ಜನರ ನಿರೀಕ್ಷೆಯಂತೆ ಮಳೆ ಬೀಳುವ ಕಾಲ ಬದಲಾಗಿದೆ. ಮೊನ್ನೆ ಮೊನ್ನೆ ಹಿರಿಯರು, ಜ್ಯೋತಿಷ್ಯಿಗಳು ಹೇಳುತ್ತಿದ್ದ ಇಂದು ಮಳೆ ಬರುತ್ತಿದೆ, ನಾಳೆ ನೀರಾಗುತ್ತದೆ ಎಂಬ ಫಲ ಜ್ಯೋತಿಷ್ಯವಾಣಿಗಳು ಸುಳ್ಳಾಗುತ್ತಿದೆ. ಕೆಲದಿನಗಳ ಹಿಂದೆ ಒಂದೆರೆಡು ಅಕಾಲಿಕ ಮಳೆ ಬಿದ್ದ ಪರಿಣಾಮ ನೀರಿನ ಬದಲು ಮನುಷ್ಯನ ದೇಹದಿಂದ ಧಾರಾಕಾರ ಬೆವರಿಳಿಯುತ್ತಿದ್ದು ಧಗೆಯ ಉರಿಯನ್ನು ಸಹಿಸಲು ಕಷ್ಟವಾಗುತ್ತಿದ್ದರೆ ಮತ್ತೊಂದೆಡೆ ದ.ಕ.ಜಿಲ್ಲೆಯ ವಿವಿದೆಡೆ ಕುಡಿಯಲೂ ನೀರಿಲ್ಲದೆ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲದರ ಮಧ್ಯೆಯೂ ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ತಿರುಗಿಸುವ ಯೋಜನೆ ಅನುಷ್ಟಾನಗೊಳ್ಳುತ್ತಿರುವುದು ಕಂಡಾಗ ಮುಂದೇನೋ ಎಂಬ ಆತಂಕ ಮತ್ತೆ ಮತ್ತೆ ಕಾಡುತ್ತಿದೆ.
ಜಿಲ್ಲೆಯ ಮಟ್ಟಿಗೆ ಇಂದಿಗೂ ಪವಿತ್ರಳೇ ಆಗಿರುವ, ಕರಾವಳಿ ಜನತೆಯ ಉಸಿರೇ ಆಗಿರುವ, ಇಲ್ಲಿನ ರೈತಾಪಿ ವರ್ಗದ ರಕ್ಷಕಳಾಗಿರುವ ನೇತ್ರಾವತಿ ಕೆಲವರ್ಷದ ಹಿಂದೆ ತುಂಬಿ ತುಳುತ್ತಿದ್ದರೆ ಇತ್ತೀಚೆಗೆ ಆಕೆಯೂ ಬರಡಾಗತೊಡಗಿದ್ದಾಳೆ. ನದಿ ತೀರಾ ಇಂದು ಕೆಲವೆಡೆ ಮರುಭೂಮಿಯಂತೆ ಕಾಣುತ್ತಿದ್ದರೆ ನದಿ ತಳವೂ ಈಗಲೇ ಕೆಲವೆಡೆ ಹೊೈಗೆಯ ಕಡಲಷ್ಟೇ ಆಗಿ ಗೋಚರಿಸುತ್ತಿದೆ. ಪೃಕೃತಿ ಸಹಜವಾಗಿ ಹರಿಯುತ್ತಿದ್ದ ನದಿಯೂ ಈ ರೀತಿ ಮುನಿಸಿಕೊಳ್ಳಲು ಮಾನವನ ದುರಾಸೆಯೇ ಕಾರಣ. ಪರಿಸರ, ಪೃಕೃತಿಯೊಂದಿಗೆ ಮಾನವನ ಚೆಲ್ಲಾಟವೇ ಇಂದಿನ ಈ ದುಸ್ಥಿತಿಗೆ ಕಾರಣವಲ್ಲದೆ ಮತ್ತೇನೂ ಅಲ್ಲ. ನದಿಯನ್ನೇ ನಂಬಿ ಬದುಕುತ್ತಿದ್ದ ರೈತರ ಪಾಲಿಗೆ ಈಗಲೇ ಮಳೆಯೂ ಇಲ್ಲ, ಬೆಳೆಯೂ ಇಲ್ಲ, ಬೆಲೆಯೂ ಇಲ್ಲ. ಇವೆಲ್ಲದರ ಪರಿಣಾಮ ನೆಲೆಯೂ ಇಲ್ಲದ ಸ್ಥಿತಿ.
