರೋನ್ಸ್ ಬಂಟ್ವಾಳ ಕರ್ನಾಟಕ-ಮಹಾರಾಷ್ಟ್ರಕ್ಕೆ ಸಾಂಸ್ಕøತಿಕ ರಾಯಭಾರಿಯಾಗಿದ್ದಾರೆ ಎಂದು ಮಂಗಳೂರು ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತ ರೋನ್ಸ್ ಬಂಟ್ವಾಳರವರ ಅಭಿನಂದನಾ ಸಮಾರಂಭದಲ್ಲಿ ಅವರು, ರೋನ್ಸ್ ಬಂಟ್ವಾಳರನ್ನು ಸನ್ಮಾನಿಸಿ ಮಾತನಾಡಿದರು.
ಅವಿಭಜಿತ ಜಿಲ್ಲೆಯ ಸಾಕ್ಷರತೆಯಿಂದ ತೊಡಗಿ ಶೈಕ್ಷಣಿಕ-ಔದ್ಯೋಗಿಕ -ವಾಣಿಜ್ಯ ರಂಗದ ಸರ್ವಾಂಗೀಣ ಅಭಿವೃದ್ದಿಗೆ ಮಾಧ್ಯಮ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದ ಡಾ.ಪೆರ್ಲ ರವರು, ರೋನ್ಸ್ ಬಂಟ್ವಾಳವರಿಗೆ ಮಾಧ್ಯಮ ಅಕಾಡೆಮಿ ನೀಡಿದ ಪ್ರಶಸ್ತಿ ಇಂತಹ ಮಾಧ್ಯಮಗಳಿಗೆ ಸಂದ ಗೌರವ ಎಂದರು. ಹೊರನಾಡ ಕನ್ನಡಿಗನಾಗಿದ್ದುಕೊಂಡು ಮುಂಬೈಯಲ್ಲಿ ಕಾರ್ಯ ನಿರ್ವಹಿಸುವ ರೋನ್ಸ್ ಬಂಟ್ವಾಳರನ್ನು ಅಭಿನಂದಿಸುವ ಮೂಲಕ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘ ತನ್ನನ್ನು ತಾನು ಗೌರವಿಸಿಕೊಂಡಿದೆ ಎಂದುಶ್ಲಾಘಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೋನ್ಸ್ ಬಂಟ್ವಾಳ, ತನ್ನ ವೃತ್ತಿ ಬದುಕಿನ ಅನುಭವಗಳನ್ನು ತೆರೆದಿಟ್ಟರು. ಪತ್ರಕರ್ತರು ಧನಾತ್ಮಕ ಚಿಂತನೆಯ ಜೊತೆಗೆ ವರ್ತಮಾನಕ್ಕೆ ಪೂರಕವಾಗಿ ಮನೋಭಾವ ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಗ್ರಾಮೀಣ ಪತ್ರಕರ್ತರು ಸರ್ಕಾರದಿಂದ ಸಿಗುವ ನ್ಯಾಯೋಚಿತ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಬೇಕಾದ ಅಗತ್ಯವಿದೆ ಎಂದರು.
ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಾನಂದ ಪೆರಾಜೆ ಅಭಿನಂದನಾ ಭಾಷಣಗೈದರು. ಕಾಲೇಜು ದಿನಗಳಿಂದಲೇ ರೋನ್ಸ್ ರವರು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. ಅದು ಅವರನ್ನು ಇಂದು ಎತ್ತರಕ್ಕೆ ಬೆಳೆಸಿದೆ. ತಾಲೂಕಿನವರೇ ಆದ ರೋನ್ಸ್ರವರನ್ನು ಅಭಿನಂದಿಸುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು.
ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಪೂವಳ ಸ್ವಾಗತಿಸಿದರು, ಕಾರ್ಯದರ್ಶಿ ರತ್ನದೇವ್ ಪೂಂಜಾಲಕಟ್ಟೆ ವಂದಿಸಿದರು. ಕೋಶಾಧಿಕಾರಿ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.








