ಬಂಟ್ವಾಳ: ನಿರ್ಮಾಣಹಂತದಲ್ಲಿರುವ ಬಂಟ್ವಾಳದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಭಾಗಶಃ ಪೂರ್ಣಗೊಳ್ಳಲಿದ್ದು, ಜೂನ್ ಮೊದಲವಾರದಲ್ಲಿ ನೂತನ ಕಟ್ಟಡದ ನೆಲಅಂತಸ್ತು ಹಾಗೂ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಂಟ್ವಾಳದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಯುತ್ತಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಪರಿಶೀಲನೆ ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹಿಂದಿನ ಸರ್ಕಾರ ಈ ಆಸ್ಪತ್ರೆಗೆ ಅನುದಾನ ನೀಡಿರಲಿಲ್ಲ, ನಮ್ಮ ಸರ್ಕಾರ ಈಗಾಗಲೇ 2.21 ಕೋಟಿ ಅನುದಾನ ನೀಡಿದ್ದು, ಗುತ್ತಿಗೆದಾರರು ನೀಡಿದ ಮೊದಲ ಬಿಲ್ ನಲ್ಲಿ 37 ಲಕ್ಷ ರೂ ಬಾಕಿ ಇದೆ, ಇದರ ಪಾವತಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಮದ ಅವರು, ಕಾಮಗಾರಿ ಪೂರ್ಣಗೊಂಡಂತೆ ಗುತ್ತಿಗೆದಾರರ ಬಿಲ್ ಪಾವತಿಗೆ ಸರ್ಕಾರ ಕ್ರಮ ಜರುಗಿಸಲಿದೆ ಎಂದರು. ಇದೇ ಸಂದರ್ಭ ಗುತ್ತಿಗೆದಾರರಿಗೆ ಜೂನ್ ಮೊದಲ ವಾರದಲ್ಲಿ ಆಸ್ಪತ್ರೆಯ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ನಿಮ್ಮ ನಿಧಾನಗತಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ, ದಯವಿಟ್ಟು ಅದಕ್ಕೆ ಅವಕಾಶ ಕೊಡಬೇಡಿ ಎಂದರು. ಇದೇ ವೇಳೆ ಶವಾಗಾರದ ನಾದುರಸ್ತಿ ಬಗೆಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ನೂತನ ಆಸ್ಪತ್ರೆ ಕಟ್ಟಡದಲ್ಲಿ ಶವಾಗಾರಕ್ಕೆ ಅವಕಾಶ ಇಲ್ಲದಿರುವುದರ ಬಗ್ಗೆ ವೈಧ್ಯಾಧಿಕಾರಿಗಳು ಸಚಿವರ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆಸ್ಪತ್ರೆಯ ಸುರಕ್ಷಾ ಸಮಿತಿ ನಿಧಿಯಿಂದ ಶವಾಗಾರ ರಚನೆಗೆ ಕಾರ್ಯಯೋಜನೆ ರೂಪಿಸುವಂತೆ ವೈದ್ಯಾಧಿಕಾರಿಯವರಿಗೆ ಸೂಚಿಸಿದರು. ಅಲ್ಲದೆ ಸಿಎಸ್‍ಆರ್ ಫಂಡ್ ನಿಂದ ಆಸ್ಪತ್ರೆ ಗೆ ಆವರಣ ಗೋಡೆ ರಚಿಸುವ ಬಗ್ಗೆ ಯೋಜನೆ ರೂಪಿಸುವ ಬಗ್ಗೆ ಅಚಿವರು ಪ್ರಸ್ತಾಪಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿಖಂದರ್ ಪಾಷಾ, ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ತಾ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ಬುಡಾ ಅಧ್ಯಕ್ಷ ಪಿಯುಸ್ ರೋಡ್ರಿಗಸ್, ಪುರಸಭಾ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಪ್ರವೀಣ್ ಬಿ, ಗಂಗಾಧರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಅಬ್ಬಾಸ್ ಆಲಿ, ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಧಿಕಾ, ತಾಲೂಕು ಪ್ರಭಾರ ವೈದ್ಯಾಧಿಕಾರಿ ಡಾ.ದೀಪಾಪ್ರಭು, ಗುತ್ತಿಗೆದಾರ ನಾಗೇಶ್ ಮೊದಲಾದವರಿದ್ದರು.

By Suddi9

Leave a Reply

Your email address will not be published. Required fields are marked *