2015ರ ಮೇ ತಿಂಗಳಿನಲ್ಲೇ ದ.ಕ.ಜಿಲ್ಲೆಯ ಪರಿಸ್ಥಿತಿ ಈಗಿರುವಾಗ ಮುಂದೆ ಜಿಲ್ಲೆಯ ಏಕೈಕ ನೀರಿನ ಮೂಲವಾದ ನೇತ್ರಾವತಿ ನದಿಯನ್ನು ತಿರುಗಿಸುವ ಯೋಜನೆ ಪೂರ್ಣಗೊಂಡ ಬಳಿಕದ ಜಿಲ್ಲೆಯ ಸ್ಥಿತಿ ಹೇಗಿರಬಹುದು? ಪೃಕೃತಿ ಸಹಜ ವ್ಯವಸ್ಥೆಯ ವಿರುಧ್ದವಾಗಿ ನಡೆಯುವ ಈ ಯೋಜನೆಯಿಂದ ತಾಯಿ ನೇತ್ರಾವತಿ ಸಂಪೂರ್ಣ ಬರಡಾದರೆ? ಇತ್ತ ದ.ಕ.ಜಿಲ್ಲೆಗೂ ಅತ್ತ ಕೋಲಾಟಕ್ಕೂ ನೀರಿಲ್ಲದಂತೆ ಸರಕಾರದ ಕೋಟಿಕಟ್ಟಲೆ ಹಣ ಮಣ್ಣು ಪಾಲಾದರೆ? ಈಗ ಜಿಲ್ಲೆಯಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುವ ಧರ್ಮ ಧರ್ಮಗಳ ಘರ್ಷಣೆಯು ರೂಪಾಂತರಗೊಂಡು ಮುಂದೆ ನೀರಿಗಾಗಿ ಯುದ್ಧ ನಡೆದರೆ?
ಇವೆಲ್ಲವೂ ನಡೆದರೆ ಅಚ್ಚರಿ ಪಡಬೇಕಾಗಿಲ್ಲ. ಅಚ್ಚರಿ ಪಡುವುದಿದ್ದರೆ ಈ ಮೊದಲೇ, ಯಾವತ್ತೋ ಎಲ್ಲರೂ ಅಚ್ಚರಿಗೊಳಗಾಗಬೇಕಿತ್ತು. ಎಲ್ಲರೂ ಸಂಘಟಿತರಾಗಬೇಕಿತ್ತು. ನದಿ ತಿರುವು ಯೋಜನೆಯನ್ನು ತಡೆದು ಜಿಲ್ಲೆಯನ್ನು ಉಳಿಸುವ ಸಂಕಲ್ಪ ತೊಡಬೇಕಾಗಿತ್ತು.
