ಬಂಟ್ವಾಳ:ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ ದಿ.ಅಮ್ಮೆಂಬಳ ಬಾಳಪ್ಪರ ಸಾಮಾಜಿಕ ಚಿಂತನೆ ವಿಶೇಷವಾಗಿದ್ದು, ಅವರು ಮಾನವೀಯ ಮೌಲ್ಯ ಮತ್ತು ಮಾನವೀಯ ಕಲ್ಯಾಣದ ಶಕ್ತಿಯಾಗಿದ್ದರು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ದಿ.ಅಮ್ಮೆಂಬಳ ಬಾಳಪ್ಪ ಅವರ ಪ್ರಥಮ ಪುಣ್ಯತಿಥಿ ಪ್ರಯುಕ್ತ ಬಿ.ಸಿ.ರೋಡಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ’ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಒತ್ತು ನೀಡಿದ ಬಾಳಪ್ಪರು ಕಾರ್ಮಿ ಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ಅವರು ತಿಳಿಸಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ, .ಜಿಲ್ಲಾ ಮೂಲ್ಯರು ಯಾನೆ ಕುಲಾಲರ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಅಳಪೆ, ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಸ್ತಿ ವಾಮನ ಶೆಣೈ ಮತ್ತಿತರರು ಶುಭ ಹಾರೈಸಿದರು.
ಪ್ರತಿಷ್ಠಾನ ಟ್ರಸ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಸ್ವಾಗತಿಸಿ, ಅಧ್ಯಕ್ಷ ಅಮ್ಮೆಂಬಳ ಆನಂದ ಪ್ರಾಸ್ತಾವಿಕ ಮಾತನಾಡಿದರು. ರಂಗ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
