ಬಂಟ್ವಾಳ :ದಾರಿಯಲ್ಲಿ ಸಿಕ್ಕಿದ ಒಂದೂವರೆ ಲಕ್ಷ ರೂಪಾಯಿ ಹಣದ ಗಂಟನ್ನು ವಾರೀಸುದಾರರಿಗೆ ಹಿಂತಿರುಗಿಸಿದ ರಿಕ್ಷಾ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದ ಘಟನೆ ಪೂಂಜಾಲಕಟ್ಟೆ ಎಂಬಲ್ಲಿಂದ ತಡವಾಗಿ ವರದಿಯಾಗಿದೆ.
ಪೂಂಜಾಲಕಟ್ಟೆ ಸಮೀಪದ ನರ್ಸಿಕುಮಾರ್ ನಿವಾಸಿ, ರಿಕ್ಷಾ ಚಾಲಕ ಸದಾಶಿವ ಪ್ರಭು ಎಂಬವರೇ ಇದ್ದುದೆಲ್ಲವನ್ನೂ ಮುಕ್ಕುವ ಇಂದಿನ ಕಾಲದಲ್ಲೂ ಒಂದೂವರೆ ಲಕ್ಷ ಹಣವನ್ನು ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆಯ ಹೃದಯ ವೈಶಾಲ್ಯತೆ ಮೆರೆದ ಮಹಾವ್ಯಕ್ತಿ. ಪೂಂಜಾಲಕಟ್ಟೆ ಪೇಟೆಯಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿರುವ ಸದಾಶಿವ ಪ್ರಭು ಕಳೆದ ಮೇ 5 ರಂದು ಬೆಳಿಗ್ಗೆ ಪೂಂಜಾಲಕಟ್ಟೆ ಪೇಟೆಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹೆದ್ದಾರಿ ಬದಿಯಲ್ಲಿ ಪ್ಲಾಸ್ಟಿಕ್ ಕಟ್ಟೊಂದನ್ನು ಕಂಡು ಕೈಗೆತ್ತಿಕೊಂಡರು. ರಿಕ್ಷಾದಲ್ಲಿ ಬಂದು ಕುಳಿತು ಕಟ್ಟನ್ನು ಬಿಡಿಸಿದಾಗ ಅದರಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣವಿತ್ತು. ಹಣದ ಕಟ್ಟಿನಲ್ಲಿ ಸಂಬಂಧಪಟ್ಟ ವ್ಯಕ್ತಿಯ ಬ್ಯಾಂಕ್ ಪಾಸ್‍ಪುಸ್ತಕವೂ ಇತ್ತು.
ಬ್ಯಾಂಕ್ ಪಾಸ್‍ಪುಸ್ತಕದ ಆಧಾರದಲ್ಲಿ ಹಣದ ವಾರೀಸುದಾರರನ್ನು ಪ್ರಭು ಹುಡುಕುತ್ತಿದ್ದ ವೇಳೆ ಸಮೀಪದಲ್ಲೇ ಪಾದರಕ್ಷೆ ರಿಪೇರಿಯ ಅಂಗಡಿಯೊಂದರಲ್ಲಿ ಪುರಿಯ ನಿವಾಸಿ ವ್ಯಕ್ತಿ ರವೀಂದ್ರ ಪೂಜಾರಿ ಎಂಬವರು ತನ್ನ ಕಳೆದು ಹೋದ ಹಣದ ಬಗ್ಗೆ ವಿಚಾರಿಸುತ್ತಿರುವುದು ಪ್ರಭು ಗಮಕ್ಕೆ ಬಂದಿದೆ. ಆ ಸಂದರ್ಭ ಸದಾಶಿವ ಪ್ರಭು ರವೀಂದ್ರ ಪೂಜಾರಿ ಅವರ ಬಗ್ಗೆ ವಿಚಾರಿಸಿ ಬ್ಯಾಂಕ್ ಪಾಸ್ ಪುಸ್ತಕದ ಆಧಾರದಲ್ಲಿ ಗುರುತು ಪತ್ತೆ ಹಚ್ಚಿ ತನಗೆ ಬೀದಿಯಲ್ಲಿ ಸಿಕ್ಕಿದ್ದ ಒಂದೂವರೆ ಲಕ್ಷ ಮೊತ್ತವನ್ನು ಅವರ ಕೈಗಿತ್ತು ಧನ್ಯರಾಗಿದ್ದಾರೆ. ಇದೀಗ ಪೂಂಜಾಲಕಟ್ಟೆ ಪೇಟೆ ಸಹಿತ ಆಸುಪಾಸಿನಲ್ಲಿ ಸದಾಶಿವ ಪ್ರಭು ಅವರ ಪ್ರಾಮಾಣಿಕತೆ ಜನಮೆಚ್ಚುಗೆಗೆ ಪಾತ್ರವಾಗಿ ಪ್ರತಿಯೋರ್ವರ ಬಾಯಲ್ಲೂ ಮೆಚ್ಚುಗೆಯ ಮಾತುಗಳಿಂದ ಪ್ರಭು ಹೆಸರು ತೇಲಾಡುತ್ತಿದೆ.

By suddi9

Leave a Reply

Your email address will not be published. Required fields are marked *