ಹಾಗೆಂದು ರೈತಾಪಿ ವರ್ಗದ ಬದುಕಿನ ಅವಿಭಾಜ್ಯವೇ ಆಗಿದ್ದ ನೇತ್ರಾವತಿಯ ನೀರನ್ನು ಸಂಪೂರ್ಣವಾಗಿ, ತಮ್ಮ ಹಕ್ಕಾಗಿ ರೈತರು ಹಾಗೂ ನದಿ ತೀರದ ಜನರು ಬಳಸಿಕೊಳ್ಳಲು ನಮ್ಮ ವ್ಯವಸ್ಥೆ ಇಂದಿನಿಂದಲೂ ಬಿಡಲೇ ಇಲ್ಲ. ರೈತರು ಸೃಷ್ಠಿ ಮೂಲ ಸಂಪತ್ತಾದ ನೀರನ್ನು ಬಳಕೆ ಮಾಡಲು ಹತ್ತಾರು ನಮೂನೆಯ ಪರವಾನಿಗೆಯ ಕಟ್ಟುಪಾಡುಗಳನ್ನು ವಿಧಿಸಿ ರೈತರ ನೀರಿನ ಹಕ್ಕನ್ನು ಆಗಾಗ್ಗೆ ಕಸಿಯುತ್ತಿದ್ದ ಎಲ್ಲಾ ಸರಕಾರಗಳು ಅದೇ ನೀರನ್ನು ನಗರ ಪ್ರದೇಶದ ಉಧ್ಯಮಗಳಿಗೆ ನಿಯಮ ಮೀರಿಯೂ ಸರಬರಾಜು ಮಾಡುತ್ತಿರುವುದು ಗುಟ್ಟೇನು ಅಲ್ಲ. ನೇತ್ರಾವತಿ ನೀರನ್ನು ಬಳಸಿ ಶಾಶ್ವತವಾದ ಕುಡಿಯವ ನೀರಿನ ಯೋಜನೆ ಪರಿಣಾಮಕಾರಿಯಾಗಿ ಈ ಮೊದಲೇ ರೂಪುಗೊಳ್ಳುತ್ತಿದ್ದರೆ ನದಿ ತೀರದ ಬಂಟ್ವಾಳದ ಜನತೆಯ ನೀರಿನ ಸಮಸ್ಯೆಯನ್ನಾದರೂ ಎಂದೋ ಪರಿಹರಿಸಬಹುದಿತ್ತು. ಅಂತಹ ಯಾವುದೇ ಯೋಜನೆ ಇನ್ನೂ ಅನುಷ್ಠಾನವಾಗದ ಕಾರಣವಾಗಿಯೇ ಇಂದಿಗೂ ಬಂಟ್ವಾಳ ಸಹಿತ ಜಿಲ್ಲೆಯ ವಿವಿದೆಡೆ ಕುಡಿಯವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಆದರೂ ಜಿಲ್ಲೆಯ ಜನತೆಯ ನೀರಿನ ಹಕ್ಕಾದ ನೇತ್ರಾವತಿಯ ಒಡಲನ್ನೇ ಬಗೆದು ಮತ್ತೊಂದೆಡೆ ಉಣಿಸಲು ಯಾಕಿಷ್ಟು ಅವಸರವೂ ಅರ್ಥವಾಗದಂತಿದೆ.
ಹೌದು, ಈಗಾಗಲೇ ದ.ಕ. ಜಿಲ್ಲೆಯ ಜನತೆ ನೀರಿಗಾಗಿ ಹಾಹಾಕಾರ ಎಬ್ಬಿಸುತ್ತಿದ್ದಾರೆ. ನೇತ್ರಾವತಿ ನದಿ ತಿರುಗಿಸುವ ಯೋಜನೆಯ ವಿರುದ್ಧ ಮತ್ತಷ್ಠು ಆಕ್ರೋಶಿತರಾಗಿದ್ದಾರೆ. ಉಂಡ ಮನೆಗೇ ದ್ರೋಹ ಬಗೆಯುವ ಸ್ವಾರ್ಥ ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈಗಾಗಲೇ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವತ, ಎಂ.ಎಸ್.ಇ.ಝಡ್. ಸಹಿತ ಹಲವಾರು ಕಂಪನಿಗಳು ಜಿಲ್ಲೆಗೆ ಮಾರಕವಾಗಿ ಕಾಲಿಟ್ಟಂತೆ ಇದೀಗ ನೇತ್ರಾವತಿ ನದಿ ತಿರುವು ಯೋಜನೆಯು ನೀರಿನ ಸಮಸ್ಯೆಯ ಕರಾಳ ಮುಖವನ್ನು ತೆರೆದಿಡಲು ಸಜ್ಜಾಗುತ್ತಿರುವುದು ಜನತೆಯ ಆತಂಕವನ್ನು ಇನ್ನಷ್ಟು ಹೆಚ್ಚಿದೆ. ಜಿಲ್ಲೆಯ ಕೃಷಿಕರ ಪಾಲಿನ ಆಶಾಕಿರಣವಾಗಿ, ಆ ಮೂಲಕ ಜಿಲ್ಲೆಯ ಜನತೆಯ ಜಾನಪದ, ಸಂಸ್ಕøತಿಯ ತಾಯಿ ಬೇರು ಆಗಿರುವ ನೇತ್ರಾವತಿಯ ತಿರುವು ಯೋಜನೆಗೆ ಸಾಕಷ್ಟು ಪಂಚಾಯತು ವಿರೋಧ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಿತ್ತು. ಯೋಜನೆ ಕೈ ಬಿಡಲು ಒತ್ತಾಯಿಸಿ ಹಲವು ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿತ್ತು. ದ.ಕ.ಜಿಲ್ಲೆ ಬಂದ್ ಕೂಡಾ ಆಯಿತು. ಆದರೂ ಇದ್ಯಾವುದೂ ಜಿಲ್ಲೆಯ ಜನಪ್ರತಿನಿಧಿಗಳನ್ನು ತಟ್ಟಲಿಲ್ಲ, ಜಿಲ್ಲೆಯ ಕೃಷಿಕರು, ಕಾರ್ಮಿಕರು ಪರವಾಗಿನ ಕೂಗುಗಳಿಗೆ ಅವರ ಹೃದಯ ಕರಗಲಿಲ್ಲ. ಅದ್ದರಿಂದ ಯಾವುದೇ ಪ್ರತಿಭಟನೆ ಪ್ರಯೋಜನಕಾರಿಯಾಗಿಲ್ಲ. ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಮುಂದೆ ಎದುರಾಗುವ ಅಪಾಯದ ಭೀತಿ ದೂರವಾಗಿಲ್ಲ.
ಯಾರ ಯೋಜನೆ ಇದು?:
ಕೋಲಾರಕ್ಕೆ ನೀರು ಪೂರೈಕೆ ಮಾಡುವ ನೆಪದಲ್ಲಿ ಬೆಂಗಳೂರಿನ ಕಂಪೆನಿಗಳಿಗೂ ನೀರುಣಿಸಲು ಅಂದು ಕೇಂದ್ರದ ಇಂಧನ ಸಚಿವರೂ, ಸಂಸದರೂ ಆಗಿದ್ದ ವೀರಪ್ಪ ಮೊೈಲಿ ಅವರು ರೂಪಿಸಿದ ಯೋಜನೆ ಇದು. ಇವರ ಜತೆಯಲ್ಲಿ ಕರಾವಳಿ ಮೂಲದ ರಾಜಲಾರಣಿಗಳೇ ಇದಕ್ಕೆ ಬೆಂಬಲವಾಗಿ ನಿಂತಿರುವುದು ಇ ಯೋಜನೆಯ ಮತ್ತೊಂದು ದುರಂತ. ಈ ಯೋಜನೆ ಅನುಷ್ಟಾನವಾಗುವಾಗ 40 ಸಾವಿರ ಕೋಟಿ ರೂ. ವೆಚ್ಚ ತಲುಪಬಹುದು ಎಂದು ಒಂದು ಅಂದಾಜು. ಆದರೆ ಕೋಲಾರ ಮೊದಲಾದ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಕೆರೆಗಳ ಒತ್ತುವರಿ ತಡೆ, ನದಿ ಮರಳುಗಾರಿಕೆಗೆ ತಡೆ, ಅಂತರ್ಜಲ ಮಟ್ಟ ಕುಸಿತ ತಡೆ ಮೊದಲಾದ ಕ್ರಮಗಳನ್ನು ಕೈಗೊಂಡಲ್ಲಿ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ಆ ಭಾಗದ ಜನರಿಗೆ ನೀರು ಒದಗಿಸಲು ಸಾಧ್ಯ ಎಂಬುವುದು ಈ ರಾಜಕಾರಣಿಗಳಿಗೆ ಯಾಕೆ ಅರ್ಥವಾಗಿಲ್ಲವೋ ಗೊತ್ತಿಲ್ಲ. ನೀರು ಸಿಗುತ್ತದೆ ಎಂಬ ಯಾವುದೇ ವೈಜ್ನಾನಿಕ ಆಧಾರಗಳಿಲ್ಲದ ಈ ಯೋಜನೆಯೇ ಬೇಕು ಎಂಬ ಹಠ ಇವರಿಗೆ ಯಾಕೋ ಗೊತ್ತಾಗುತ್ತಿಲ್ಲ.
ಎಷ್ಟೋ ವರ್ಷಗಳ ಹಿಂದಿದ್ದ ನೀರಿನ ಹರಿವಿನ ಮಟ್ಟವನ್ನೇ ಅಂದಾಜಿಸಿ ಈ ಯೋಜನೆ ವರದಿ ತಯಾರಿಸಲಾಗಿದೆ. ಜಿಲ್ಲೆಯಲ್ಲಿ ನೇತ್ರಾವತಿ ನದಿಯ ನೀರಿನ ಹರಿವು ಕುರಿತು ಸುಳ್ಳು ಅಂಕಿ ಅಂಶ ನೀಡಲಾಗಿದೆ. ಜಗತ್ತಿನ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಪಶ್ಚಿಮ ಘಟ್ಟ ನಾಶ, ಅರಣ್ಯ ನಾಶ ಮೊದಲಾದ ಅಂಶ ಮರೆಮಾಚಲಾಗಿದೆ. ನದಿ ತಿರುವು ಯೋಜನೆಯಿಂದ ಜಿಲ್ಲೆಯ ಜನಜೀವನದ ಮೇಲಾಗುವ ಮಾರಕ ಪರಿಣಾಮದ ಬಗೆಗಿನ ವಿಷಯಗಳನ್ನು ಕೈಬಿಡಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಪರಮಶಿವಯ್ಯ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದಾಗ ಪರಿಸರ ವಾದಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಯೋಜನೆ ವಿರೋಧಿಸಿ ಮಂಗಳೂರಿನಲ್ಲಿ ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ನೇತೃತ್ವದಲ್ಲಿ ಕರಾವಳಿ ಹಾಗೂ ಸಮಗ್ರ ಮಲೆನಾಡು ಹಿತರಕ್ಷಣಾ ವೇದಿಕೆ ರಚಿಸಲಾಗಿತ್ತು. 2009ರ ಡಿಸೆಂಬರ್ನಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಸಹಿತ ಜಿಲ್ಲೆಯಲ್ಲಿ ನಡೆದ ಬಹುತೇಕ ಸಮ್ಮೇಳನ, ಸಮಾವೇಷಗಳಲ್ಲಿ ಯೋಜನೆಯನ್ನು ಬಲವಾಗಿ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಸ್ವಲ್ಪ ಕಾಲ ಮೌನವಹಿಸಿದ ಸರಕಾರ ಇದೀಗ ನೇತ್ರಾವತಿ ನದಿ ತಿರುವು ಯೋಜನೆಗೆ ಪ್ರಾರಂಭಿಕ ಹಂತಕ್ಕೆ ರೂ. 200 ಕೋಟಿ ಮೀಸಲಿಟ್ಟಿರುವುದು ಯೋಜನೆಯ ಬಗ್ಗೆ ಮತ್ತೆ ಚರ್ಚೆಗೆ ವೇದಿಕೆಯಾಗಿದೆ.
ಶಿಲಾನ್ಯಾಸ ಆಗಿದೆ:
ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಗೆ ಚಿಕ್ಕ ಬಳ್ಳಾಪುರದಲ್ಲಿ ಮುಖ್ಯಮಂತ್ರಿಗಳು ಶಿಲಾನ್ಯಾಸ ಮಾಡಿದ್ದಾರೆ. ಅದ್ದರಿಂದ ಯೋಜನೆಗೆ ಅಧೀಕೃತ ಚಾಲನೆ ದೊರೆತಂತಾಗಿದೆ. ಯೋಜನಾ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಯೋಜನೆಗಾಗಿ ಒಂದೇ ಒಂದು ಮರ ಕಡಿಯುವುದಿಲ್ಲ ಎಂದು ಭರವಸೆ ನೀಡಿದ್ದ ಸರಕಾರ ಅದಕ್ಕಾಗಿ ಇದೀಗ ಸಾಲು ಸಾಲು ಮರಗಳನ್ನು ನಿರ್ದಾಕ್ಷಿಣ್ಯದಿಂದ ಕಡಿದು ಹಾಕುತ್ತಿದೆ.
ಏನಿದು ನೇತ್ರಾವತಿ ತಿರುವು:
ಬರಪೀಡಿತ ಜಿಲ್ಲೆಗಳ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು ನೇತ್ರಾವತಿ ನದಿ ತಿರುವು ಯೋಜನೆಯನ್ನು ರೂಪಿಸಲಾಗಿದೆ. ನೇತ್ರಾವತಿ ನದಿಯಿಂದ ಪ್ರತಿವರ್ಷ 464.62 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿದೆ. ಈ ಪೈಕಿ 142.46 ಟಿಎಂಸಿ ನೀರನ್ನು ಪಶ್ಚಿಮ ಘಟ್ಟದಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡಿ ಬಯಲು ಸೀಮೆಯ 57 ತಾಲ್ಲೂಕುಗಳಿಗೆ ಸರಬರಾಜು ಮಾಡುವುದು, ಉಪನದಿಗಳ ಉಗಮ ಸ್ಥಾನದ ಸಮೀಪ ಅಲ್ಲಲ್ಲಿ ನೀರು ತಡೆದು 36 ಜಲಾಶಯಗಳನ್ನು ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಎರಡು ಕಾಲುವೆಗಳು ನಿರ್ಮಾಣವಾಗಲಿದ್ದು, ಒಂದನೇ ಕಾಲುವೆ ಮೂಲಕ 90.73 ಟಿಎಂಸಿ ನೀರನ್ನು ಪಶ್ಚಿಮದಿಂದ ಪೂರ್ವಕ್ಕೆ ಹರಿಸಿ ಬಯಲು ಸೀಮೆಯ 7 ಜಿಲ್ಲೆಗಳ 40 ಬರಪೀಡಿತ ತಾಲ್ಲೂಕುಗಳಿಗೆ ಸಾಗಿಸಲಾಗುತ್ತದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ನಗರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳಿಗೆ ನೇರವಾಗಿ ದೇವನಹಳ್ಳಿ ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಿಗೆ ಪೈಪ್ ಮೂಲಕ ತಲುಪಿಸಲಾಗುತ್ತದೆ. ಇದರಲ್ಲಿ 8684 ಹಳ್ಳಿಗಳಿಗೆ ನೀರು ಸಿಗಲಿದ್ದು, 1.08 ಕೋಟಿ ಜನರಿಗೆ, 1.02 ಕೋಟಿ ಜಾನುವಾರುಗಳಿಗೆ ಪ್ರಯೋಜನ ವಾಗಲಿದೆ. 2ನೇ ಹಂತದಲ್ಲಿ ಪಶ್ಚಿಮದಿಂದ ಉತ್ತರಕ್ಕೆ ನೀರು ಹರಿಸಿ 51.70 ಟಿಎಂಸಿ ನೀರನ್ನು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಬಳ್ಳಾರಿ ಜಿಲ್ಲೆಗಳಿಗೆ ಒದಗಿಸಲಾಗುವುದು ಎಂಬುದು ಈ ಯೋಜನೆಯ ವರದಿ ತಯಾರಿಯ ರೂವಾರಿ ಪರಮಶಿವಯ್ಯ ಅವರ ಲೆಕ್ಕಾಚಾರವಾಗಿದೆ. ಆದರೆ ಈ ವರದಿ ಎಷ್ಟು ಫಲಕಾರಿಯಾಗಲಿದೆಯೋ ನಿರೀಕ್ಷೆಯಂತೆ ಎಲ್ಲವೂ ಸುಗಮವಾಗಿ ನಡೆಯಲಿದೆಯೋ ಎಂಬುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ.
ಗೋಪಾಲ ಅಂಚನ್
